ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಂಠಿಗೆ ‘ಕೊಳೆ ರೋಗ’ ಕಾಟ

ಅಧಿಕ ಮಳೆಯಿಂದ ಬೆಳೆಗಳಿಗೆ ಹಾನಿ; ರೈತರಲ್ಲಿ ಆತಂಕ
Last Updated 26 ಸೆಪ್ಟೆಂಬರ್ 2021, 4:08 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ಈ ಭಾಗದಲ್ಲಿ ರೈತರು ಬೆಳೆದ ಶುಂಠಿಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಇದರಿಂದ ಬೆಳೆಯು ಸಂಪೂರ್ಣವಾಗಿ ಹಾಳಾಗಿದ್ದು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಇಲ್ಲಿನ ರೈತ ಶ್ರವಣಕುಮಾರ ಅವರು ತಮ್ಮ 5 ಎಕರೆ ಪ್ರದೇಶದಲ್ಲಿ ಪ್ರತಿ ಕ್ವಿಂಟಾಲ್ ಗೆ ₹ 5 ಸಾವಿರದಂತೆ 40 ಕ್ವಿಂಟಾಲ್ ಶುಂಠಿ ಬೀಜ ಬಿತ್ತನೆ ಮಾಡಿದ್ದಾರೆ. ‘ವಿವಿಧ ಬಗೆಯ ಔಷಧಗಳ ಸಿಂಪಡಣೆ ಸೇರಿದಂತೆ ಒಟ್ಟು₹ 7 ಲಕ್ಷ ಖರ್ಚಾಗಿದೆ. ಆದರೆ ರೋಗ ಕಾಣಿಸಿಕೊಂಡಿದ್ದರಿಂದ ಇಳುವರಿ ಕಡಿಮೆಯಾಗುವ ಆತಂಕ ಕಾಡುತ್ತಿದೆ’ ಎಂದು ಅವರು ತಿಳಿಸಿದರು.

‘ಶುಂಠಿಗೆ ತಗುಲಿರುವ ಕೊಳೆ ರೋಗಕ್ಕೆ ದುಬಾರಿ ಬೆಲೆಯ ಕ್ವಿನಾಲ್ ಫಾಸ್ಟ್, ಮಾನೋಕ್ಟೇರಿ ಫಾಸ್ಟ್ಲಿಂಡನ್ ಕೀಟನಾಶಕ ಸಿಂಪಡಿಸಲಾಗಿದೆ. ಆದರೆ, ಮಳೆ ಬಿಡುವು ನೀಡದೆ ಸುರಿಯುತ್ತಿರುವ ಕಾರಣ ಕೀಟನಾಶಕ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ.ಈ ರೋಗದ ಬಾಧೆಯಿಂದ ಶುಂಠಿಯ ಗಡ್ಡೆ ಬೆಳವಣಿಗೆ ಆಗುತ್ತಿಲ್ಲ.ಇದರಿಂದ ದಿಕ್ಕು ತೋಚದಂತಾಗಿದೆ’ ಎಂದು ಅಸಹಾಯಕತೆ ಹೊರಹಾಕಿದರು.

‘ಪ್ರತಿ ವರ್ಷವೂ ಶುಂಠಿಗೆ ಉತ್ತಮ ಬೆಲೆ ಇರುತ್ತದೆ. ಈ ಬಾರಿಯೂ ಉತ್ತಮ ಬೆಲೆ ಇದೆ. ಹುಲುಸಾಗಿ ಬೆಳೆದ ಶುಂಠಿ ಉತ್ತಮ ಇಳುವರಿ ನೀಡುವ ಮೂಲಕ ಲಾಭ ತಂದು ಕೊಡಬಹುದು ಅಂದುಕೊಂಡಿದ್ದೇ.ಆದರೆ ಕೊಳೆ ರೋಗದಿಂದ ಬೆಳೆ ಹಾಳಾಗಿ ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

‘ಶುಂಠಿ ಮಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ರೋಗ ನಿಯಂತ್ರಣಕ್ಕಾಗಿ ರಿಡೋಮಿಲ್ ಅನ್ರೆಡ್ 2 ಮಿ.ಗ್ರಾಂ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಕೊಳೆರೋಗ ಬಂದ ಗಿಡದ ಬುಡದಲ್ಲಿ ಹಾಕಬೇಕು. ಉಳಿದೆಡೆ ಬ್ಲೈಟಾಕ್ಸ್ ಕಾಪರ್ ಆಕ್ಸಿಕ್ಲೋರೈಡ್ 3 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಹಾಕಿ ಹೊಲದಲ್ಲಿನ ಶುಂಠಿ ಗಡ್ಡೆಯ ಬುಡಕ್ಕೂ ಸಿಂಪಡಿಸಬೇಕು. ಇದರಿಂದ ರೋಗ ನಿಯಂತ್ರಿಸಬಹುದು’ ಎನ್ನುತ್ತಾರೆ ಕೃಷಿ ಹಾಗೂ ವಿಜ್ಞಾನಿ ಡಾ.ಮಲ್ಲಿಕಾರ್ಜುನ ನಿಂಗದಳ್ಳಿ.

‘ಕೊರೊನಾ ಹರಡುವಿಕೆಯಿಂದ ಕೂಲಿಗಳ ಕೊರತೆಯುಂಟಾಗಿದೆ. ಹೀಗಾಗಿ ಕೂಲಿಗಳಿಗೆದುಪ್ಪಟ್ಟು ಹಣ ನೀಡಲಾಗುತ್ತಿದೆ. ಅಲ್ಲದೇ ರೈತರು ಸಾಲ ಮಾಡಿ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಕೊಳೆರೋಗ ನಿಯಂತ್ರಣಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅಲ್ಲದೇ ಕೊಳೆಯಿಂದ ಬೆಳೆ ನಷ್ಟವಾದರೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಅಖಂಡ ಕರ್ನಾಟಕ ಹಸಿರು ಸೇನೆ ಗೌರವಾಧ್ಯಕ್ಷ ನಿರ್ಮಲಕಾಂತ ಪಾಟೀಲ ಒತ್ತಾಯಿಸಿದ್ದಾರೆ.

*ಕಳೆದ ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಸಮೀಕ್ಷೆ ನಡೆಸಿ ರೈತರಿಗೆ ಹೆಚ್ಚಿನ ಪರಿಹಾರ ದೊರೆಯುವಂತೆ ಮಾಡಬೇಕು

– ಮಲ್ಲಿಕಾರ್ಜುನ ಪಾಟೀಲ ಮುಗನೂರ, ಪ್ರಧಾನ ಕಾರ್ಯದರ್ಶಿ,ಕಾಂಗ್ರೆಸ್ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT