ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಟಾಪರ್‌ಗಳಿಗೆ ₹11 ಸಾವಿರ ಬಹುಮಾನ

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಘೋಷಣೆ
Last Updated 11 ಆಗಸ್ಟ್ 2020, 16:35 IST
ಅಕ್ಷರ ಗಾತ್ರ

ಬೀದರ್‌: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಗದು ಬಹುಮಾನ ವಿತರಿಸಲಿದ್ದಾರೆ.

‘ಜಿಲ್ಲಾ ಟಾಪರ್‌ಗಳಿಗೆ ಪ್ರಥಮ ಬಹುಮಾನವಾಗಿ ₹ 11 ಸಾವಿರ, ದ್ವಿತೀಯ ಬಹುಮಾನ ₹ 7 ಸಾವಿರ ಹಾಗೂ ತೃತೀಯ ಬಹುಮಾನ ₹ 5 ಸಾವಿರ, ತಾಲ್ಲೂಕು ಟಾಪರ್ಸ್‍ಗಳಿಗೆ ಪ್ರಥಮ ಬಹುಮಾನವಾಗಿ ₹ 7 ಸಾವಿರ, ದ್ವಿತೀಯ ಬಹುಮಾನ ₹ 5 ಸಾವಿರ ಹಾಗೂ ತೃತಿಯ ಬಹುಮಾನ ₹ 2,500 ತಮ್ಮ ಸಂಬಳದಿಂದ ನಗದು ರೂಪದಲ್ಲಿ ನೀಡಿ, ಶಾಲು ಮತ್ತು ಫಲಪುಷ್ಪಗಳಿಂದ ಸನ್ಮಾನಿಸಲಾಗುವುದು’ ಎಂದು ಪ್ರಭು ಚವಾಣ್ ಘೋಷಣೆ ಮಾಡಿದ್ದಾರೆ.

‘ಹಿಂದೆ ಶಾಸಕರಾಗಿದ್ದಾಗ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ವೃದ್ಧಿಸಿ, ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುತ್ತ ಬಂದಿದ್ದೇನೆ. ಜಿಲ್ಲೆಯ ಮಹಾಜನತೆಯ ಆಶೀರ್ವಾದಿಂದ ಸಚಿವ ಸ್ಥಾನ ಸಿಕ್ಕಿರುವುದರಿಂದ ಈ ಬಾರಿ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲು ನಿರ್ಧರಿಸಿದ್ದೇನೆ’ ಎಂದು ಸಚಿವರು ತಿಳಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಕರಿಗೂ ಸನ್ಮಾನಿಸುವ ಯೋಜನೆ ರೂಪಿಸಿದ್ದೇನೆ’ ಎಂದು
ಹೇಳಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಹರ್ಷ: ಕೋವಿಡ್ ಸೋಂಕು ಭೀತಿಯ ನಡುವೆಯೂ ಜಿಲ್ಲೆಯ ವಿದ್ಯಾರ್ಥಿಗಳು ಸುರಕ್ಷತೆಯಿಂದ ಪರೀಕ್ಷೆ ಎದುರಿಸಿ ಹಿಂದೆಂದಿಗಿಂತಲೂ ಉತ್ತಮ ಸಾಧನೆ ತೋರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಪ್ರತಿ ಸಲ ಕಡೆಯ ಸ್ಥಾನದಲ್ಲಿರುತ್ತಿದ್ದ ಜಿಲ್ಲೆಯು ಈ ಬಾರಿ ಸುಧಾರಣೆ ಕಂಡಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು 29ರಿಂದ 24ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಪಿಯುಸಿಯಲ್ಲಿಯೂ ಈ ವರ್ಷ ಹದಿನೆಂಟನೇಯ ಸ್ಥಾನಕ್ಕೇರಿರುವುದು ಸಂತಸದ ಸಂಗತಿ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳಿಗೆ ಸೂಚನೆ: ‘ಈ ಬಾರಿಯ ಫಲಿತಾಂಶ ಇನ್ನು ಹೆಚ್ಚಿನ ಸ್ಥಾನ ಬರಬಹುದೆಂಬ ನಿರೀಕ್ಷೆ ಹೊಂದಿದ್ದೆ. ಆದರೂ ಆಶಾದಾಯಕ ಫಲಿತಾಂಶ ಬಂದಿದೆ. ಮುಂದಿನ ದಿನಗಳಲ್ಲಿ ಬೀದರ ಜಿಲ್ಲೆಯು ಟಾಪ್ 10 ಜಿಲ್ಲೆಗಳ ಪಟ್ಟಿಯಲ್ಲಿ ಇರಬೇಕು ಎನ್ನುವ ಸದಾಶಯ ಹೊಂದಿದ್ದೇನೆ’ ಎಂದು ತಿಳಿಸಿದ್ದಾರೆ.

‘ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಇನ್ನಿತರ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ಸಚಿವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT