ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯಕ್ಕೆ ಡಾ.ಸವದತ್ತಿಮಠ ವಿಶೇಷ ಕೊಡುಗೆ

75ನೇ ಜನ್ಮದಿನಾಚರಣೆ ಪ್ರಯುಕ್ತ ‘ಸಂಪನ್ನ’ ಅಭಿನಂದನಾ ಗ್ರಂಥ ಬಿಡುಗಡೆ ನಾಳೆ
Last Updated 23 ಜೂನ್ 2018, 11:39 IST
ಅಕ್ಷರ ಗಾತ್ರ

ಬಸವಕಲ್ಯಾಣ: ಹಿರಿಯ ಸಾಹಿತಿ, ವಿದ್ವಾಂಸ ಡಾ.ಸಂಗಮೇಶ ಸವದತ್ತಿಮಠ ವಚನ ಸಾಹಿತ್ಯವನ್ನೇ ಕಾರ್ಯಕ್ಷೇತ್ರವಾಗಿಸಿಕೊಂಡು ಶರಣರ ಸಾವಿರಾರು ವಚನಗಳನ್ನು ಸಂಶೋಧಿಸಿ, ಪರಾಮರ್ಶಿಸಿ 15 ಸಂಪುಟಗಳಲ್ಲಿ ಪ್ರಕಟಿಸಿ ಎಲ್ಲೆಡೆ ಪಸರಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿರುವ ಕೊಡುಗೆಯನ್ನ ಪರಿಗಣಿಸಿ 75ನೇ ಜನ್ಮದಿನದ ಪ್ರಯುಕ್ತ ಜೂನ್ 25 ರಂದು ಮಠದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿ ’ಸಂಪನ್ನ' ಅಭಿನಂದನಾ ಗ್ರಂಥ ಸಮರ್ಪಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಮುರುಗೋಡ ಡಾ.ಸಂಗಮೇಶರ ಹುಟ್ಟೂರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಹಿರಿಯ ಮತ್ತು ಕಿರಿಯ ಸಾಹಿತಿಗಳನ್ನು ಪ್ರೋತ್ಸಾಹಿಸಿ, ಬೆಳಕಿಗೆ ತಂದಿದ್ದಾರೆ. ತಾಲ್ಲೂಕಿನ ಹಾರಕೂಡ ಹಿರೇಮಠದೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡು ಇಲ್ಲಿನ ಸಾಹಿತ್ಯಿಕ ಚಟುವಟಿಕೆಗಳಿಗೆ ನೀರೆರೆದು ಪೋಷಿಸಿದ್ದಾರೆ.

ಡಾ.ಸಂಗಮೇಶ ಸವದತ್ತಿಮಠ ಅವರದ್ದು ಬಹು ಆಯಾಮದ ವ್ಯಕ್ತಿತ್ವ. ಪ್ರಾಧ್ಯಾಪಕ, ಭಾಷಾವಿಜ್ಞಾನಿ, ಶಿಕ್ಷಣತಜ್ಞ, ಸಂಶೋಧಕ, ಕವಿ, ಪತ್ರಕರ್ತ, ವಿಮರ್ಶಕ, ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ. 120ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸುವುದರ ಜೊತೆಗೆ ಅವರೇ ಸಿದ್ಧಪಡಿಸಿದ ವರ್ಣನಾತ್ಮಕ ವಚನ ಪದಕೋಶ ಅತ್ಯಮೂಲ್ಯವಾದದ್ದು. `ಭಾಷಾ ವ್ಯಾಸಂಗ'ದಂಥ ಹಲವು ಕೃತಿಗಳನ್ನು ರಚಿಸಿ ಭಾಷಾಶಾಸ್ತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. `ಸಂಶೋಧನಾ ವ್ಯಾಸಂಗ' ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಯುವ ಸಂಶೋಧಕರಿಗೆ ಮಾರ್ಗದರ್ಶನ ನೀಡಿದ್ದಾರೆ.

ಕೊರಚ, ಎಳವ ಭಾಷೆಗಳನ್ನು ಪತ್ತೆ ಮಾಡಿದ್ದಾರೆ. ಉತ್ತರ ಕರ್ನಾಟಕದ ವಿಶಿಷ್ಟವಾದ ಯಕ್ಷಗಾನ ಕಲೆಯನ್ನು ಗುರುತಿಸಿ ನಾಡಿಗೆ ಪರಿಚಯಿಸಿದ್ದಾರೆ. ಮುಖ್ಯವೆಂದರೆ, 12 ನೇ ಶತಮಾನದಲ್ಲಿ ವಚನಗಳ ರಚನೆಯು ಸಾಹಿತ್ಯದ ಮೇರುಪರ್ವತದಂತಿತ್ತು. ಆದರೆ, ಈಚೆಗೆ ಇಂಥ ಚಟುವಟಿಕೆಗಳು ನಡೆಯದೆ ಬರವಣಿಗೆಗೆ ಬರಗಾಲ ಬಂದಂತಾಗಿದೆ. ಇಂಥದರಲ್ಲಿ ಡಾ.ಸವದತ್ತಿಮಠ ಅವರು ಹಾರಕೂಡ ಮಠವನ್ನು ಕೇಂದ್ರವನ್ನಾಗಿಸಿಕೊಂಡು ಮರಳುಗಾಡಿನ ಓಯಸೀಸ್ ನಂತೆ ಇಲ್ಲಿ ಸಾಹಿತ್ಯದ ಕಾರಂಜಿ ಚಿಮ್ಮುವಂತೆ ಮಾಡಿದ್ದಾರೆ. ಡಾ. ಸವದತ್ತಿಮಠರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಡಾ.ಎಂ.ಎಂ.ಕಲಬುರ್ಗಿ ಸಂಶೋಧನಾ ಪ್ರಶಸ್ತಿ, ಚೆನ್ನರೇಣುಕಬಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ 30ಕ್ಕೂ ಹೆಚ್ಚು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

`ಡಾ.ಸವದತ್ತಿಮಠ ಅಪಾರ ಪಾಂಡಿತ್ಯ ಹೊಂದಿದ್ದಾರೆ. ವೃಥಾ ಆಡಂಬರ ಮಾಡದ ಸರಳ, ನಿಷ್ಕಪಟ, ಸದುವಿನಯದ ಸೌಮ್ಯ ವ್ಯಕ್ತಿ. ಕರ್ತವ್ಯನಿಷ್ಠರಾಗಿ ಕಾಯಕದಲ್ಲೇ ಸಂತೃಪ್ತಿ ಕಾಣುತ್ತಾರೆ’ ಎಂದು ಮಠಾಧಿಪತಿ ಚನ್ನವೀರ ಶಿವಾಚಾರ್ಯರು ಹೇಳುತ್ತಾರೆ.

ಡಾ.ಸವದತ್ತಿಮಠರು ಹಾರಕೂಡ ಮಠದ ಪರಮಭಕ್ತ ಆಗಿರುವುದರ ಜತೆಗೆ 25 ವರ್ಷಗಳಿಂದ ಮಠದಲ್ಲಿನ ಸಾಹಿತ್ಯಸೇವೆಯ ರಥದ ಸಾರಥಿಯಾಗಿ ನೂರಾರು ಗ್ರಂಥಗಳ ಪ್ರಕಟಣೆಗೆ ಶ್ರಮಿಸಿದ್ದಾರೆ.
ಚನ್ನವೀರ ಶಿವಾಚಾರ್ಯರು,ಮಠಾಧಿಪತಿ, ಹಾರಕೂಡ

-ಮಾಣಿಕ ಆರ್.ಭುರೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT