ಔರಾದ್: ನೀರಿನ ಸಮಸ್ಯೆ ಉಲ್ಬಣ

ಔರಾದ್: ಬಿಸಿಲಿನ ದಗೆ ಹೆಚ್ಚುವ ಮುನ್ನವೇ ತಾಲ್ಲೂಕಿನ ಕೆಲ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿ ಪ್ರತಿ ಸೋಮವಾರ ಹಾಗೂ ಮಂಗಳವಾರ ಎರಡು ದಿನ ಜಾನುವಾರುಗಳ ಸಂತೆ ನಡೆಯುತ್ತದೆ. ಪಕ್ಕದ ತೆಲಂಗಾಣ, ಮಹಾರಾಷ್ಟ್ರ ಸೇರಿ ಹಲವು ಕಡೆಗಳಿಂದ ಎರಡು ಸಾವಿರ ಜಾನುವಾರುಗಳು ಬರುತ್ತವೆ. ಹೀಗೆ ಬರುವ ಜಾನುವಾರು ಹಾಗೂ ರೈತರಿಗೆ ಎಪಿಎಂಸಿಯವರು ಕುಡಿಯಲು ನೀರಿನ ವ್ಯವಸ್ಥೆ ಮಾಡುತ್ತಾರೆ. ಆದರೆ ಈಗ ಕಳೆದ ಎರಡು ವಾರದಿಂದ ನೀರಿನ ಕೊರತೆಯಾಗಿ ರೈತರು ತೊಂದರೆ ಎದುರಿಸುತ್ತಿದ್ದಾರೆ.
‘ಜಾನುವಾರುಗಳಿಗೆ ನಾಲ್ಕೈದು ಕಡೆ ನೀರು ಸಂಗ್ರಹ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅವುಗಳಲ್ಲಿ ನೀರಿಲ್ಲ. ಹೀಗಾಗಿ ಜಾನುವಾರುಗಳು ಬಿಸಿಲಿನಲ್ಲಿ ಒದ್ದಾಡುತ್ತಿವೆ’ ಎಂದು ಯನಗುಂದಾ ರೈತ ಶಿವಾನಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಒಂದು ತೊಟ್ಟಿಗೆ ಟ್ಯಾಂಕರ್‌ನಿಂದ ನೀರು ಹಾಕುತ್ತಿದ್ದಾರೆ. ಅದೂ ಎಲ್ಲ ಜಾನುವಾರುಗಳಿಗೆ ಸಾಕಾಗುತ್ತಿಲ್ಲ. ಈ ಕುರಿತು ಎಪಿಎಂಸಿ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ.
‘ವಾಲ್ ಸಮಸ್ಯೆಯಿಂದ ಪಟ್ಟಣ ಪಂಚಾಯಿತಿಯಿಂದ ಬರುವ ನೀರು ನಿಂತು ಹೋಗಿದೆ. ಹೀಗಾಗಿ ಸದ್ಯಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಬರುವ ಸೋಮವಾರದೊಳಗೆ ಹೊಸದಾಗಿ ಹೊಸ ಕೊಳವೆ ಬಾವಿಯಿಂದ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲಾಗುವುದು’ ಎಂದು ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಅಮಜತ್‍ಖಾನ್ ಹೇಳಿದ್ದಾರೆ.
‘ಸಂತೆಗೆ ಬರುವ ರೈತರು ಹಾಗೂ ಜಾನುವಾರುಗಳಿಗೆ ನೀರಿನ ಸೌಲಭ್ಯ ಕಲ್ಪಿಸದಿದ್ದಲ್ಲಿ ನಾವು ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಸಂತೆಗೆ ಬರುವ ರೈತರು ಎಚ್ಚರಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.