ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನವಾಡ: ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಮಳೆಗಾಲದಲ್ಲೂ ಟ್ಯಾಂಕರ್ ನೀರು ಪೂರೈಕೆ: ಸಿಗದ ಶಾಶ್ವತ ಪರಿಹಾರ
Published : 11 ಆಗಸ್ಟ್ 2024, 6:40 IST
Last Updated : 11 ಆಗಸ್ಟ್ 2024, 6:40 IST
ಫಾಲೋ ಮಾಡಿ
Comments

ಜನವಾಡ: ಬೀದರ್ ತಾಲ್ಲೂಕಿನ ಜನವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಮಳೆಗಾಲದಲ್ಲೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಗ್ರಾಮದ ಆರು ವಾರ್ಡ್‍ಗಳ ಪೈಕಿ ನಾಲ್ಕು ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಜಟಿಲಗೊಂಡಿದೆ. ಕೊಳವೆ ಬಾವಿಗಳ ನೀರು ಇಡೀ ಗ್ರಾಮಕ್ಕೆ ಸಾಕಾಗದ ಕಾರಣ ಗ್ರಾಮ ಪಂಚಾಯಿತಿ ಅವರು ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆದು ಟ್ಯಾಂಕರ್ ಮೂಲಕ ಜನರಿಗೆ ನೀರು ಪೂರೈಸುತ್ತಿದ್ದಾರೆ.

ಬೇಂದ್ರೆ ಗಲ್ಲಿ, ಕಡ್ಡೆ ಗಲ್ಲಿ, ಕೊರವ ಗಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದ ಓಣಿಯ ಜನ ಸದ್ಯ ನೀರಿಗಾಗಿ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ.

ಗ್ರಾಮದಲ್ಲಿ ಇರುವ ಕೊಳವೆಬಾವಿಗಳಲ್ಲಿ ಮೂರನೇ ಎರಡರಷ್ಟು ನಿರುಪಯುಕ್ತವಾದ ಕಾರಣ ನೀರಿನ ಸಮಸ್ಯೆ ಎದುರಾಗಿದೆ. ಜನ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮದ ಮುಖಂಡ ಭಕ್ತರಾಜ ಪಾಟೀಲ ತಿಳಿಸುತ್ತಾರೆ.

ಕೊಳವೆಬಾವಿ ನೀರು ಕಡಿಮೆ ಬೀಳುತ್ತಿದ್ದ ಕಾರಣ ಗ್ರಾಮದ ಪೂರ್ವ ಕೆರೆಯಲ್ಲಿ ತೆರೆದ ಬಾವಿ ತೋಡಿ, ಮೋಟರ್ ಅಳವಡಿಸಿ, ಪೈಪ್‍ಲೈನ್ ಮೂಲಕ ನಿತ್ಯದ ಬಳಕೆಗೆ ನೀರು ಪೂರೈಸಲಾಗುತ್ತಿತ್ತು. ಕುಡಿಯಲು ಶುದ್ಧ ನೀರಿನ ಘಟಕದ ನೀರು ಬಳಕೆಗೆ ವ್ಯವಸ್ಥೆ ಮಾಡಲಾಗಿತ್ತು. ಮಳೆ ಬಂದ ನಂತರ ಕೆರೆ ನೀರು ರಾಡಿ ಆದ ಕಾರಣ ನೀರು ಪೂರೈಕೆ ಸ್ಥಗಿತಗೊಳಿಸಲಾಯಿತು. ಅನಂತರ ಕೊರತೆ ನೀಗಿಸಲು ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈಜಯಂತಿಬಾಯಿ ನಾಮದೇವ ಹೇಳುತ್ತಾರೆ.

ಗ್ರಾಮದಲ್ಲಿ 2,500 ಮನೆಗಳಿದ್ದು, ಸುಮಾರು 15 ಸಾವಿರ ಜನಸಂಖ್ಯೆ ಇದೆ. 64 ಕೊಳವೆ ಬಾವಿಗಳ ಪೈಕಿ 24 ಮಾತ್ರ ಚಾಲ್ತಿಯಲ್ಲಿವೆ. ಅವುಗಳಲ್ಲೂ ಕಡಿಮೆ ನೀರು ಬರುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಹಿರೇಮಠ ತಿಳಿಸುತ್ತಾರೆ.

ನೀರಿನ ಸಮಸ್ಯೆ ಪರಿಹಾರಕ್ಕಾಗಿ ವಾರ್ಡ್ ಸಂಖ್ಯೆ 2, ವಾರ್ಡ್ ಸಂಖ್ಯೆ 6, ಬೇಂದ್ರೆ ಗಲ್ಲಿ, ಚಾಂಬೋಳ್ ರಸ್ತೆ, ಲೌಟೆ ಗಲ್ಲಿ ಹಾಗೂ ಪೊಲೀಸ್ ಸ್ಟೇಷನ್ ಆವರಣದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ಕೆಲ ಕೊಳವೆಬಾವಿ ರೀ ಬೋರಿಂಗ್ ಮಾಡಿಸಲಾಗಿದೆ ಎಂದು ಹೇಳುತ್ತಾರೆ.

ನೀರಿನ ಸಮಸ್ಯೆ ಬಗೆಹರಿಸಲು ಈಗಾಗಲೇ ಪ್ರಗತಿಯಲ್ಲಿ ಇರುವ ಜಲ ಜೀವನ ಮಿಷನ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷದ ಗೋಳಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಆಗಬೇಕು.
-ಭಕ್ತರಾಜ ಪಾಟೀಲ ಗ್ರಾಮದ ಮುಖಂಡ
ನೀರಿನ ಸಮಸ್ಯೆ ಪರಿಹಾರಕ್ಕೆ ಗ್ರಾಮ ಪಂಚಾಯಿತಿಯಿಂದ ಸಾಧ್ಯವಾದ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
-ವೈಜಯಂತಿಬಾಯಿ ನಾಮದೇವ ಗ್ರಾ.ಪಂ.ಅಧ್ಯಕ್ಷೆ
ಎರಡು ತೆರೆದ ಬಾವಿಗಳಿಂದ ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆ ಸಂಬಂಧ ನರೇಗಾ ಯೋಜನೆಯಡಿ ಹೂಳೆತ್ತುವ ರಿಂಗ್ ಹಾಗೂ ಜಾಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
- ಸವಿತಾ ಹಿರೇಮಠ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT