ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ಗೂ ಕಾಲಿಟ್ಟ ‘ಡ್ರಮ್ ಸೀಡರ್'

ಸೋಯಾ ಅವರೆ ಬಿತ್ತನೆಗೆ ಯಂತ್ರ ಬಳಕೆ, ಖರ್ಚು ಕಡಿಮೆ
Published 10 ಜುಲೈ 2024, 6:25 IST
Last Updated 10 ಜುಲೈ 2024, 6:25 IST
ಅಕ್ಷರ ಗಾತ್ರ

ಜನವಾಡ: ಸೋಯಾ ಅವರೆ ಬಿತ್ತನೆಗೆ ಬಳಸಲಾಗುವ ‘ಡ್ರಮ್ ಸೀಡರ್’ ಯಂತ್ರ ಬೀದರ್‌ಗೂ ಕಾಲಿಟ್ಟಿದೆ. ಕೃಷಿ ವಿಜ್ಞಾನ ಕೇಂದ್ರದ ಉತ್ತೇಜನದ ಫಲವಾಗಿ ಜಿಲ್ಲೆಯಲ್ಲಿ ಈಗಾಗಲೇ 10ಕ್ಕೂ ಅಧಿಕ ರೈತರು ಸೋಯಾ ಅವರೆ ಬಿತ್ತನೆಗೆ ಡ್ರಮ್ ಸೀಡರ್ ಬಳಸಿದ್ದಾರೆ.

ಬಿತ್ತನೆಗೆ ಮಾಡುವ ಖರ್ಚು, ಬೀಜದ ಉಳಿತಾಯ, ಅಧಿಕ ಇಳುವರಿ ಹಾಗೂ ಕಾರ್ಮಿಕರ ಕೊರತೆ ನಿವಾರಣೆಗೆ ಸಹಕಾರಿಯಾಗಿರುವ ಕಾರಣ ಯಂತ್ರಕ್ಕೆ ಬೇಡಿಕೆ ಹೆಚ್ಚಲಾರಂಭಿಸಿದೆ. ಎತ್ತುಗಳು ಅಥವಾ ಟ್ರ್ಯಾಕ್ಟರ್ ಬಳಸಿ ಬಿತ್ತನೆ ಮಾಡಲು ಒಂದು ಎಕರೆಗೆ ಕನಿಷ್ಠ 30 ಕೆ.ಜಿ. ಸೋಯಾ ಅವರೆ ಬೀಜ ಬೇಕಾಗಲಿದೆ. ಆದರೆ, ಯಂತ್ರ ಬಳಸಿದರೆ 8 ರಿಂದ 10 ಕೆ.ಜಿ. ಬೀಜ ಸಾಕಾಗಲಿದೆ. ಎಕರೆಗೆ 4 ರಿಂದ 6 ಕ್ವಿಂಟಲ್ ಅಧಿಕ ಇಳುವರಿಯೂ ಬರಲಿದೆ.

ಜಿಲ್ಲೆಗೆ ಪರಿಚಯ: ಈಗಾಗಲೇ ಬೇರೆ ಬೇರೆ ಭಾಗಗಳಲ್ಲಿ ಡ್ರಮ್ ಸೀಡರ್ ಯಂತ್ರ ಬಳಕೆಯಲ್ಲಿ ಇದೆ. ಕೃಷಿ ವಿಜ್ಞಾನ ಕೇಂದ್ರ ಜಿಲ್ಲೆಗೆ ಮೊದಲ ಬಾರಿಗೆ ಯಂತ್ರವನ್ನು ಪರಿಚಯಿಸಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸುನೀಲಕುಮಾರ ಎನ್.ಎಂ. ತಿಳಿಸಿದರು.

ಡ್ರಮ್ ಸೀಡರ್ ಯಂತ್ರ ಬಳಸುವುದರಿಂದ ಟ್ರ್ಯಾಕ್ಟರ್, ಎತ್ತುಗಳು ಹಾಗೂ ಕಾರ್ಮಿಕರಿಗೆ ತಗಲುವ ಖರ್ಚು ತಪ್ಪಿಸಬಹುದು. ಒಬ್ಬ ವ್ಯಕ್ತಿ ದಿನದಲ್ಲಿ ಒಂದರಿಂದ ಒಂದೂವರೆ ಎಕರೆ ಬಿತ್ತನೆ ಮಾಡಬಹುದು ಎಂದು ಹೇಳಿದರು. ಎತ್ತುಗಳು ಹಾಗೂ ಟ್ರ್ಯಾಕ್ಟರ್ ಬಳಸಿ ಮಾಡಲಾಗುವ ಬಿತ್ತನೆ ಒಂದೇ ತೆರನಾಗಿ ಇರುವುದಿಲ್ಲ. ಡ್ರಮ್ ಸೀಡರ್‌ನ ಬಿತ್ತನೆ ಕರಾರು ವಾಕ್ ಆಗಿರುತ್ತದೆ. ಮೊಳಕೆ ಪ್ರಮಾಣ, ಬೀಜದಿಂದ ಬೀಜದ ಅಂತರ ಸರಿಯಾಗಿರುತ್ತದೆ ಎಂದು ತಿಳಿಸಿದರು.

ಮೂರು ಅಡಿ ತುಸು ಏರು ಮಡಿ ಮಾಡಿ ಬಿತ್ತನೆ ಕೈಗೊಂಡಲ್ಲಿ ಅದರ ಮಧ್ಯೆ ಇರುವ ಚಿಕ್ಕ ಕಾಲುವೆಯಿಂದ ಅಧಿಕ ಮಳೆಯಾದಾಗ ನೀರು ಹರಿದು ಹೋಗಲು ಅನುಕೂಲವಾಗುತ್ತದೆ. ಒಂದು ವೇಳೆ ಮಳೆ ಕೊರತೆ ಉಂಟಾದಲ್ಲಿ ನೀರು ಲಭ್ಯ ಇರುವ ರೈತರು ಕಾಲುವೆಯ ಮೂಲಕ ತೆಳುವಾಗಿ ನೀರು ಹಾಯಿಸಿ ನಿರೀಕ್ಷಿತ ಇಳುವರಿ ಪಡೆಯಬಹುದಾಗಿದೆ ಎಂದು ಹೇಳಿದರು.

ಯಂತ್ರದಿಂದ ಎಕರೆಗೆ 20 ರಿಂದ 22 ಕೆ.ಜಿ. ಬೀಜದ ಉಳಿತಾಯ ಆಗುತ್ತದೆ. 12 ರಿಂದ 14 ಕ್ವಿಂಟಲ್‍ನಷ್ಟು ಇಳುವರಿ ಬರುತ್ತದೆ. ಡ್ರಮ್ ಸೀಡರ್ ಹಲವು ರೀತಿಯಲ್ಲಿ ರೈತರಿಗೆ ಉಪಕಾರಿಯಾಗಿದೆ ಎಂದು ತಿಳಿಸಿದರು.

ಬಾಪುರ ಗ್ರಾಮದ ರೈತರ ಹೊಲವೊಂದಕ್ಕೆ ಈಚೆಗೆ ಭೇಟಿ ನೀಡಿದ ಕೃಷಿ ಸಚಿವ ಚಲುವರಾಯ ಸ್ವಾಮಿ ಹಾಗೂ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಡ್ರಮ್ಸ್ ಸೀಡರ್ ಯಂತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸೋಯಾ ಅವರೆ ಬಿತ್ತನೆಗೆ ಜುಲೈ 15ರವರೆಗೂ ಅವಕಾಶ ಇದೆ. ರೈತರು ಕೆವಿಕೆಯಲ್ಲಿರುವ ಯಂತ್ರ ಬಳಸಿ ಬಿತ್ತನೆ ಮಾಡಬಹುದು.
ಡಾ. ಸುನೀಲಕುಮಾರ ಎನ್.ಎಂ., ಕೆವಿಕೆ ಮುಖ್ಯಸ್ಥ
ಡ್ರಮ್ ಸೀಡರ್ ಸೋಯಾ ಅವರೆ ಬಿತ್ತನೆಗೆ ಬಳಸಬಹುದು. ಚಕ್ರ ಬದಲಿಸಿ ಕಡಲೆ ಉದ್ದು ಹೆಸರು ಬಿತ್ತನೆಗೆ ಸಹ ಬಳಕೆ ಮಾಡಬಹುದು.
ಡಾ. ಜ್ಞಾನದೇವ ಬುಳ್ಳಾ, ಬೀಜ ವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT