ಬುಧವಾರ, ಅಕ್ಟೋಬರ್ 21, 2020
21 °C
ಅಧಿಕಾರಿಗಳಿಗೆ ಕ್ರಿಯಾಶೀಲತೆ, ರಾಜಕಾರಣಿಗಳಿಗೆ ಆಸಕ್ತಿ ಕೊರತೆ

ಬೀದರ್‌: ಹೊಸ ತಾಲ್ಲೂಕುಗಳ ಅಭಿವೃದ್ಧಿಗೆ ಗ್ರಹಣ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: 2017ರ ಸೆಪ್ಟೆಂಬರ್ 6ರಂದು ಸರ್ಕಾರ ಆದೇಶ ಹೊರಡಿಸಿದರೂ 2018ರ ಜನವರಿಯಲ್ಲಿ ಬೀದರ್‌ ಜಿಲ್ಲೆಯಲ್ಲಿ ಮೂರು ಹೊಸ ತಾಲ್ಲೂಕುಗಳು ಅಸ್ತಿತ್ವಕ್ಕೆ ಬಂದವು. ಸರ್ಕಾರಿ ಅಧಿಕಾರಿಗಳಲ್ಲಿ ಕ್ರಿಯಾಶೀಲತೆ ಹಾಗೂ ರಾಜಕಾರಣಿಗಳಲ್ಲಿ ಆಸಕ್ತಿ ಇಲ್ಲದ ಕಾರಣ ಮೂರು ವರ್ಷಗಳು ಕಳೆಯುತ್ತ ಬಂದರೂ ಹೊಸ ತಾಲ್ಲೂಕುಗಳ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ.

ಚಿಟಗುಪ್ಪ, ಹುಲಸೂರು ಹಾಗೂ ಕಮಲನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಹಣ ಬಿಡುಗಡೆಯಾದ ತಕ್ಷಣ ಕಟ್ಟಡ ಕಾಮಗಾರಿ ಶುರು ಮಾಡಲಾಗುವುದು ಎಂದು ಕಳೆದ ವರ್ಷ ಜಿಲ್ಲಾಧಿಕಾರಿಯಾಗಿದ್ದ ಎಚ್‌.ಆರ್‌.ಮಹಾದೇವ ಹೇಳಿದ್ದರು. ಇದಕ್ಕಾಗಿ ಅನೇಕ ಸಭೆಗಳನ್ನೂ ನಡೆಸಿದ್ದರು. ಆದರೆ ಫಲಶ್ರುತಿ ಮಾತ್ರ ಶೂನ್ಯ.

ಹೊಸ ತಾಲ್ಲೂಕುಗಳಲ್ಲಿ ಬಹುತೇಕ ಇಲಾಖೆಗಳ ಕಚೇರಿಗಳೇ ಆರಂಭವಾಗಿಲ್ಲ. ಅನೇಕ ಕಚೇರಿಗಳು ಮುಂಚಿನ ತಾಲ್ಲೂಕುಗಳಲ್ಲೇ ಕಾರ್ಯನಿರ್ವಹಿಸುತ್ತಿವೆ. ಇಲಾಖಾವಾರು ಪ್ರಸ್ತಾವಗಳಿಗೆ ಸರ್ಕಾರದ ಮಟ್ಟದಲ್ಲಿ ಇನ್ನೂ ಅನುಮತಿಯೇ ದೊರೆತಿಲ್ಲ.

ಜಿಲ್ಲಾಡಳಿತ ಸಾರ್ವಜನಿಕರ ಒತ್ತಡಕ್ಕೆ ಮಣಿದು ತಾಲ್ಲೂಕು ಕೇಂದ್ರಗಳಲ್ಲಿರುವ ಲಭ್ಯ ಕಟ್ಟಡಗಳಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಒಂದೆರಡು ಕಚೇರಿಗಳನ್ನು ಆರಂಭಿಸಿದೆ. ಇದರಿಂದ ಜನರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಹೊಸ ತಾಲ್ಲೂಕು ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

ಮಹತ್ವದ ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆಯ ಪ್ರಮುಖ ಹುದ್ದೆಗಳಿಗೆ ಇನ್ನೂ ಮಂಜೂರಾತಿಯೇ ದೊರೆತಿಲ್ಲ. ಸಿಬ್ಬಂದಿ ಕೊರತೆಯಿಂದ ಹಲವು ಸಮಸ್ಯೆ ಎದುರಿಸುತ್ತಿರುವ ಕೆಲವು ಇಲಾಖೆಗಳು ನಿಯೋಜನೆಯ ಮೇಲೆ ಸಿಬ್ಬಂದಿ ನೇಮಕ ಮಾಡುವ ಸ್ಥಿತಿಯಲ್ಲೂ ಇಲ್ಲ. ಕೋವಿಡ್‌ ಸೋಂಕು ಹಾಗೂ ಅತಿವೃಷ್ಟಿ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿವೆ.

ಸರ್ಕಾರದ ವಿಳಂಬ ನೀತಿಯಿಂದಾಗಿ ರೈತರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಬೆಳೆ ವಿಮೆ ಮಾಡಿಸಲು ಪಡಬಾರದ ಕಷ್ಟ ಪಟ್ಟಿದ್ದಾರೆ. ಪಹಣಿ ಪತ್ರಗಳಲ್ಲಿ ಹೊಸ ತಾಲ್ಲೂಕು ತೋರಿಸುತ್ತಿಲ್ಲ. ಹಳೆಯ ತಾಲ್ಲೂಕಿನ ಹೆಸರಲ್ಲಿ ನೋಂದಣಿ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೂ ಬೆಳೆ ನಷ್ಟ ಪರಿಹಾರ ಸಿಗುತ್ತಿಲ್ಲ. ಕೆಡಿಪಿ ಹಾಗೂ ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ವಿಷಯ ಹಲವು ಬಾರಿ ಪ್ರಸ್ತಾಪವಾದರೂ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಿಲ್ಲ.

ಜಿಲ್ಲಾ ಕೇಂದ್ರದಲ್ಲೇ ಕೇಳುವವರಿಲ್ಲ

ಬೀದರ್‌: ಜಿಲ್ಲಾ ಕೇಂದ್ರದಲ್ಲಿ ಒಂದೇ ಕಡೆ ಸರ್ಕಾರಿ ಇಲಾಖೆಗಳ ಕಚೇರಿಗಳು ಇಲ್ಲ. ಇಂದಿಗೂ ಅನೇಕ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. 2010ರಲ್ಲೇ ಬೀದರ್ ನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹತ್ತು ವರ್ಷ ಕಳೆದರೂ ಜಿಲ್ಲಾಡಳಿತ ಇಂದಿಗೂ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿಲ್ಲ.

ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣದ ಜಾಗ ಆಯ್ಕೆ ವಿಷಯ ಗೊಂದಲಮಯವಾಗಿದೆ. ಹೊಸ ಉಸ್ತುವಾರಿ ಸಚಿವರು ಹಾಗೂ ಹೊಸ ಜಿಲ್ಲಾಧಿಕಾರಿ ಬೀದರ್‌ಗೆ ಬಂದಾಗ ಜಾಗ ಬದಲಾಗುತ್ತಲೇ ಇದೆ. ಕಟ್ಟಡದ ವಿನ್ಯಾಸವೂ ಬದಲಾಗಿದೆ. ಬೀದರ್‌ನ ಸಂಘಟನೆಗಳು ನಗರ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಅಭಿಪ್ರಾಯಗಳನ್ನು ಹೇಳುತ್ತಿವೆ. ದೂರದ ಬಸವಕಲ್ಯಾಣ, ಕಮಲನಗರ, ಹುಲಸೂರು ಹಾಗೂ ಹುಮನಾಬಾದ್‌ ತಾಲ್ಲೂಕುಗಳ ಜನತೆಯ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿಲ್ಲ.

ಜಿಲ್ಲಾ ಮಟ್ಟದ 40 ಕಚೇರಿಗಳು ನಗರದಲ್ಲಿ ಖಾಸಗಿ ಕಟ್ಟಡಗಳಲ್ಲಿ ಇರಿಸಲಾಗಿದೆ. ಈ ಕಚೇರಿ ಸ್ಥಳಗಳಿಗೆ ಸರ್ಕಾರ ಭಾರಿ ಬಾಡಿಗೆಯನ್ನು ನೀಡುತ್ತಲೇ ಇದೆ. ಹಳ್ಳಿಗಳಿಂದ ಇಲ್ಲಿಗೆ ಬರುವ ಜನ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ಕಚೇರಿಯ ಸ್ಥಳ ಅವರಿಗೆ ತಿಳಿದಿಲ್ಲ. ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಮತ್ತು ನಗರದ ಒಂದು ತುದಿಯಿಂದ ಇನ್ನೊಂದು ತುದಿಗೆ ಅಲಿಯಬೇಕಾಗಿದೆ.

ರೇಷ್ಮೆ ಇಲಾಖೆಯ ಕಚೇರಿ ನಗರದಿಂದ 10 ಕಿ.ಮೀ ದೂರದಲ್ಲಿರುವ ಕೊಳಾರದಲ್ಲಿದ್ದರೆ, ಮೀನುಗಾರಿಕಾ ಇಲಾಖೆ ಕಚೇರಿ ನಗರದಿಂದ 6 ಕಿ.ಮೀ ದೂರದಲ್ಲಿರುವ ಮನ್ನಳ್ಳಿ ರಸ್ತೆಯಲ್ಲಿ ಇದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ನಡುವಿನ ಅಂತರವು ಸುಮಾರು 12 ಕಿ.ಮೀ ಇದೆ.

ರಿಯಲ್‌ ಎಸ್ಟೆಟ್‌ ದಂದೆಯಲ್ಲಿ ತೊಡಗಿರುವವರು ಹಾಗೂ ರಾಜಕಾರಣಿಗಳು ತಮ್ಮ ಜಮೀನು ಇರುವ ಕಡೆಗಳಲ್ಲೇ ಕಟ್ಟಡ ನಿರ್ಮಾಣ ಮಾಡಿದರೆ ಜಮೀನಿಗೆ ಒಳ್ಳೆಯ ಬೆಲೆ ಬರಲಿದೆ ಎನ್ನುವ ಉದ್ದೇಶದಿಂದ ಸಲಹೆಗಳನ್ನು ನೀಡುತ್ತ ಬಂದಿದ್ದಾರೆ. ಇದಕ್ಕೆ ಅಧಿಕಾರಿಗಳು ಹೊರತಾಗಿಲ್ಲ. ಜನ ಸಾಮಾನ್ಯರ ಅಭಿಪ್ರಾಯಕ್ಕೆ ಬೆಲೆ ಇಲ್ಲವಾಗಿದೆ.

* * * *

ತಹಶೀಲ್ದಾರ್‌ ಕಚೇರಿ ಜಾಗ ಅಂತಿಮಗೊಳಿಸಲು ರಾಜಕೀಯ

ಕಮಲನಗರ: ತಹಶೀಲ್ದಾರ್‌ ಕಚೇರಿಗೆ ಕಮಲನಗರ ಹೊರವಲಯದಲ್ಲಿರುವ ಸೋನಾಳ ಮಡ್ಡಿ ಹಾಗೂ ಖತಗಾಂವ ಗೋಮಾಳ ಪ್ರದೇಶವನ್ನು ಗುರುತಿಸಲಾಗಿದೆ. ಆದರೆ ಇಂದಿಗೂ ಜಾಗ ಅಂತಿಮಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಇದೇ ತಾಲ್ಲೂಕಿನವರೇ ಆಗಿದ್ದಾರೆ. ತಾಲ್ಲೂಕು ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಂಡಿಲ್ಲ.

ಕಮಲನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ 54 ಹಳ್ಳಿಗಳು ಇವೆ. ಹಿಂದಿನ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ನೇತೃತ್ವದಲ್ಲಿ ಹೊರಾಂಡಿ ಸಮೀಪದ ಗೋಮಾಳ ಪ್ರದೇಶದಲ್ಲಿ ಮಿನಿ ವಿಧಾನಸೌಧಕ್ಕೆ ಸ್ಥಳ ಗುರುತಿಸಲಾಗಿದೆ.
ಆದರೆ, ಇದರಿಂದ ಹೊರಾಂಡಿ, ಸೋನಾಳ, ಚಂದನವಾಡಿ, ಕಾಳಗಾಪುರ, ಹುಲಸೂರ (ಕೆ) ಗ್ರಾಮಸ್ಥರಿಗೆ ಮಾತ್ರ ಅನುಕೂಲವಾಗಲಿದೆ ಎಂದು ಧಾಬಾಕಾ, ಠಾಣಾಕುಶನೂರ್ ವಲಯದ ಜನರು ವಿರೋಧ ವ್ಯಕ್ತ ಪಡಿಸಿದ್ದಕ್ಕೆ ನಿವೇಶನ ಆಯ್ಕೆ ನನೆಗುದಿಗೆ ಬಿದ್ದಿದೆ.

ಕಮಲನಗರ ಬಸ್ ನಿಲ್ದಾಣದಿಂದ 3 ಕಿ.ಮೀ ಅಂತರದಲ್ಲಿರುವ ಜಾಗದಲ್ಲಿ ತಹಶೀಲ್ದಾರ್‌ ಕಚೇರಿಯ ಹೊಸ ಕಟ್ಟಡ ನಿರ್ಮಾಣವಾದರೆ 40 ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಇಲ್ಲಿ ನಿರ್ಮಿಸುವುದಾದರೆ ಕಮಲನಗರದ ರಾಜಕುಮಾರ ಪೊಲೀಸ್ ಪಾಟೀಲ ತಮ್ಮ 3 ಎಕರೆ ಜಮೀನು ಕೊಡುವುದಾಗಿ ಶಪಥಪತ್ರ ಕೊಟ್ಟಿದ್ದಾರೆ. ಆದರೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಗ ಅಂತಿಮಗೊಳಿಸಲು ಸಿದ್ಧರಿಲ್ಲ.

ಇಲ್ಲಿಯ ಮರಾಠಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ತಹಶೀಲ್ದಾರ್‌ ಕಚೇರಿ ಆರಂಭಿಸಲಾಗಿದೆ. ತಹಶೀಲ್ದಾರ್‌ ಕಚೇರಿಗೆ 17 ಸಿಬ್ಬಂದಿ ಬೇಕು. ಸರ್ಕಾರ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ಒದಗಿಸಿಲ್ಲ. ಕಮಲನಗರ ತಾಲ್ಲೂಕಿನ ಜನ ಪ್ರಮುಖ ಕೆಲಸ ಇದ್ದರೆ ಔರಾದ್‌ ತಹಶೀಲ್ದಾರ್‌ ಕಚೇರಿಗೆ ತೆರಳುವುದು ನಿಂತಿಲ್ಲ.

ಮಹರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕಮಲನಗರ ತಾಲ್ಲೂಕಿನಲ್ಲಿ ಇಂದಿಗೂ ಸರ್ಕಾರಿ ಪ್ರೌಢ ಶಾಲೆ, ಪದವಿ ಕಾಲೇಜು, ಆಂಗ್ಲ ಶಾಲೆ, ಕೈಗಾರಿಕೆ ತರಬೇತಿ ಸಂಸ್ಥೆ ಇಲ್ಲ. ತಾಲ್ಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ. ಉತ್ತಮ ಶಾಲಾ ಕಾಲೇಜುಗಳು ಇಲ್ಲದ ಕಾರಣ ಗಡಿ ಗ್ರಾಮಗಳ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಮಹಾರಾಷ್ಟ್ರದ ಉದಗಿರ ಪಟ್ಟಣಕ್ಕೆ ತೆರಳುತ್ತಾರೆ.

ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಸಣ್ಣ ನೀರಾವರಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳು ಮಾತ್ರ ತೆರೆದುಕೊಂಡಿವೆ. ಬೇರೆ ಇಲಾಖೆಗಳ ಕಚೇರಿಗಳು ಕಮಲನಗರಕ್ಕೆ ಬಂದಿಲ್ಲ.
ಅಂಗನವಾಡಿ ಕಟ್ಟಡಗಳಿಗೆ ಸರ್ಕಾರಿ ಇಲಾಖೆಗಳ ಬೋರ್ಡ್‌ ಹಾಕಿ ಜನರ ದಾರಿ ತಪ್ಪಿಸುವ ಕೆಲಸ ನಡೆದಿದೆ. ತಾಲ್ಲೂಕಿನ ಜನತೆ ತೊಂದರೆ ಅನುಭವಿಸುವುದು ತಪ್ಪಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ವೈಜಿನಾಥ ವಡ್ಡೆ ಹೇಳುತ್ತಾರೆ.

ಮಕ್ಕಳನ್ನು ಹಳೆಯ ಕಟ್ಟಡದಲ್ಲಿ ಕೂರಿಸಿ ದುರಸ್ತಿ ನೆಪದಲ್ಲಿ ಹಣ ವ್ಯಯಿಸಲಾಗಿದೆ. 2019-20ನೇ ಸಾಲಿನ ಶಾಸಕರ ನಿಧಿಯಲ್ಲಿ ₹ 70 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಿಸಲಾಗುತ್ತಿದೆ. ₹ 50 ಲಕ್ಷ ವೆಚ್ಚದಲ್ಲಿ ಉರ್ದು ಶಾಲೆಯ ಹಳೆಯ ಕಟ್ಟಡ ದುರಸ್ತಿ ಮಾಡಿದರೂ ಅದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿಲ್ಲ.

ಕಮಲನಗರ ತಾಲ್ಲೂಕು 54 ಗ್ರಾಮಗಳನ್ನು ಒಳಗೊಂಡಿದೆ. ಕಚೇರಿ ಕೆಲಸಗಳಿಗೆ ಮತ್ತೆ ಹಳೆಯ ಔರಾದ್‌ ತಾಲ್ಲೂಕಿಗೆ ಹೋಗುವುದು ತಪ್ಪಿಲ್ಲ. ಸರ್ಕಾರ ಆದಷ್ಟು ಬೇಗ ತಾಲ್ಲೂಕು ಕೇಂದ್ರದಲ್ಲಿ ಕಚೇರಿಗಳನ್ನು ತೆರೆಯಬೇಕು ಎನ್ನುವುದು ತಾಲ್ಲೂಕಿನ ಜನರ ಮನವಿಯಾಗಿದೆ.

2019ರ ಆಗಸ್ಟ್‌ 15ರಂದು ಕಡ್ಡಾಯವಾಗಿ ಎಲ್ಲ ಕಚೇರಿಗಳನ್ನು ಆರಂಭಿಸುವಂತೆ ಸೂಚಿಸಲಾಗಿತ್ತು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಜನವರಿ 26 ರಂದು ಕಚೇರಿಗಳ ಮೇಲೆ ಧ್ವಜಾರೋಹಣ ಮಾಡಲಾಯಿತು. ನಂತರ ಎಲ್ಲವೂ ಮಾಯವಾಗಿವೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ.

* * * *

ಚಿಟಗುಪ್ಪ ತಾಲ್ಲೂಕು: ಪ್ರಗತಿ ಶೂನ್ಯ

ಚಿಟಗುಪ್ಪ: ಹೊಸ ಚಿಟಗುಪ್ಪ ತಾಲ್ಲೂಕು ಅಸ್ತಿತ್ವಕ್ಕೆ ಬಂದು ಮೂರು ವರ್ಷ ಕಳೆದರೂ ಅಭಿವೃದ್ಧಿಯಲ್ಲಿ ಸಾಧನೆ ಶೂನ್ಯವಾಗಿದೆ.
ತಾಲ್ಲೂಕು ಮಟ್ಟದ 35 ಇಲಾಖೆಗಳಲ್ಲಿ ಒಂದೂ ಇಲಾಖೆ ಸ್ವಂತ ನಿವೇಶನ ಖರೀದಿಸಿಲ್ಲ ಹಾಗೂ ಕಟ್ಟಡವನ್ನೂ ಹೊಂದಿಲ್ಲ. ಜಿಲ್ಲಾಡಳಿತ ಇನ್ನೂ ತಹಶೀಲ್ದಾರ್‌ ಕಚೇರಿಗೆ ನಿವೇಶನ ಹುಡುಕುವುದರಲ್ಲೇ ಇದೆ. ಜಿಲ್ಲಾಡಳಿತದ ಕಾರ್ಯವೈಖರಿ ತಾಲ್ಲೂಕಿನ ಜನತೆಗೆ ಬೇಸರ ತಂದಿದೆ.

ತಾಲ್ಲೂಕು ಪಂಚಾಯಿತಿಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಹುಮನಾಬಾದ್‌ ಶಾಸಕ ರಾಜಶೇಖರ್‍ ಪಾಟೀಲ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಬೇಸತ್ತು ತಾಲ್ಲೂಕು ಅಭಿವೃದ್ಧಿಗೆ ಒತ್ತು ಕೊಡುವಂತೆ ತಾಕೀತು ಮಾಡಿದ್ದಾರೆ. ತಹಶೀಲ್ದಾರ್ ಜಿಯಾವುಲ್ಲಾ ಅವರಿಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸೂಕ್ತ ಸ್ಥಳ ಪರಿಶೀಲನೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆಯೂ ಸೂಚನೆ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಪಟ್ಟಣದ ಹಳೆ ಪುರಸಭೆ ಕಚೇರಿ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿಯನ್ನು ಆರಂಭಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಕಚೇರಿಯೂ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ, ತಾಲ್ಲೂಕು ಆರೋಗ್ಯ ಅಧಿಕಾರಿ, ಪಶು ಆಸ್ಪತ್ರೆ, ಪುರಸಭೆ ಕಚೇರಿಗಳು ಆರಂಭದಿಂದಲೂ ಇವೆ. ಇವುಗಳನ್ನು ಬಿಟ್ಟರೆ ಉಳಿದ ಇಲಾಖೆಗಳ ಕಚೇರಿಗಳು ಇನ್ನೂ ಪಟ್ಟಣಕ್ಕೆ ಬಂದೇ ಇಲ್ಲ.

ಚಿಟಗುಪ್ಪದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಹಿಂಬದಿಯಲ್ಲಿರುವ ಅಂಗನವಾಡಿ ಕಟ್ಟಡದ ಮೇಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಎಂದು ನಾಮಫಲಕ ತೂಗು ಹಾಕಲಾಗಿದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಾರಂಜಾ ಯೋಜನೆ, ವಲಯ ಅರಣ್ಯಾಧಿಕಾರಿ, ಕಾರ್ಮಿಕ ನಿರೀಕ್ಷಕರ ಕಚೇರಿ, ಸಮಾಜ ಕಲ್ಯಾಣ, ರೇಷ್ಮೆ ವಿಸ್ತೀರ್ಣಾಧಿಕಾರಿ, ಉಪ ಖಜಾನಾಧಿಕಾರಿ ಕಚೇರಿ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಇಲಾಖೆ, ಸಂಚಾರಿ ಪೊಲೀಸ್ ಠಾಣೆ ಕಚೇರಿಗಳು ಆರಂಭವಾಗಬೇಕಿದೆ.

ಸಿವಿಲ್ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ನ್ಯಾಯಾಧೀಶರು ಪರಿಶೀಲಿಸಿ ಹೋಗಿದ್ದಾರೆ. ನ್ಯಾಯಾಂಗ ಇಲಾಖೆ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ಜಿಲ್ಲಾಡಳಿತದಿಂದ ಜಾಗವೇ ಅಂತಿಮವಾಗಿಲ್ಲ.

'ಉಪ ನೋಂದಣಿ ಇಲಾಖೆಯ ಕಚೇರಿ ಆರಂಭವಾಗದ್ದಕ್ಕೆ ತಾಲ್ಲೂಕಿನ ಜನ ಹುಮನಾಬಾದ್ ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಿ ಪರದಾಡುತ್ತಿದ್ದಾರೆ. ಅಲ್ಲಿ ಚಿಟಗುಪ್ಪ ತಾಲ್ಲೂಕು ವ್ಯಾಫ್ತಿಯ ಗ್ರಾಮಗಳ ದಾಖಲೆಗಳು ಆನ್‌ಲೈನ್ ನಲ್ಲಿ ಅಪ್‌ಲೋಡ್ ಆಗುತ್ತಿಲ್ಲ ಹೀಗಾಗಿ ಭೂಮಿ ಮಾರಾಟ, ಖರೀದಿ ಪ್ರಕ್ರಿಯೆಗೆ ತೊಡಕುಂಟಾಗುತ್ತಿದೆ. ತಕ್ಷಣ ಸರ್ಕಾರ ಪಟ್ಟಣದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಆರಂಭಿಸಬೇಕು' ಎಂದು ರೈತ ಶಂಕರರಾವ್ ಪಾಟೀಲ ಆಗ್ರಹಿಸುತ್ತಾರೆ.

ಸಮುದಾಯ ಭವನಕ್ಕೆ ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿ ಎನ್ನುವ ನಾಮಫಲಕ ತೂಗು ಹಾಕಲಾಗಿದೆ. ಆದರೆ, ಕಚೇರಿಯೇ ಆರಂಭವಾಗಿಲ್ಲ.

ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಆರು ಎಕರೆ ಐದು ಗುಂಟೆ ನಿವೇಶನ ಮಂಜೂರು ಮಾಡಲಾಗಿದೆ. ಹೊಸ ಕಚೇರಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬರಬೇಕಿದೆ. ಕೆಲ ಇಲಾಖೆಗಳ ಸಿಬ್ಬಂದಿ ನೇಮಕಕ್ಕೆ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಪಡೆಯಬೇಕಿದೆ’ ಎಂದು ಚಿಟಗುಪ್ಪ ತಹಶೀಲ್ದಾರ್ ಜಿಯಾವುಲ್ಲಾ ಹೇಳುತ್ತಾರೆ.

* * * *

ಹುಲಸೂರು ತಾಲ್ಲೂಕಿಗಿಲ್ಲ ಕಾಯಂ ತಹಶೀಲ್ದಾರ್

ಬಸವಕಲ್ಯಾಣ: ಹುಲಸೂರಿನ ಪ್ರವಾಸಿ ಬಂಗಲೆಯ ಹಳೆಯ ಕಟ್ಟಡವನ್ನೇ ತಹಶೀಲ್ದಾರ್‌ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ. ಬಸವಕಲ್ಯಾಣ ತಹಶೀಲ್ದಾರರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದ್ದು, ಅಗತ್ಯ ಸಿಬ್ಬಂದಿಯನ್ನು ಒದಗಿಸಿಲ್ಲ. ನಾಡ ತಹಶೀಲ್ದಾರ್ ಒಬ್ಬರೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ.

ಪಹಣಿಯಲ್ಲಿ ಹುಲಸೂರು ತಾಲ್ಲೂಕು ಎಂದು ನಮೂದಿಸಲಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ನೇಮಕ ಮಾಡಿ ಕಚೇರಿ ಆರಂಭಿಸಲಾಗಿದೆ. ಮಿನಿ ವಿಧಾನಸೌಧ, ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ರಾಮಚಂದ್ರನ್ ಜಾಗ ಪರಿಶೀಲಿಸಿದ್ದಾರೆ.

ಹುಲಸೂರು ಗ್ರಾಮ ಪಂಚಾಯಿತಿಯು 34 ಸದಸ್ಯ ಬಲ‌ ಹೊಂದಿದೆ. ಆದ್ದರಿಂದ ಇದನ್ನು ಪಟ್ಟಣ ಪಂಚಾಯಿತಿ ಮಾಡಲು ಗ್ರಾಮ ಪಂಚಾಯಿತಿ ಯಿಂದ ಪ್ರಸ್ತಾವ ಕಳುಹಿಸಲಾಗಿದೆ ಎಂದು ಪಿಡಿಒ ಭೀಮಶಪ್ಪ ದಂಡಿನ್ ಹೇಳಿದ್ದಾರೆ.

ಗ್ರಾಮದಲ್ಲಿ 15 ಸಾವಿರ ಜನಸಂಖ್ಯೆ ಇದೆ. 6 ಜನ ಸ್ವಚ್ಚತಾ ಸಿಬ್ಬಂದಿ ನೇಮಿಸಿದ್ದರೂ ಸಮಸ್ಯೆ ಆಗುತ್ತಿದೆ. ಅಲ್ಲಲ್ಲಿ ಕಸದ ಗುಡ್ಡೆ ಸಂಗ್ರಹ ಆಗುತ್ತಿದೆ. ಅನೇಕ ಓಣಿಗಳಲ್ಲಿ ಚರಂಡಿ, ಸಿಸಿ ರಸ್ತೆ ನಿರ್ಮಾಣಗೊಂಡಿವೆ. ಇಲ್ಲಿಂದ ಹೋಗುವ ಬಸವಕಲ್ಯಾಣ- ಭಾಲ್ಕಿ ರಸ್ತೆ ಅಗಲಗೊಳಿಸಿ ವಿಭಜಕ ನಿರ್ಮಿಸಿ ಮಧ್ಯದಲ್ಲಿ ವಿದ್ಯುತ್ ದೀಪ ಅಳವಡಿಸಲಾಗಿದೆ. ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರವಿದೆ. ಪೊಲೀಸ್ ಠಾಣೆಯಿದೆ. ಆದರೆ, ಬಸ್ ನಿಲ್ದಾಣ ಶಿಥಿಲಗೊಂಡಿದೆ. ಆದ್ದರಿಂದ ಇಲ್ಲಿ ಬಸ್ ಗಳು ನಿಲ್ಲುವುದಿಲ್ಲ.

‘ಬಿಜೆಪಿ ಸರ್ಕಾರದ ಅವಧಿಯಲ್ಲೇ ತಾಲ್ಲೂಕು ಘೋಷಣೆ ಆಗಿತ್ತು. ಈಗ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೆಸರಿಗೆ ಮಾತ್ರ ತಾಲ್ಲೂಕು ಆಗಬಾರದು. ಕಾಯಂ ತಹಶೀಲ್ದಾರ್ ನೇಮಕ ಮಾಡಬೇಕು. ವಿವಿಧ ಇಲಾಖೆಗಳ ಕಚೇರಿ ಕಟ್ಟಡಗಳನ್ನು ನಿರ್ಮಿಸಬೇಕು. ಹುಲಸೂರು ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು’ ಎಂದು ಪ್ರಮುಖರಾದ ಶಿವರಾಜ ಖಪಲೆ ಆಗ್ರಹಿಸುತ್ತಾರೆ.

* * * *

ಈ ವಾರ ಜಿಲ್ಲಾ ಮಟ್ಟದ ಸಭೆ

ಬೀದರ್‌: ‘ಮೂರು ತಾಲ್ಲೂಕು ಕೇಂದ್ರಗಳಲ್ಲಿ ಈಗಾಗಲೇ ಕೆಲ ಕಚೇರಿಗಳನ್ನು ತೆರೆಯಲಾಗಿದೆ. ಹೊಸ ತಾಲ್ಲೂಕು ಕೇಂದ್ರಗಳಲ್ಲಿ ಆರಂಭವಾಗುವ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಆಯಾ ಇಲಾಖೆಯಿಂದಲೂ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಹೇಳುತ್ತಾರೆ.
‘ಚಿಟಗುಪ್ಪ ಹಾಗೂ ಹುಲಸೂರಲ್ಲಿ ತಹಶೀಲ್ದಾರ್ ಕಚೇರಿ ಹೊಸ ಕಟ್ಟಡಕ್ಕೆ ಜಾಗ ಪರಿಶೀಲಿಸಲಾಗಿದೆ. ಈ ವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲಾಗುವುದು. ತಾಂತ್ರಿಕ ಅಡಚಣೆಗಳಿದ್ದರೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರಕ್ಕೂ ಪತ್ರ ಬರೆಯಲಾಗುವುದು’ ಎಂದು ತಿಳಿಸುತ್ತಾರೆ.
.............

ಜನಾಭಿಪ್ರಾಯಕ್ಕೆ ಮನ್ನಣೆ ಕೊಡಿ

ಬೀದರ್‌: ‘ರಾಜಕಾರಣಿಗಳು ಹಾಗೂ ಜಿಲ್ಲಾಡಳಿತಕ್ಕೆ ಹತ್ತು ವರ್ಷ ಕಳೆದರೂ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಜಾಗ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಉಳಿಯಲು ರಾಜಕಾರಣಿಗಳೇ ಕಾರಣ’ ಎಂದು ಬೀದರ್‌ನ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್‌ ಬೇಸರ ವ್ಯಕ್ತಪಡಿಸುತ್ತಾರೆ.
‘ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬರಬೇಕಿದೆ. ಸರ್ಕಾರದಿಂದ ಸಾಕಷ್ಟು ಅನುದಾನ ಬಂದರೂ ಅದರ ಸದ್ಬಳಕೆಯಾಗದಿದ್ದರೆ ಪ್ರಯೋಜನ ಇಲ್ಲ. ರಾಜಕೀಯ ಕಾರಣಗಳಿಂದಾಗಿಯೇ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ’ ಎಂದು ಹೇಳುತ್ತಾರೆ.
***
ಅಧಿಕಾರಿಗಳಿಗೂ ಅಭಿವೃದ್ಧಿಯ ಮನಸ್ಸಿಲ್ಲ

ಬೀದರ್‌: ‘ರಾಜ್ಯ ಸರ್ಕಾರ ಹತ್ತು ವರ್ಷಗಳ ಹಿಂದೆಯೇ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ಹಾಗೂ ಮಿನಿ ವಿಧಾನಸೌಧಕ್ಕೆ ಕೋಟ್ಯಂತರ ಹಣ ಬಿಡುಗಡೆ ಮಾಡಿದೆ. ಇಷ್ಟೊತ್ತಿಗೆ ಕಟ್ಟಡ ನಿರ್ಮಾಣವಾಗಿ ಜಿಲ್ಲೆಯ ಜನತೆಗೆ ಸೌಲಭ್ಯಗಳು ದೊರಕಬೇಕಿತ್ತು. ಜನಪ್ರತಿನಿಧಿಗಳಿಗೆ ಅಭಿವೃದ್ಧಿಯ ಮನಸ್ಸಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಗುಮಾಸ್ತರಂತೆ ಕೆಲಸ ಮಾಡುತ್ತಿದ್ದಾರೆ. ಹೀಗಾದರೆ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯ’ ಎಂದು ವಕೀಲ ಕೇಶವ ಶ್ರೀಮಾಳೆ ಪ್ರಶ್ನಿಸುತ್ತಾರೆ.
‘ಕಾಂಗ್ರೆಸ್, ಜೆಡಿಎಸ್‌ ಹಾಗೂ ಬಿಜೆಪಿ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಯಾವುದೇ ಒಂದು ಪಕ್ಷಕ್ಕೆ ಬೊಟ್ಟು ಮಾಡಿ ಆರೋಪ ಮಾಡಲಾಗದು. ಅಧಿಕಾರಿಗಳೂ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವ ಅಗತ್ಯ ಇದೆ’ ಎಂದು ಹೇಳುತ್ತಾರೆ.
.............

ಅಧಿಕಾರಿಗಳು ಜವಾಬ್ದಾರಿ ಹೊರಲಿ

ಬೀದರ್‌: ‘70 ವರ್ಷಗಳ ಅವಧಿಯಲ್ಲಿ ಸರ್ಕಾರಿ ಕಚೇರಿಗಳಿಗೆ ನಿವೇಶನ ಇಲ್ಲ ಎನ್ನವುದು ನಾಚಿಕೆ ಪಡುವ ವಿಷಯವಾಗಿದೆ. ಸರ್ಕಾರಿ ಕಚೇರಿಗಳಿಗೆ ಜಾಗ ಕೊಡಿಸುವುದು ಜಿಲ್ಲಾಡಳಿತದ ಕೆಲಸ. ಬಾಡಿಗೆ ದಂದೆಗೆ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತ ಬಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಎಲ್ಲದಕ್ಕೂ ರಾಜಕಾರಣಿಗಳನ್ನೇ ಹೊಣೆ ಮಾಡಲಾಗದು’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಹೇಳುತ್ತಾರೆ.

‘ಅಧಿಕಾರಿಗಳು ಅರ್ಧ ಗಂಟೆಯಲ್ಲಿ ನಗರದ ಮಧ್ಯೆಯೇ ಜಾಗ ಮಂಜೂರು ಮಾಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡಿದ ಉದಾಹರಣೆಗಳು ಅನೇಕ ಇವೆ. ಇನ್ನು ವಿಳಂಬ ಮಾಡದೆ ಮಿನಿ ವಿಧಾನಸೌಧ ಹಾಗೂ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಬೇಕು’ ಎನ್ನುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು