ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಚಾಲಿತ ಸೈಕಲ್ ಆವಿಷ್ಕಾರ: ಔರಾದ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಪ್ರತಿಭೆ

Last Updated 10 ಸೆಪ್ಟೆಂಬರ್ 2022, 4:47 IST
ಅಕ್ಷರ ಗಾತ್ರ

ಔರಾದ್: ಇಂಧನ ಬೆಲೆ ಏರಿಕೆ ಬಿಸಿ ನಡುವೆ ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ವಿದ್ಯುತ್ ಚಾಲಿತ ಸೈಕಲ್ ಸಿದ್ಧಪಡಿಸಿ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪಾಲಿಟೆಕ್ನಿಕ್ ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ತಾವು ತಯಾರಿಸಿದ ಈ ವಿದ್ಯುತ್ ಚಾಲಿತ ಸೈಕಲ್ ಆಗಸ್ಟ್ 15ರ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಕಾಲೇಜಿಗೆ ಹಸ್ತಾಂತರಿಸಿದರು.

ಪಾಲಿಟೆಕ್ನಿಕ್ ಕಾಲೇಜು ಪಟ್ಟಣದಿಂದ 2 ಕಿ.ಮೀ. ದೂರ ಇದೆ. ಹೀಗಾಗಿ ಕಾಲೇಜಿನ ಏನೇ ಕೆಲಸ ಕಾರ್ಯಗಳಿದ್ದರೂ, ಈ ವಿದ್ಯುತ್ ಚಾಲಿತ ಬೈಸಿಕಲ್ ಬಳಸಲಾಗುತ್ತಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು ಈ ಸೈಕಲ್ ಓಡಿಸುತ್ತಿದ್ದಾರೆ.

ಸೈಕಲ್ ತಯಾರಿಸುವ ವಿಧಾನ: ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರ ಸಹಕಾರದಿಂದ ವಿಶಿಷ್ಟ ಹಾಗೂ ವಿನೂತನ ಮಾದರಿಯ ಸೈಕಲ್ ತಯಾರಿಸಿದ್ದಾರೆ. ‘ಸೈಕಲ್‍ಗೆ 36 ಓಲ್ಟ್ ಬ್ಯಾಟರಿ, ಹಬ್ ಮೋಟಾರ್ ಕಿಟ್ ಅಳವಡಿಸಲಾಗಿದೆ. ಬ್ಯಾಟರಿ ಎರಡು ಗಂಟೆ ಚಾರ್ಜ್ ಮಾಡಿದರೆ 40 ಕಿ.ಮೀ. ಓಡಿಸಬಹುದು. ಇದರ ವೇಗದ ಮಿತಿ ಗಂಟೆಗೆ 30 ಕಿ.ಮೀ ಇದೆ. ಚಾರ್ಜ್ ಮುಗಿದರೆ ಪೆಡಲ್ ಮೂಲಕವೂ ಸೈಕಲ್ ಓಡಿಸಬಹುದಾಗಿದೆ’ ಎಂದು ಈ ವಿದ್ಯುತ್ ಚಾಲಿತ ಸೈಕಲ್ ತಯಾರಿಸಿದ ಅಂತಿಮ ವರ್ಷದ ವಿದ್ಯಾರ್ಥಿಗಳ ತಂಡದ ಜ್ಯೋತಿಬಾ ಬಿರಾದಾರ ಹೇಳುತ್ತಾರೆ.

‘ಸೈಕಲ್ ಸೇರಿ ಇದಕ್ಕಾಗಿ ₹30 ಸಾವಿರ ಖರ್ಚು ಬಂದಿದೆ. ನಮ್ಮ ಸಹಪಾಠಿ ವಿದ್ಯಾರ್ಥಿಗಳು ಸೇರಿ ಈ ಹಣ ಭರಿಸಿದ್ದೇವೆ. ಇಂಥದ್ದೊಂದು ವಿನೂತನ ಸೈಕಲ್ ತಯಾರಿಸಿದ್ದೇವೆ ಎಂಬ ಖುಷಿ ನಮಗಿದೆ. ಇದಕ್ಕೆಲ್ಲ ನಮ್ಮ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಮಹೇಶ್ ಸರ್ ಹಾಗೂ ಇತರೆ ಎಲ್ಲ ಉಪನ್ಯಾಸಕರ ಸಹಕಾರ ಮರೆಯಲಾಗದು’ ಎಂದು ಅವರು ತಿಳಿಸಿದ್ದಾರೆ.

‘ನಮ್ಮ ವಿದ್ಯಾರ್ಥಿಗಳು ತಯಾರಿಸಿದ ವಿದ್ಯುತ್ ಚಾಲಿತ ಸೈಕಲ್ ‘ಪರಿಸರ ಸ್ನೇಹಿ ಸೈಕಲ್’ ಎಂದು ಹೇಳಬಹುದು. ಹೆಚ್ಚುತ್ತಿರುವ ಇಂಧನದ ಬೆಲೆಗೆ ಪರ್ಯಾಯವಾಗಿ ಇಂದು ಇಂತಹ ವಿದ್ಯುತ್ ಚಾಲಿತ ವಾಹನಗಳ ಬಳಕೆ ತೀರಾ ಅಗತ್ಯವಾಗಿದೆ’ ಎಂದು ಪ್ರಾಂಶುಪಾಲ ವಿಜಯಕುಮಾರ ಜಾಧವ್ ತಮ್ಮ ವಿದ್ಯಾರ್ಥಿಗಳ ಸಾಧನೆಗೆ ಹೆಮ್ಮೆಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT