ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ್‌ ರಾಯಲ್ಸ್‌ಗೆ ಜಯ ಅನಿವಾರ್ಯ

ಇಂದು ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಹೋರಾಟ
Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಜೈಪುರ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯಲ್ಲಿ ‘ಪ್ಲೇ ಆಫ್‌’ ಮೇಲೆ ಕಣ್ಣಿಟ್ಟಿರುವ ರಾಜಸ್ಥಾನ್‌ ರಾಯಲ್ಸ್‌ ತಂಡ ಈಗ ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಸಾರಥ್ಯದ ರಾಯಲ್ಸ್‌, ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣಸಲಿದೆ.

ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯದಲ್ಲಿ ಗೆದ್ದರೆ ರಹಾನೆ ಬಳಗದ ‘ಪ್ಲೇ ಆಫ್‌’ ಆಸೆ ಜೀವಂತವಾಗುಳಿಯಲಿದೆ. ಹೀಗಾಗಿ ಇದು ರಾಯಲ್ಸ್‌ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಹಣಾಹಣಿ.

ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ರಾಜಸ್ಥಾನ್‌ ತಂಡ ಹಿಂದಿನ ಹೋರಾಟದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡವನ್ನು ಮಣಿಸಿತ್ತು. ಈ ಗೆಲುವು ಅಜಿಂಕ್ಯ ಪಡೆಯ ಆಟಗಾರರ ಮನೋಬಲ ಹೆಚ್ಚಿಸಿದೆ. ರಾಯಲ್ಸ್‌ ಮತ್ತು ಚೆನ್ನೈ ಈ ಬಾರಿಯ ಲೀಗ್‌ನಲ್ಲಿ ಈಗಾಗಲೇ ಒಮ್ಮೆ ಮುಖಾಮುಖಿಯಾಗಿವೆ.

ಪುಣೆಯಲ್ಲಿ ನಡೆದಿದ್ದ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ದೋನಿ ಸಾರಥ್ಯದ ಸೂಪರ್‌ ಕಿಂಗ್ಸ್‌ 64ರನ್‌ಗಳಿಂದ ಗೆದ್ದಿತ್ತು. ಹಿಂದಿನ ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ರಹಾನೆ ಬಳಗಕ್ಕೆ ಈಗ ಅವಕಾಶ ಸಿಕ್ಕಿದೆ.

ನಾಯಕ ರಹಾನೆ, ಇಂಗ್ಲೆಂಡ್‌ನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌, ಸಂಜು ಸ್ಯಾಮ್ಸನ್‌ ಮತ್ತು ರಾಹುಲ್‌ ತ್ರಿಪಾಠಿ ಅವರು ರನ್‌ ಗಳಿಸಲು ಪರದಾಡುತ್ತಿದ್ದಾರೆ. ಇದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಇವರು ಚೆನ್ನೈ ವಿರುದ್ಧ ಪರಿಣಾಮಕಾರಿಯಾಗಿ ಆಡಬೇಕಿದೆ.

ಮತ್ತೊಂದು ಜಯದ ಮೇಲೆ ಕಣ್ಣು: ದೋನಿ ಸಾರಥ್ಯದ ಸೂಪರ್‌ ಕಿಂಗ್ಸ್‌ ಈ ಬಾರಿ ಅಮೋಘ ಆಟ ಆಡುತ್ತಿದೆ. ಈ ತಂಡ ಆಡಿರುವ 10 ಪಂದ್ಯಗಳ ಪೈಕಿ ಏಳರಲ್ಲಿ ಗೆದ್ದು ‘ಪ್ಲೇ ಆಫ್‌’ ಹಾದಿ ಸುಗಮ ಮಾಡಿಕೊಂಡಿದೆ.

ಆರಂಭ: ರಾತ್ರಿ 8.
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT