ಬೀದರ್: ನಗರದ ನೌಬಾದ್‍ನ ಕೈಗಾರಿಕಾ ಪ್ರದೇಶದಲ್ಲಿನ ಉದ್ಯಾನ ಹಾಗೂ ರಸ್ತೆ ಜಾಗ ಅತಿಕ್ರಮಣ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ.
ವೇದಿಕೆ ಪದಾಧಿಕಾರಿಗಳು ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಪಾಟೀಲ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ವಸಂತಕುಮಾರ ಅವರಿಗೆ ಈ ಕುರಿತು ದೂರು ಸಲ್ಲಿಸಿದರು.
ನೌಬಾದ್ ಪ್ರದೇಶದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸೇರಿದ 76.68 ಎಕರೆ ಜಾಗ ಇದೆ. ವಸತಿ, ವಾಣಿಜ್ಯ ನಿವೇಶನ, ಉದ್ಯಾನ ಹಾಗೂ ರಸ್ತೆಗೆ ಜಾಗ ಹಂಚಿಕೆ ಮಾಡಲಾಗಿದೆ. ಆದರೆ, ಭೂಗಳ್ಳರು ರಸ್ತೆ, ಉದ್ಯಾನ ಹಾಗೂ ಚರಂಡಿ ಸ್ಥಳ ಅತಿಕ್ರಮಣ ಮಾಡಿಕೊಂಡಿದ್ದಾರೆ. ಖಾಸಗಿ ನಿವೇಶನಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ದೂರಿದರು.
ಅತಿಕ್ರಮಣ ಸಂಬಂಧ ಜಿಲ್ಲಾಡಳಿತಕ್ಕೆ ಅನೇಕ ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಕೂಡಲೇ ಅತಿಕ್ರಮಣವಾದ ಕೈಗಾರಿಕಾ ಪ್ರದೇಶದ ಜಾಗ ಸ್ವಾಧೀನಕ್ಕೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಭಾಲ್ಕಿ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸುದೀಪ್ ಡಿ. ತೂಗಾವೆ, ನಿಟ್ಟೂರು ವಲಯ ಘಟಕದ ಅಧ್ಯಕ್ಷ ಬಸವರಾಜ ಕಾರಬಾರಿ, ಕಾಶೀನಾಥ ಕಲ್ಕಪುರೆ, ಸುರೇಶ ಬಿರಾದಾರ, ಲೋಕೇಶ ಪಾಟೀಲ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.