ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ತಡೋಳಾ-ಮೇಹಕರ್ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸಲಹೆ
Last Updated 5 ನವೆಂಬರ್ 2022, 12:57 IST
ಅಕ್ಷರ ಗಾತ್ರ

ಬೀದರ್‌: ಬೆಳೆ ನಷ್ಟವಷ್ಟೇ ಅಲ್ಲ, ಇತರೆ ಕಾರಣಗಳಿಂದಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ತಡೋಳಾ-ಮೇಹಕರ್ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು ನುಡಿದರು.

ತಾಲ್ಲೂಕಿನ ಚಿಟ್ಟಾ ಗ್ರಾಮದ ಪ್ರಗತಿಪರ ರೈತ ಕಾಶಿನಾಥ ಸ್ವಾಮಿ ಅವರ ಹೋಲದಲ್ಲಿ ರಿಲಾಯನ್ಸ್ ಫೌಂಡೇಷನ್, ಪ್ರವರ್ದಾ ಮತ್ತು ಔಟ್ರಿಚ್ ಸಂಸ್ಥೆಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರೈತರಿಗೆ ಏರ್ಪಡಿಸಿದ್ದ ‘ಹವಾಮಾನಕ್ಕೆ ಅನುಗುಣವಾಗಿ ವೈಜ್ಞಾನಿಕ ಕೃಷಿ’ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದರು.

ಸಂಪನ್ಮೂಲ ಹೆಚ್ಚಿಸಲು, ಹವಾಮಾನ ವೈಪರೀತ್ಯ ಎದುರಿಸಲು, ಜೀವ ವೈವಿಧ್ಯ ವೃದ್ಧಿಗೆ ಹಾಗೂ ಕಡಿಮೆ ದರದಲ್ಲಿ ಕೃಷಿ ಸಂಪನ್ಮೂಲ ಮರು ಬಳಕೆ ಮಾಡಲು ಇಂದು ಸಮಗ್ರ ಕೃಷಿ ಅಗತ್ಯವಾಗಿದೆ. ರಾಜ್ಯದಲ್ಲಿ ಶೇ 70ರಷ್ಟು ಒಣ ಭೂಮಿ ಹಾಗೂ ಕೇವಲ ಶೇ 30 ರಷ್ಟು ಭಾಗ ನೀರಿದ್ದರೂ, ಅದನ್ನು ದುರುಪಯೋಗ ಮಾಡಲಾಗುತ್ತಿದೆ. ಕಡಿಮೆ ನೀರಿನಿಂದ ಹೆಚ್ಚು ಬೆಳೆಯುವ ಕೃಷಿ ಪದ್ಧತಿಯನ್ನು ನಮ್ಮ ರೈತರು ರೂಢಿಸಿಕೊಳ್ಳಬೇಕಿದೆ ಎಂದು ಹೇಳಿದರು.

ನೂತನ ತಂತ್ರಜ್ಞಾನಗಳನ್ನು ಆವಿಷ್ಕಾರಗೊಳಿಸಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ನೆರವಾಗಬೇಕಿದೆ. ನಿರುದ್ಯೋಗಿ ರೈತರ ಕೈಗೆ ಕೆಲಸ ನೀಡಬೇಕು. ಪ್ರಮುಖವಾಗಿ ಮಣ್ಣಿನ ಗುಣಮಟ್ಟ ವೃದ್ಧಿಸಬೇಕು. ಮಿಶ್ರ ಬೇಸಾಯ ಹಾಗೂ ಹಂದಿ, ಕುರಿ, ಕೋಳಿ, ಮೊಲ, ಮೀನು ಸಾಕುವುದು, ತರಕಾರಿಗಳನ್ನು ಬೆಳೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕೆವಿಕೆ ಮುಖ್ಯಸ್ಥ ಡಾ. ಸುನೀಲಕುಮಾರ ಎ.ಎನ್ ಎಂ ಮಾತನಾಡಿ, ರೈತರು ತಮ್ಮ ಜಿಲ್ಲೆಯ ವಾತಾವರಣದ ಮಾಹಿತಿಯನ್ನು ಪಡೆದು ಅದಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆದು ಹೆಚ್ಚಿನ ಇಳುವರಿ ಪಡೆಯಬೇಕು. ಕಡ್ಡಾಯವಾಗಿ ಹೊಲಗಳ ಮಣ್ಣು ಪರೀಕ್ಷೆ ಮಾಡಿಸಬೇಕು. ಇದರಿಂದ ತಮ್ಮ ಭೂಮಿಗೆ ಯಾವ ಪೋಷಕಾಂಶ ಕೊರತೆಯಿದೆ ಅನ್ನುವ ನಿಖರ ಮಾಹಿತಿ ದೊರಕಲಿದೆ ಎಂದರು.

ಪಶು ಪಾಲನಾ ಇಲಾಖೆ ಹಾಗೂ ಪಶು ಸೇವಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ನರಸಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರೈತರು ಕೃಷಿಯೊಂದಿಗೆ ಇನ್ನಿತರ ಜಾನುವಾರುಗಳನ್ನು ಸಾಕಬೇಕು. ಹವಾಮಾನ ಏರುಪೇರಿನಿಂದ ಬೆಳೆ ಬೆಳೆಯದ ಸಮಯದಲ್ಲಿ ಜಾನುವಾರುಗಳಿಂದ ಬರುವ ಆದಾಯದಿಂದ ಸಂಸಾರ ಸಾಗಿಸಲು ಸಹಕಾರಿಯಾಗಲಿದೆ ಎಂದರು.

ಬೀದರ್, ಔರಾದ್, ಬಸವಕಲ್ಯಾಣ, ಕಮಲನಗರ, ಹುಮನಾಬಾದ್, ಹುಲಸೂರು, ಭಾಲ್ಕಿ ತಾಲೂಕಿನ 700ಕ್ಕೂ ಹೆಚ್ಚಿನ ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ರೈತರು ಕೇಳಿದ ಪ್ರಶ್ನೆಗಳಿಗೆ ನೂರಿತ ವಿಷಯ ತಜ್ಞ ವಿಜ್ಞಾನಿಗಳು ಉತ್ತರ ನೀಡಿದರು. ಡಾ. ಆರ್‌.ಎಲ್. ಜಾಧವ್ , ಡಾ,. ಅಕ್ಷಯ ಕುಮಾರ, ಡಾ. ನರಸಪ್ಪ, ಕಾಶೀಲಿಂಗ ಸ್ವಾಮಿ, ರಾಮಚಂದ್ರ ಶೇರಿಕಾರ್, ಸಂಗಪ್ಪ ಅತಿವಾಳ, ಡಾ. ಪ್ರವೀಣ, ಡಾ. ಅಶೋಕ ಸೂರ್ಯವಂಶಿ, ರಾಜೇಂದ್ರ ಮಾಳಿ, ಸುನೀಲ್, ಮಚಿಂದ್ರ ಸುತಾರ ಇದ್ದರು. ಸಂಪನ್ಮೂಲವ್ಯಕ್ತಿ ಮಧುಕರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT