ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ತಾಸಿನಲ್ಲೇ ₹ 1.04 ಲಕ್ಷ ದಂಡ

ದಾಖಲೆಗಳ ಝೆರಾಕ್ಸ್‌ ಪರಿಗಣಿಸಲ್ಲ: ಟಿ.ಶ್ರೀಧರ್
Last Updated 6 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೀದರ್‌: ಕೇಂದ್ರ ಮೋಟಾರ್ ವಾಹನ (ತಿದ್ದುಪಡಿ) ಕಾಯ್ದೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸೆಪ್ಟೆಂಬರ್ 3 ರಂದು ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಜಿಲ್ಲೆಯ ಪೊಲೀಸರು ಮೋಟಾರ್ ವಾಹನ ಚಾಲನಾ ಸುರಕ್ಷತಾ ಕ್ರಮ ಉಲ್ಲಂಘಿಸುವವರ ವಿರುದ್ಧ ಬೇಟೆ ಆರಂಭಿಸಿದ್ದಾರೆ.

ಮೊದಲ ದಿನ ಗುರುವಾರ ಒಂದು ತಾಸು ನಡೆಸಿದ ಕಾರ್ಯಾಚರಣೆಯಲ್ಲಿ 107 ಪ್ರಕರಣ ದಾಖಲಿಸಿಕೊಂಡು ₹ 1.04 ಲಕ್ಷ ದಂಡ ವಿಧಿಸಿದ್ದಾರೆ. ನಗರದ ಹೊರವಲಯದಲ್ಲಿ ಬೇಟೆ ಆರಂಭಿಸಿದ್ದ ಪೊಲೀಸರು ನಗರದೊಳಗಡೆಯೂ ಕಾರ್ಯಾಚರಣೆ ಶುರು ಮಾಡಿದ್ದಾರೆ.

‘ಸೆಪ್ಟೆಂಬರ್ 1 ರಿಂದ 4ರ ವರೆಗೆ ಸಾರ್ವಜನಿಕರಿಗೆ ಹೊಸ ಕಾನೂನು ಅಂಶಗಳ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಸೆಪ್ಟೆಂಬರ್ 5 ರಿಂದ ಹೊಸ ದಂಡಗಳನ್ನು ವಿಧಿಸಲು ಆರಂಭಿಸಲಾಗಿದೆ. ಪೊಲೀಸರು ನಿಯಮ ಉಲ್ಲಂಘಿಸಿದರೆ ಹೊಸ ದಂಡದ ದುಪ್ಪಟ್ಟು ದಂಡ ವಿಧಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ತಿಳಿಸಿದ್ದಾರೆ.

ಸಾರ್ವಜನಿಕರ ಹಾಗೂ ವಾಹನ ಚಾಲಕರ ಹಿತದೃಷ್ಟಿಯಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ವಿಧಿ ಬದ್ಧವಾಗಿ ಪಾಲನೆ ಮಾಡಬೇಕು. ಪೊಲೀಸರು ದಾಖಲೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಮೂಲದಾಖಲೆಗಳನ್ನು ತೋರಿಸಬೇಕು. ಯಾವ ಕಾರಣಕ್ಕೂ ದಾಖಲೆಗಳ ಝೆರಾಕ್ಸ್‌ ಪರಿಗಣಿಸುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ದ್ವಿಚಕ್ರ ವಾಹನ ಚಾಲಕರು ಮತ್ತು ಹಿಂಬದಿ ಸವಾರರು ಹೆಲ್ಮೆಟ್, ಕಾರ್, ಜೀಪ್ ಚಾಲಕರು ಮತ್ತು ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚುವರಿ ಪ್ರಯಾಣಿಕರನ್ನು ಸಾಗಿಸುವಂತಿಲ್ಲ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವಂತಿಲ್ಲ.

ಚಾಲಕರು ವಾಹನದೊಂದಿಗೆ ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್, ಎಮಿಷನ್ ಸರ್ಟಿಫಿಕೇಟ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಹಾಗೂ ಪರ್ಮಿಟ್ ಮೂಲ ದಾಖಲಾತಿಗಳನ್ನು ಇಡತಕ್ಕದ್ದು. ಡ್ರೈವಿಂಗ್ ಲೈಸೆನ್ಸ್ ಹೊಂದಿರದ ವ್ಯಕ್ತಿಗಳಿಗೆ ಹಾಗೂ ಮಕ್ಕಳಿಗೆ ವಾಹನವನ್ನು ಚಾಲನೆ ಮಾಡಲು ನೀಡಿದ ವಾಹನದ ಮಾಲೀಕರಿಗೆ ₹ 25 ಸಾವಿರ ದಂಡದ ಜತೆಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

‘ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದರೆ ₹ 10 ಸಾವಿರ ದಂಡದ ಜತೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗಲಿದೆ. ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸುವಂತಿಲ್ಲ. ವಾಹನವನ್ನು ಆಯಾ ಸ್ಥಳಗಳಲ್ಲಿ ನಿಗದಿಪಡಿಸಿದ ವೇಗದ ಮಿತಿಯೊಳಗೆ ಚಾಲನೆ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾಹನಗಳ ಪಾರ್ಕಿಂಗ್ ಮಾಡಬೇಕು. ನಿಯಮ ಉಲ್ಲಂಘಿಸಿದರೆ ದಂಡ ಪಾವತಿಸಲು ಸಿದ್ಧವಾಗಿರಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT