ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಕನ್ನಡ ನುಡಿಸೇವಕ ದಿಲೀಪಗಿರಿ

ಸರಸ್ವತಿ ಪ್ರೌಢಶಾಲೆಯಲ್ಲಿ 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಉಚಿತ ಶಿಕ್ಷಣ
Last Updated 27 ನವೆಂಬರ್ 2022, 4:25 IST
ಅಕ್ಷರ ಗಾತ್ರ

ಬಸವಕಲ್ಯಾಣ: ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಗಟ್ಟಲೇ ವಂತಿಗೆ ಪಡೆಯುತ್ತಿರುವಾಗ ಕನ್ನಡದಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತಿರುವ ಸಂಸ್ಥೆ ಇದೆಯೆಂದರೆ ಯಾರೂ ನಂಬಲಾರರು. ಆದರೆ, ತಾಲ್ಲೂಕಿನ ಗೋಕುಳದ ದಿಲೀಪಗಿರಿ ಗೋಸಾಯಿ ಅವರು ಹರಿಓಂ ಶಿಕ್ಷಣ ಸಂಸ್ಥೆಯ ಸರಸ್ವತಿ ಪ್ರೌಢಶಾಲೆಯಲ್ಲಿ ಇಂಥ ಸೌಲಭ್ಯ ಒದಗಿಸಿದ್ದಾರೆ. ಈ ಮೂಲಕ ಕನ್ನಡ ನುಡಿಸೇವೆ ಮಾಡುತ್ತಿದ್ದಾರೆ.

ಇಲ್ಲಿ ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ತರಗತಿಗಳು ನಡೆಯುತ್ತವೆ. ಆದರೆ, ಯಾವ ವಿದ್ಯಾರ್ಥಿಯಿಂದಲೂ ಶುಲ್ಕ ಮತ್ತು ವಂತಿಗೆ ಪಡೆಯುವುದಿಲ್ಲ. ಸಮವಸ್ತ್ರ ಮತ್ತು ಪಠ್ಯಪುಸ್ತಕ ಕೂಡ ಸಂಸ್ಥೆಯಿಂದಲೇ ನೀಡಲಾಗುತ್ತದೆ. 17 ವರ್ಷಗಳಿಂದ ಸತತವಾಗಿ ಈ ಸೇವೆ ಚಾಲ್ತಿಯಲ್ಲಿದೆ. ದಿಲೀಪಗಿರಿ ಅವರು ಸ್ವಂತ ಮನೆಯ ಅಂಗಳದಲ್ಲಿಯೇ ಶಾಲೆ ನಡೆಸುತ್ತಾರೆ. ಕೊಠಡಿಗಳ ಮೇಲೆ ತಗಡುಗಳು ಇದ್ದರೂ ಎಲ್ಲವೂ ಸುವ್ಯವಸ್ಥಿತವಾಗಿದೆ. ಪಾಠೋಪಕರಣ, ಪೀಠೋಪಕರಣಗಳ ಉತ್ತಮ ವ್ಯವಸ್ಥೆ ಇದೆ. ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಮುಖ್ಯವೆಂದರೆ, ನುರಿತ ಶಿಕ್ಷಕರು ಇದ್ದಾರೆ. ದಿಲೀಪಗಿರಿ ಒಳಗೊಂಡು ಅವರ ತಾಯಿ, ಪತ್ನಿ, ಮಗ, ಮಗಳು ಸಹ ಯಾವುದೇ ಕಾರ್ಯವನ್ನು ಕಾಳಜಿ ವಹಿಸಿ ಕೈಗೊಳ್ಳುತ್ತಾರೆ. ಸ್ವಚ್ಛತೆ, ಪೀಠೋಪಕರಣ ಜೋಡಿಸುವಿಕೆ, ಸಭೆ, ಸಮಾರಂಭಗಳ ವ್ಯವಸ್ಥೆ ಹಾಗೂ ಇತರೆ ಕೆಲಸಗಳಲ್ಲಿ ಕೈಗೂಡಿಸುತ್ತಾರೆ.

ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಣ್ಣಸ್ವಾಮಿ ಅವರು ಶಾಲೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ್ದಾರೆ. ಪಾಲಕರು ಹಾಗೂ ಮಕ್ಕಳ ಅಭಿಪ್ರಾಯ ಪಡೆದು ಉಚಿತ ಶಿಕ್ಷಣ ನೀಡುವ ಶಾಲೆ ಎಂದು ಪ್ರಮಾಣಪತ್ರ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯಿಂದಲೂ ಪ್ರಮಾಣಪತ್ರ ನೀಡಲಾಗಿದೆ. `ಇಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಕೂಡ ಸಂಭ್ರಮದಿಂದ ಆಚರಿಸಲಾಗುತ್ತದೆ’ ಎಂದು ಪಾಲಕರಾದ ವಿಜಯಕುಮಾರ ತಿಳಿಸಿದ್ದಾರೆ.

`ದಿಲೀಪಗಿರಿಯವರು ಉಚಿತ ಶಿಕ್ಷಣ ನೀಡುವ ಜತೆಗೆ ಶ್ರೀಗಂಧ, ಮಾವು ಬೆಳೆದು ಪ್ರಗತಿಪರ ಕೃಷಿಯೂ ಕೈಗೊಂಡಿದ್ದಾರೆ. ಇವರ ಸೇವೆ ಅನನ್ಯ, ಅನುಪಮವಾದುದು’ ಎಂದು ಮುಚಳಂಬ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

‘ಇವರ ಸೇವೆ ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಶಿಕ್ಷಣ ಪ್ರಸಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ’ ಎಂದು ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಗುರು ದೇಗಾಂವ ತಿಳಿಸಿದ್ದಾರೆ.

`ಬಡತನದಲ್ಲಿ ಹುಟ್ಟಿದ್ದರಿಂದ ಹೆಚ್ಚಿನ ಶಿಕ್ಷಣ ಪಡೆಯಲಾಗಲಿಲ್ಲ. ಊರಿನವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೃಷಿ ಕಾಯಕ, ವ್ಯಾಪಾರ ಕೈಗೊಂಡು ಅದರಿಂದ ಬಂದ ಲಾಭದಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದೇನೆ. ಕೇಂದ್ರ ಇಲ್ಲವೆ ರಾಜ್ಯ ಸರ್ಕಾರದಿಂದ ಅನುದಾನ ಪಡೆದು ಶಾಲೆಗೆ ಕಾಯಂ ವ್ಯವಸ್ಥೆ ಕೈಗೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದೇನೆ’ ಎಂದು ದಿಲೀಪಗಿರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT