ಕಲಾ ಗ್ಯಾಲರಿ ನಿರ್ಮಾಣಕ್ಕೆ ‘ಗಣೇಶ’ನ ಮೊರೆ

7
ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು

ಕಲಾ ಗ್ಯಾಲರಿ ನಿರ್ಮಾಣಕ್ಕೆ ‘ಗಣೇಶ’ನ ಮೊರೆ

Published:
Updated:
Deccan Herald

ಬೀದರ್: ಪಾಠದ ಭಾಗವಾಗಿ ಕಳೆದ ವರ್ಷ 15 ಚಿಕ್ಕ ಮಣ್ಣಿನ ಗಣಪತಿಗಳನ್ನು ತಯಾರಿಸಿ ಭಕ್ತರಿಗೆ ಮಾರಾಟ ಮಾಡಿ ಒಂದಿಷ್ಟು ಆದಾಯ ಪಡೆದಿದ್ದ ಇಲ್ಲಿಯ ಡಾ.ಎಚ್‌.ಎಂ.ಪಂಡಿತ ಫೈನ್‌ ಆರ್ಟ್‌ ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷ ‘ಕಲಾ ಗ್ಯಾಲರಿ ನಿರ್ಮಾಣ’ ಗುರಿಯೊಂದಿಗೆ ಗಣಪತಿ ಮೂರ್ತಿಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ.

ಪರಿಸರ ಸ್ನೇಹಿ ಗಣೇಶನ ಮೂರ್ತಿಗಳಿಗೆ ಬೇಡಿಕೆ ಇರುವುದನ್ನು ಮನಗಂಡು ಆಗಸ್ಟ್‌ ಮೊದಲ ವಾರದಲ್ಲೇ ನೌಬಾದ್‌ನಲ್ಲಿ ಮಣ್ಣು ಅಗೆದು ಕಾಲೇಜಿಗೆ ತಂದು ಸಂಸ್ಕರಣೆ ಮಾಡಿ ಹದಗೊಳಿಸಿ ಅನೇಕ ಬಗೆಯ ಮೂರ್ತಿಗಳಿಗೆ ಜೀವ ತುಂಬುತ್ತಿದ್ದಾರೆ.

ಪ್ರಾಚಾರ್ಯ ಪ್ರವೀಣ ಅಶೋಕ ಗುತ್ತೆ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಅಜಯ ಸಾಗರ, ಓಂಕಾರ ಕಲ್ಲಪ್ಪ, ಸುನೀಲ್‌ ರೇವಣಸಿದ್ದಪ್ಪ, ರಾಕೇಶ ಬಂಧು, ಪವನ ದಿಗಂಬರ್‌ರಾವ್, ನಾಗೇಶ ಮಾರುತಿ, ಶ್ರೀಕಾಂತ ಬಂಬುಳಗೆ ಸೇರಿಕೊಂಡು 200 ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.

‘ಗುಂಪಾದ ಸಿದ್ಧಾರೂಢ ಗಣೇಶ ಮಂಡಳಿಯವರ ಮನವಿಯ ಮೇರೆಗೆ ಕಳೆದ ವರ್ಷ ಎರಡು ಟನ್‌ ಭಾರದ 15 ಅಡಿ ಎತ್ತರದ ಮಣ್ಣಿನ ಮೂರ್ತಿಯನ್ನು ತಯಾರಿಸಿದ್ದೇವು. ಇದರೊಂದಿಗೆ 12 ದೊಡ್ಡ ಹಾಗೂ 15 ಚಿಕ್ಕ ಮೂರ್ತಿಗಳನ್ನು ತಯಾರಿಸಿದ್ದೇವು. ಸಣ್ಣ ಗಣಪತಿಗಳು ಭಕ್ತರ ಮನಸೆಳೆದವು. ಹೀಗಾಗಿ ಈ ವರ್ಷ 200 ಮೂರ್ತಿಗಳನ್ನು ತಯಾರಿಸಿದ್ದೇವೆ’ ಎನ್ನುತ್ತಾರೆ ಪ್ರವೀಣ ಗುತ್ತೆ.

‘ಮಣ್ಣಿನ ಮೂರ್ತಿ ತಯಾರಿಕೆಯು ಫೈನ್‌ ಆರ್ಟ್‌ ವಿದ್ಯಾರ್ಥಿಗಳಿಗೆ ಪಠ್ಯದ ಒಂದು ಭಾಗವಾಗಿದೆ. ಪ್ರಾಯೋಗಿಕ ಪಾಠದ ಜತೆಗೆ ಮೂರ್ತಿ ತಯಾರಿಸುವುದನ್ನು ಹೇಳಿಕೊಡುತ್ತೇವೆ. ಮೂಷಕ, ಆನೆ, ಹೂವು ಹಾಗೂ ಮೀನು ಹೀಗೆ ಹತ್ತು ಹಲವು ವಿನ್ಯಾಸಗಳಲ್ಲಿ ಏಕದಂತನ ಮೂರ್ತಿಗಳನ್ನು ರೂಪಿಸಿದ್ದೇವೆ’ ಎಂದು ಖುಷಿಯಿಂದ ಹೇಳುತ್ತಾರೆ.

‘ಮಣ್ಣಿನ ಮೂರ್ತಿ ತಯಾರಿಕೆಗೆ ಶ್ರಮ ಅಧಿಕ ಇದೆ. ಹೀಗಾಗಿ ಒಂದು ಮೂರ್ತಿಗೆ ₹ 1 ಸಾವಿರ ಬೆಲೆ ನಿಗದಿಪಡಿಸಿದ್ದೇವೆ. ಭಕ್ತರು ಚೌಕಾಶಿ ಮಾಡಿ ಮೂರ್ತಿಗಳನ್ನು ಒಯ್ಯುತ್ತಾರೆ. ಈಗಾಗಲೇ 30 ಮೂರ್ತಿಗಳು ಬುಕ್‌ ಆಗಿವೆ. ಮೂರ್ತಿ ಮಾರಾಟದಿಂದ ಬಂದ ಹಣವನ್ನು ಸ್ವಂತಕ್ಕೆ ಬಳಸುವುದಿಲ್ಲ. ಮೂರ್ತಿ ತಯಾರಿಸಲು ಮನೆಯೊಂದನ್ನು ಬಾಡಿಗೆ ಪಡೆದಿದ್ದೇವೆ. ಬಾಡಿಗೆ, ವಿದ್ಯುತ್‌ ಬಿಲ್‌, ಬಣ್ಣ, ಇನ್ನಿತರ ಖರ್ಚುಗಳನ್ನು ಕಳೆದು ಉಳಿದ ಹಣವನ್ನು ಕಲಾ ಗ್ಯಾಲರಿ ನಿರ್ಮಿಸಲು ಬಳಸಿಕೊಳ್ಳಲಿದ್ದೇವೆ’ ಎಂದು ತಿಳಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !