ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕೋಟಿ ಖರ್ಚಾದರೂ ಅರಳದ ಉದ್ಯಾನಗಳು

Last Updated 20 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಬೀದರ್‌: ಪರಂಪರೆ ನಗರದ ಅಂದವನ್ನು ಹೆಚ್ಚಿಸುವ ದಿಸೆಯಲ್ಲಿ 2016ರಲ್ಲಿ ಕೋಟ್ಯಂತದ ರೂಪಾಯಿ ಖರ್ಚು ಮಾಡಿ ನಗರದಲ್ಲಿ 34 ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮೂರು ವರ್ಷ ಕಳೆದರೂ ಉದ್ಯಾನಗಳು ಅರಳಿಲ್ಲ.

ಜಿಲ್ಲಾ ನಗರ ಅಭಿವೃದ್ಧಿ ಕೋಶ, ನಗರಸಭೆ, ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಉದ್ಯಾನ ಅಭಿವೃದ್ದಿ ಯೋಜನೆ ಮೂಲೆಗುಂಪಾಗಿದೆ. ನಗರದ ಬಹುತೇಕ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ನಗರದ ಬಡಾವಣೆಗಳ ನಿವಾಸಿಗಳ ಪಾಲಿಗೆ ಉದ್ಯಾನ ನಿರ್ಮಾಣದ ಯೋಜನೆ ಕನಸಾಗಿಯೇ ಉಳಿದಿದೆ.

ಓಲ್ಡ್‌ಸಿಟಿಯಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ ನಿವಾಸದ ಸಮೀಪ ಮೈದಾನಕ್ಕೆ ತಡೆಗೋಡೆ ನಿರ್ಮಿಸಿ ಒಳಗಡೆ ಒಂದಿಷ್ಟು ಪಾದಚಾರಿ ರಸ್ತೆ ನಿರ್ಮಿಸಲಾಗಿದೆ. ಮೈದಾನದೊಳಗೆ ಕೆಂಪು ಮಣ್ಣು ಸುರಿದಿದ್ದು ಬಿಟ್ಟರೆ ಯಾವುದೇ ಕಾಮಗಾರಿ ನಡೆದಿಲ್ಲ.

ಉದ್ಯಾನಕ್ಕೆ ಎರಡು ಬದಿಗೆ ಕಬ್ಬಿನದ ಬಾಗಿಲು ನಿರ್ಮಿಸಲಾಗಿದೆ. ಆದರೆ ಅವುಗಳನ್ನು ಸರಿಯಾಗಿ ಮುಚ್ಚುವ ವ್ಯವಸ್ಥೆ ಇಲ್ಲ. ನಗರದ ಕೇಂದ್ರ ಸ್ಥಾನದಲ್ಲಿದ್ದರೂ ಉದ್ಯಾನದ ಮುಂದೆ ಗಟಾರ ನಿರ್ಮಾಣ ಮಾಡಿಲ್ಲ. ದಾರಿಹೋಕರು ಉದ್ಯಾನದ ಪ್ರವೇಶದಲ್ಲಿ ಮೂತ್ರವಿಸರ್ಜನೆ ಮಾಡಿ ಹೋಗುತ್ತಿದ್ದಾರೆ.

ಮೈದಾನ ಇದ್ದಾಗ ಓಲ್ಡ್‌ಸಿಟಿಯ ಮಕ್ಕಳು ಕ್ರಿಕೆಟ್‌ ಮತ್ತಿತರ ಆಟಗಳನ್ನು ಆಡುತ್ತಿದ್ದರು. ಅಲ್ಲಿ ಮಣ್ಣು ಸುರಿದು ಹೋದ ಮೇಲೆ ಮಕ್ಕಳ ಆಟಕ್ಕೂ ಜಾಗವಿಲ್ಲದಂತಾಗಿದೆ. ಬೆಳಗಿನ ಜಾವ ವಾಯುವಿಹಾರ ಹಾಗೂ ಸಂಜೆ ಒಂದಿಷ್ಟು ಸಮಯ ಉದ್ಯಾನದಲ್ಲಿ ಕಳೆಯಬೇಕೆಂದರೆ ಇಲ್ಲಿ ಉದ್ಯಾನವೇ ಇಲ್ಲವಾಗಿದೆ.

ಮಕ್ಕಳು ಆಟವಾಡಲು ಅನುಕೂಲವಾಗವಂತೆ ಮೈದಾನವನ್ನು ಹಾಗೆಯೇ ಉಳಿಸಿಕೊಳ್ಳುವಂತೆ ಓಲ್ಡ್‌ಸಿಟಿಯ ಅನೇಕ ಸಂಘಟನೆಗಳು ನಗರಸಭೆ ಹಾಗೂ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದ್ದವು. ಅಧಿಕಾರಿಗಳು ಜನರ ಮನವಿಗೆ ಬೆಲೆಕೊಡದೆ ಉದ್ಯಾನ ನಿರ್ಮಾಣಕ್ಕೆ ಮುಂದಾದರೂ ಕೈಹಿಡಿದ ಕಾರ್ಯವನ್ನು ಪೂರ್ಣಗೊಳಿಸಲಿಲ್ಲ.

ಮುಲ್ತಾನಿಪಾಷಾ ದರ್ಗಾ ಸಮೀಪದ ಹಳೆಯದಾದ ಉದ್ಯಾನದಲ್ಲಿ ವಾಕಿಂಗ್‌ಪಾತ್ ಮಾತ್ರ ನಿರ್ಮಿಸಲಾಗಿದೆ. ಉದ್ಯಾನದೊಳಗಿನ ಮಕ್ಕಳ ಆಟಿಗೆ ಸಾಮಾನುಗಳು ತುಕ್ಕು ಹಿಡಿದಿವೆ. ಇಲ್ಲಿನ ಶುದ್ಧ ನೀರಿನ ಘಟಕ ಬಾಗಿಲು ಮುಚ್ಚಿದೆ. ಮೊಲ, ಪಾರಿವಾಳಗಳನ್ನು ಇಟ್ಟಿದ ಕೊಠಡಿಗಳು ಪಾಳು ಬಿದ್ದಿವೆ. ಉದ್ಯಾನದೊಳಗೆ ದಾರಿದೀಪಗಳು ಹಾಳಾಗಿ ನೇತಾಡುತ್ತಿವೆ. ಕಾರಂಜಿಗಳು ಒಡೆದು ಬಿರುಕು ಬಿಟ್ಟಿವೆ. ಉದ್ಯಾನದ ಪ್ರವೇಶ ದ್ವಾರಕ್ಕೆ ಬಣ್ಣ ಬಳಿದಿದ್ದನ್ನು ಬಿಟ್ಟರೆ ಅದಕ್ಕೆ ನಾಮಕ ಫಲಕವನ್ನೂ ಹಾಕಿಲ್ಲ.

ಉದ್ಯಾನದ ಒಂದು ಬದಿಯಲ್ಲಿ ನಗರಸಭೆಯ ಹಾಳಾದ ಕಸ ತುಂಬುವ ಕಂಟೇನರ್‌ಗಳನ್ನು ಒಂದುಕಡೆ ಜೋಡಿಸಿ ಇಡಲಾಗಿದೆ. ಉದ್ಯಾನಕ್ಕೆ ಬಂದರೆ ಕಸದ ದೊಡ್ಡ ತೊಟ್ಟಿಗಳೇ ಕಣ್ಣಿಗೆ ಬೀಳುತ್ತವೆ. ಉದ್ಯಾನದ ಕಾವಲುದಾರರೇ ಅಲ್ಲಲ್ಲಿ ಬೆಳೆದ ಕಸ ತೆಗೆದು ಸ್ವಚ್ಛತೆ ಕಾಪಾಡಲು ಪ್ರಯತ್ನಿಸುತ್ತಿದ್ದಾರೆ.

ನಗರಸಭೆಯಿಂದ ನೂರು ಅಡಿ ಅಂತರದಲ್ಲಿ ಇರುವ ಎಲ್‌ಐಸಿ ಕಚೇರಿ ಮುಂದಿನ ಉದ್ಯಾನದ ಸ್ಥಿತಿ ಇನ್ನೂ ಭಿನ್ನವಾಗಿದೆ. ಇಲ್ಲಿ ಸಹ ಗುತ್ತಿಗೆದಾರರು ಮಣ್ಣು ಸುರಿದು ಹೋಗಿದ್ದಾರೆ. ಉದ್ಯಾನ ನಿರ್ಮಾಣಕ್ಕೆ ಯಾವುದೇ ಪ್ರಯತ್ನ ನಡೆದಿಲ್ಲ. ಗುತ್ತಿಗೆದಾರ ಹಾಗೂ ಅಧಿಕಾರಿಗಳು ಸೇರಿ ಹಣ ಲಪಟಾಯಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹಿರಿಯ ಅಧಿಕಾರಿಗಳು ತನಿಖೆ ನಡೆಸಿದರೆ ಎಲ್ಲವೂ ಬಹಿರಂಗವಾಗಲಿದೆ ಎಂದು ಮೋಹನ್‌ ಮಾರ್ಕೆಟ್‌ ವ್ಯಾಪಾರಿಗಳು ಹೇಳುತ್ತಾರೆ.

ಲುಂಬಿಣಿನಗರದಲ್ಲೂ ಉದ್ಯಾನ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅಲ್ಲಿನ ಉದ್ಯಾನದ ಜಾಗವನ್ನೇ ಸಮತಟ್ಟುಗೊಳಿಸಿಲ್ಲ. ಮನೆಗಳ ಹೊಲಸು ನೀರು ಉದ್ಯಾನದ ಸ್ಥಳದಲ್ಲಿ ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಲುಂಬಿಣಿನಗರದ ನಿವಾಸಿಗಳು ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿಸಲ್ಲಿಸಿ ಬೇಸತ್ತು ಕೈಚೆಲ್ಲಿ ಕುಳಿತಿದ್ದಾರೆ. ಇಲ್ಲಿಯ ನಿವಾಸಿಗಳಿಗೆ ಉದ್ಯಾನ ಅಂದರೆ ಹಗಲಲ್ಲಿ ನಕ್ಷತ್ರ ನೋಡಿದಂತಾಗುತ್ತಿದೆ.

ಮಹಿಳೆಯರು ಮಕ್ಕಳು ಮನೆಯಿಂದ ಹೊರಗೆ ಬಂದು ಒಂದಿಷ್ಟು ಸಮಯವನ್ನು ಕಳೆಯಲು ಜಾಗವೇ ಇಲ್ಲವಾಗಿದೆ. ಲುಂಬಿಣಿನಗರವೂ ನಗರಸಭೆ ವ್ಯಾಪ್ತಿಯಲ್ಲಿ ಇದೆ ಎನ್ನುವುದನ್ನು ನಗರಸಭೆಯ ಅಧಿಕಾರಿಗಳು ಮರೆತೇ ಬಿಟ್ಟಿದ್ದಾರೆ.

ಜ್ಯೋತಿ ಕಾಲೊನಿಯಲ್ಲೂ ಒಂದು ಉದ್ಯಾನ ನಿರ್ಮಾಣ ಮಾಡಿದ್ದಾರೆ. ಕಾಮಗಾರಿ ಅಚ್ಚುಕಟ್ಟಾಗಿಲ್ಲ. ಉದ್ಯಾನದಲ್ಲಿ ಎದೆ ಮಟ್ಟದಲ್ಲಿ ಹುಲ್ಲುಕಸ ಬೆಳೆದು ನಿಂತಿದೆ. ನಿರ್ವಹಣೆಯ ಕೊರತೆಯಿಂದ ಉದ್ಯಾನ ಸ್ವರೂಪ ಕಳೆದುಕೊಳ್ಳುತ್ತಿದೆ. ಗುರುನಗರ, ಸಿದ್ಧರಾಮೇಶ್ವರ ಕಾಲೊನಿ ಹಾಗೂ ವಿದ್ಯಾನಗರದ ಉದ್ಯಾನಗಳ ಸ್ಥಿತಿಯೂ ಹೀಗೆಯೇ ಇದೆ.

ಅಮೃತ್ ಯೋಜನೆ ಹಣನೀರು ಪಾಲು
ಬೀದರ್:
ಅನುರಾಗ ತಿವಾರಿ ಅವರು ಜಿಲ್ಲಾಧಿಕಾರಿಯಾಗಿದ್ದಾಗ 13ನೇ ಹಣಕಾಸು ಹಾಗೂ 14ನೇ ಹಣಕಾಸು ಆಯೋಗದ ಅನುದಾನ, 2015–16ನೇ ಹಣಕಾಸು ವರ್ಷದ ಎಸ್ಎಫ್‌ಸಿ ಮುಕ್ತನಿಧಿ ಹಾಗೂ ಅಮೃತ ಯೋಜನೆಯ ಅನುದಾನದಲ್ಲಿ ಉದ್ಯಾನ ಅಭಿವೃದ್ಧಿ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿತ್ತು.

ನಗರದ ಬ್ಯಾಂಕ್‌ ಕಾಲೊನಿ, ಜ್ಯೋತಿ ಕಾಲೊನಿ, ಆದರ್ಶ ಕಾಲೊನಿ, ಬಸವೇಶ್ವರನಗರ, ಗಣೇಶನಗರ, ನೌಬಾದ್‌ನ ಲುಂಬಿಣಿನಗರ, ಪ್ರತಾಪನಗರ ಹೌಸಿಂಗ್‌ ಬೋರ್ಡ್‌, ಬುಡಾ ಲೇಔಟ್, ಮೈಲೂರ್‌ ಕೆಇಬಿ ಕಾಲೊನಿ, ಚಿದ್ರಿಯ ಸಿದ್ದರಾಮಯ್ಯ ಲೇಔಟ್, ಬಸವನಗರ, ಅಕ್ಕಮಹಾದೇವಿ ಕಾಲೊನಿ, ಗುಂಪಾದ ಕೈಲಾಸನಗರ, ಹನುಮಾನನಗರ, ಬಲಬೀರಸಿಂಗ್‌ ಲೇಔಟ್, ಓಲ್ಡ್‌ ಸಿಟಿಯ ಗುಲ್ಜಾರ್‌ ಥೇಟರ್ ಬಳಿ ಕಾಮಗಾರಿ ನಡೆದಿತ್ತು. ತಿವಾರಿ ವರ್ಗಾವಣೆ ನಂತರ ಎಲ್ಲವೂ ಮೂಲೆಗುಂಪಾಗಿದೆ.

ನೌಬಾದ್‌ ಕೈಗಾರಿಕೆ ಅಭಿವೃದ್ಧಿ ನಿಗಮದ ಪ್ರದೇಶದಲ್ಲಿ ಎರಡು ಉದ್ಯಾನ, ಸಹ್ಯಾದ್ರಿನಗರ, ಶಿವನಗರ ಉತ್ತರದಲ್ಲಿರುವ ಪಾಪನಾಶ ಗೇಟ ಒಳಗಿನ ಉದ್ಯಾನ, ಮೃತ್ಯುಂಜಯನಗರ, ನಂದಿನಿ ಕಾಲೊನಿ, ಕೃಷಿ ಕಾಲೊನಿ, ಅಲ್ಲಮಪ್ರಭುನಗರ, ಶಾಸ್ತ್ರಿನಗರ ಹಾಗೂ ವೈದಿಕನಗರದ ಖಾಲಿ ಜಾಗವನ್ನು ಉದ್ಯಾನಕ್ಕೆ ಮೀಸಲಾಗಿದೆ. ನಗರದಲ್ಲಿ ಕೆಲವು ಉದ್ಯಾನಗಳು ಅತಿಕ್ರಮಣಕ್ಕೆ ಒಳಗಾಗಿದ್ದರೂ ಕೇಳುವವರಿಲ್ಲ.

ನಗರಸಭೆ ಏನು ಮಾಡಬೇಕು
1.ನಗರದ ಎಲ್ಲ 34 ಉದ್ಯಾನಗಳ ಅಭಿವೃದ್ಧಿ ಮಾಡಬೇಕು.
2.ಉದ್ಯಾನ ಅತಿಕ್ರಮಣ ತಡೆಯಲು ತಂತಿಬೇಲಿ ಹಾಕಬೇಕು
3.ಉದ್ಯಾನದಲ್ಲಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡ ತೆರವುಗೊಳಿಸಬೇಕು
4.ಪ್ರವಾಸಿಗರು ಸಮಯ ಕಳೆಯಲು ಅನುಕೂಲ ಮಾಡಬೇಕು
5.ದೊಡ್ಡ ಉದ್ಯಾನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು
6.ಉದ್ಯಾನ ನಿರ್ವಹಣೆಗೆ ಅನುದಾನ ಕಾಯ್ದಿರಿಸಬೇಕು

ಸಾರ್ವಜನಿಕರು ಏನು ಮಾಡಬೇಕು
1.ಬಡಾವಣೆಯ ಉದ್ಯಾನ ರಕ್ಷಣೆಗೆ ರಹವಾಸಿಗಳ ಸಂಘ ಸ್ಥಾಪಿಸಬೇಕು
2.ಉದ್ಯಾನದಲ್ಲಿ ಬಿಡಾಡಿದನಗಳು ಪ್ರವೇಶಿಸದಂತೆ ಎಚ್ಚರವಹಿಸಬೇಕು
3.ಸಾರ್ವಜನಿಕ ಸಹಭಾಗಿತ್ವದಲ್ಲಿ ಉದ್ಯಾನ ಅಭಿವೃದ್ಧಿಗೆ ಕೈಜೋಡಿಸಬೇಕು
4.ಉದ್ಯಾನ ಅತಿಕ್ರಮಣ ತಡೆಯಲು ಜಿಲ್ಲಾ ಆಡಳಿತಕ್ಕೆ ಸಹಕಾರ ನೀಡಬೇಕು
5.ರಜಾದಿನಗಳಲ್ಲಿ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು
6. ಅಲಂಕಾರಿಕ ಸಸ್ಯಗಳನ್ನು ನೀರೆರೆದು ಬೆಳೆಸಬೇಕು

*
ಬೀದರ್‌ನ ಓಲ್ಡ್‌ಸಿಟಿಯಲ್ಲಿ ಮಕ್ಕಳ ಆಟಕ್ಕೆ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಮೈದಾನ ಉಳಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ.
-ಶಾಹೇದ್‌ಅಲಿ, ಯುವ ಮುಖಂಡ

*
ನಗರದಲ್ಲಿನ ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಸಂಪೂರ್ಣ ವಿಫಲವಾಗಿವೆ. ಉದ್ಯಾನ ಅಭಿವೃದ್ಧಿ ಹೆಸರಲ್ಲಿ ಕೋಟ್ಯಂತರ ಖರ್ಚು ಮಾಡಲಾಗಿದೆ. ಆದರೆ ಅಷ್ಟು ಮೊತ್ತದ ಕಾಮಗಾರಿ ನಡೆದಿಲ್ಲ.
-ಮಲ್ಲಿಕಾರ್ಜುನ ಸಂಗಮ, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT