ಶನಿವಾರ, ಮೇ 28, 2022
26 °C

ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಪಡೆಯರಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್ ಸೋಂಕಿಗೆ ಸಂಪೂರ್ಣವಾಗಿ ಮಟ್ಟಹಾಕಲು ತಪ್ಪದೆ ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೋವಿಡ್ ಲಸಿಕೆಯ ಕುರಿತು ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿರುವುದರಿಂದ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದೆ. ಪ್ರಧಾನಿ, ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರು ಸೇರಿ ಅನೇಕ ಪ್ರಮುಖರು ಲಸಿಕೆ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಮೊದಲು ಲಸಿಕೆಯ ಬಗ್ಗೆ ಅಪಸ್ವರ ಎತ್ತಿದವರು ಲಸಿಕೆಯ ಮಹತ್ವ ಅರಿವಾದ ನಂತರ ಲಸಿಕೆ ಪಡೆಯುತ್ತಿದ್ದಾರೆ. ಹೀಗಾಗಿ ಲಸಿಕೆಯ ಬಗ್ಗೆ ಯಾವುದೇ ರೀತಿಯ ಅನುಮಾನಗಳು ಬೇಡ ಎಂದಿದ್ದಾರೆ.

ಬೀದರ್ ಜಿಲ್ಲೆಗೆ ಈವರೆಗೆ ಕೇಂದ್ರ ಸರ್ಕಾರದಿಂದ 2,84,279 ಡೋಸ್ ಹಾಗೂ ರಾಜ್ಯ ಸರ್ಕಾರದಿಂದ 67,986 ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸುವ ದೃಢ ಸಂಕಲ್ಪ ಮಾಡಿದ್ದು, ಇದಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಉತ್ತಮ ಸಹಕಾರ ನೀಡುತ್ತಿವೆ. ಪರಿಣಾಮವಾಗಿ, ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳಿದ್ದಾರೆ.

ಸೋಂಕನ್ನು ಸಂಪೂರ್ಣವಾಗಿ ನಿವಾರಿಸಲು ಲಸಿಕೆ ರಾಮಬಾಣದಂತೆ ಕೆಲಸ ಮಾಡುತ್ತ್ತದೆ. ಜೂನ್ 21ರಿಂದ ಕೇಂದ್ರ ಸರ್ಕಾರದಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುತ್ತಿದೆ. ಯಾವುದೇ ರೀತಿಯ ಅಪಪ್ರಚಾರಗಳಿಗೆ ಕಿಡಿಗೊಡದೆ ವೈಯಕ್ತಿಕ ಮತ್ತು ಕುಟುಂಬದವರ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ.

ಹೊಸ ರೋಗಿಗಳ ಪತ್ತೆ ಹಾಗೂ ಚಿಕಿತ್ಸೆ ನೀಡುವ ಉದ್ದೇಶದಿಂದ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ಮನೆಗೆ ಭೇಟಿ ನೀಡಿ, ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಜಿಲ್ಲೆಯಲ್ಲಿ ಶೇ 100 ರಷ್ಟು ಅನುಷ್ಠಾನಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು