ಸೋಮವಾರ, ಅಕ್ಟೋಬರ್ 18, 2021
27 °C

ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆಗೆ ಜಾಗೀರದಾರ್ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಜ್ಯದ ಕ್ರೈಸ್ತ ಮಿಷನರಿಗಳು ಮತಾಂತರ ಮಾಡುತ್ತಿವೆ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ವಿಧಾನಸಭೆಯಲ್ಲಿ ಆರೋಪಿಸಿರುವುದನ್ನು ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಸಂಜಯ್ ಜಾಗೀರದಾರ್ ತೀವ್ರವಾಗಿ ಖಂಡಿಸಿದ್ದಾರೆ.

ಶಾಸಕ ಸ್ಥಾನದಲ್ಲಿ ಇರುವವರು ಜವಾಬ್ದಾರಿಯಿಂದ ಮಾತನಾಡಬೇಕು. ಸುಳ್ಳು ಹೇಳಿಕೆ ಕೊಟ್ಟು ಧಾರ್ಮಿಕ ಭಾವನೆ ಕೆರಳಿಸುವ ಕೆಲಸ ಮಾಡಬಾರದು. ಅವರ ತಾಯಿಯನ್ನು ಯಾರೂ ಬಲವಂತದಿಂದ ಮತಾಂತರ ಮಾಡಿಲ್ಲ ಎಂದು ಹೇಳಿದ್ದಾರೆ.

ಕ್ರೈಸ್ತ ಧರ್ಮ ಗುರುಗಳ ಮೇಲೆ ಮತಾಂತರದ ಸುಳ್ಳು ಆರೋಪ ಹೊರೆಸಲಾಗುತ್ತಿದೆ. ಯಾವುದೇ ರೀತಿಯ ಆಮಿಷ ಒಡ್ಡಿ ಮತಾಂತರ ಮಾಡಿದ ಒಂದೇ ಒಂದು ಪ್ರಕರಣ ಈವರೆಗೂ ಸಾಬೀತಾಗಿಲ್ಲ ಎಂದು ಹೇಳಿದ್ದಾರೆ.

ಮತಾಂತರ ಹೆಸರಲ್ಲಿ ದೇಶದಾದ್ಯಂತ ಚರ್ಚ್‍ಗಳ ಮೇಲೆ ದಾಳಿ, ಧರ್ಮಗುರುಗಳು, ಅಮಾಯಕ ಭಕ್ತರ ಮೇಲೆ ಹಲ್ಲೆ, ಆಸ್ತಿಪಾಸ್ತಿಗೆ ಹಾನಿ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಮತಾಂತರದ ಸುಳ್ಳು ಆರೋಪ ಹೊರೆಸಿ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ.

ಸಂಘಟನೆಗಳ ಸುಳ್ಳು ವರದಿ ಆಧರಿಸಿ ಭಕ್ತರ ಧಾರ್ಮಿಕ ಸ್ವಾತಂತ್ರ್ಯ ಕಸಿದುಕೊಳ್ಳುವ ದಿಸೆಯಲ್ಲಿ ಮತಾಂತರ ಕಾಯ್ದೆ ತಿದ್ದುಪಡಿ ಮಾಡಿ ಕ್ರೈಸ್ತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕ್ರೈಸ್ತ ಮಿಷನರಿಗಳು ದೇಶಕ್ಕೆ ನೀಡಿದ ಕೊಡುಗೆಯನ್ನು ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಗೃಹ ಸಚಿವರು ಅರಿಯಲಿ ಎಂದು ಸಲಹೆ ಮಾಡಿದ್ದಾರೆ.

ಕ್ರೈಸ್ತರು ಶಾಂತಿಪ್ರಿಯರು. ಯಾರ ಮೇಲೂ ದಾಳಿ ಮಾಡಿದ ಉದಾಹರಣೆಗಳು ಇಲ್ಲ. ಎಲ್ಲವನ್ನೂ ಸಹಿಸಿಕೊಂಡ ಸಮುದಾಯದ ಮೇಲೆ ನಿರಂತರ ದಬ್ಬಾಳಿಕೆ ಮುಂದುವರಿದರೆ ಗೂಳಿಹಟ್ಟಿ ಶೇಖರ್ ಅವರ ಕ್ಷೇತ್ರ ಸೇರಿದಂತೆ ರಾಜ್ಯದಾದ್ಯಂತ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು