ಸೋಮವಾರ, ಜನವರಿ 17, 2022
19 °C

ಭಾಲ್ಕಿ: ಹಲಬರ್ಗಾ ಸಿದ್ಧರಾಮೇಶ್ವರ 9ನೇ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಹನ್ನೊಂದು ದಿನಗಳ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವವು ಸಂಭ್ರಮ, ಸಡಗರದ ಮಧ್ಯೆ ತೆರೆ ಕಂಡಿತು.

9ನೇ ಜಾತ್ರಾ ಮಹೋತ್ಸವ ನಿಮಿತ್ತ ಕೊನೆಯ ದಿನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧರಾಮೇಶ್ವರ ಭಾವಚಿತ್ರ, ಮೂರು ಸಾರೋಟಿನಲ್ಲಿ 9 ಶ್ರೀಗಳ ಭವ್ಯ ಮೆರವಣಿಗೆ ನಡೆಯಿತು.

ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಸಮೀಪದ ಪೆಟ್ರೋಲ್ ಬಂಕ್ ಬಳಿಯಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಹಾಯ್ದು ರಾಚೋಟೇಶ್ವರ ಸಂಸ್ಥಾನ ಮಠಕ್ಕೆ ತಲುಪಿ ಸಮಾರೋಪಗೊಂಡಿತು.

ಒಂದು ಸಾರೋಟಿನಲ್ಲಿ ತಲಾ ಮೂವರಂತೆ ಮೂರು ಸಾರೋಟಿನಲ್ಲಿ ಹುಡಗಿ, ಹಿರೆನಾಗಾಂವ, ಚಿಂಚನಸೂರ, ಸೇಡಂ, ಕೌಳಾಸ, ಚಿಟಗುಪ್ಪ, ಸದಲಾಪುರ, ಹಿರೂರ ಹಾಗೂ ಸೇವಾನಗರ ಶ್ರೀಗಳು ಇದ್ದರು.

ಕಳಸ ಹೊತ್ತ ಮಹಿಳೆಯರು, ಬ್ಯಾಂಡ್ ಬಾಜಾ, ತಾಳ ಭಜನೆ, ಕೋಲಾಟ, ಯುವಕರ ನರ್ತನ ಮೆರವಣಿಗೆಯ ಮೆರಗು ಹೆಚ್ಚಿಸಿದವು. ರಾಚೋಟೇಶ್ವರ, ಸಿದ್ಧರಾಮೇಶ್ವರ, ಹಾವಗಿಲಿಂಗೇಶ್ವರ ಶಿವಾಚಾರ್ಯ ಅವರಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮೆರವಣಿಗೆ ಉದ್ದಕ್ಕೂ ಮೊಳಗಿದವು.

ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮೆರವಣಿಗೆಯ ನೇತೃತ್ವ ವಹಿಸಿದ್ದರು. ಮೆರವಣಿಗೆಯಲ್ಲಿ ಭಕ್ತರೊಂದಿಗೆ ಪಾದಯಾತ್ರೆಯಲ್ಲೇ ಸಾಗಿ ಗಮನ ಸೆಳೆದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿಕಾ ಮಹೇಶ ಪಾಟೀಲ, ನಿವೃತ್ತ ಶಿಕ್ಷಕ ರೇವಣಪ್ಪ ಮೂಲಗೆ, ಗ್ರಾಮದ ಪ್ರಮುಖರಾದ ರಮೇಶ ಪ್ರಭಾ, ಧನರಾಜ ಪಾಟೀಲ, ಪ್ರಕಾಶ ಪ್ರಭಾ, ರಾಜಕುಮಾರ ಚಲುವಾ, ಶಿವಕುಮಾರ ಬೋರಾಳೆ, ರಾಜು ಕುಂಬಾರ, ರವಿ ಕುಂಬಾರ, ಶಿವಕುಮಾರ ಗುಮ್ತಾ, ಶಾಂತಕುಮಾರ ಗುಮ್ತಾ, ಘಾಳೆಪ್ಪ ಮೇತ್ರೆ, ಸೋಮಶೇಖರ ಮಡಿವಾಳ, ಸಿದ್ರಾಮ ಮೂಲಗೆ, ಸಂಜು ಪ್ರಭಾ, ಶಿವಶಂಕರ ಪ್ರಭಾ, ರಾಜಕುಮಾರ ಮೂಲಗೆ, ವಿಜಯಕುಮಾರ ಪಾಂಚಾಳ, ಸತೀಶ ಮಡಿವಾಳ, ವೀರಶೆಟ್ಟಿ ಪ್ರಭಾ, ಸಂತೋಷ ಮೈನಾಳೆ ಮೊದಲಾದವರು ಪಾಲ್ಗೊಂಡಿದ್ದರು.

ನೆರೆ ರಾಜ್ಯ, ನೆರೆ ಜಿಲ್ಲೆ ಸೇರಿದಂತೆ ವಿವಿಧೆಡೆಯ ಅಪಾರ ಭಕ್ತರು ಭಕ್ತಿ, ಶ್ರದ್ಧೆಯಿಂದ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.