ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್‌ ವಾರಾಂತ್ಯ ಕರ್ಫ್ಯೂ: ತೊಂದರೆ ಅನುಭವಿಸಿದ ವ್ಯಾಪಾರಿಗಳು

Last Updated 7 ಆಗಸ್ಟ್ 2021, 16:04 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಸರ್ಕಾರ ದಿಢೀರ್‌ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದ ಕಾರಣ ಹೋಟೆಲ್‌ ಹಾಗೂ ಬಟ್ಟೆ ಅಂಗಡಿ ಮಾಲೀಕರು ತೊಂದರೆಗೆ ಒಳಗಾದರು. ಅನೇಕ ವ್ಯಾಪಾರಿಗಳು ನಷ್ಟ ಅನುಭವಿಸಿದರು.

ವಾರಾಂತ್ಯ ಕರ್ಫ್ಯೂ ಕಾರಣ ಜನ ಮನೆಗಳಿಂದ ಹೊರ ಬರಲಿಲ್ಲ. ಇಡ್ಲಿ, ದೋಸೆಗೆ ಹಿಟ್ಟು ಸಿದ್ಧ ಮಾಡಿಕೊಂಡಿದ್ದ ಅನೇಕ ಹೋಟೆಲ್‌ಗಳು ನಷ್ಟ ಅನುಭವಿಸಿದವು. ಅನೇಕ ಹೋಟೆಲ್‌ಗಳಲ್ಲಿ ಜನ ಅಂತರ ಕಾಯ್ದುಕೊಳ್ಳದೆ ಕುಳಿತು ಊಟ, ಉಪಾಹಾರ ಸೇವಿಸಿದರು.

‘ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಸಬಹುದಿತ್ತು. ‌ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಿದರೆ ಸಾಕಿತ್ತು. ಕೋವಿಡ್‌ ಪ್ರಮಾಣ ಕಡಿಮೆಯಾಗಿದೆ. ವಾರಾಂತ್ಯ ಕರ್ಫ್ಯೂ ಅಗತ್ಯವಿರಲಿಲ್ಲ’ ಎಂದು ಸಾಯಿ ಟಿಫನ್‌ ಸೆಂಟರ್‌ ಮಾಲೀಕ್ ಕಿರಣ ಪೇಣೆ ಹೇಳಿದರು.

‘ಲಾಕ್‌ಡೌನ್‌ನಿಂದಾಗಿ ಬಹಳ ಕಷ್ಟ ಅನುಭವಿಸಿದ್ದೇವೆ. ಪಂಚಮಿ ಹಬ್ಬ ಒಂದು ದಿನ ಬಾಕಿ ಇರುವಾಗಲೇ ದಿಢೀರ್‌ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದ ಕಾರಣ ಗ್ರಾಹಕರು ಬಟ್ಟೆ ಖರೀದಿಗೆ ಬಂದಿಲ್ಲ. ನಷ್ಟ ಅನುಭವಿಸಬೇಕಾಗಿ ಬಂದಿದೆ’ ಎಂದು ಬಟ್ಟೆ ವ್ಯಾಪಾರಿ ಮಡಿವಾಳಪ್ಪ ಅಳಲು ತೋಡಿಕೊಂಡರು.

ಮಾರುಕಟ್ಟೆಗೆ ತರಕಾರಿ ತಂದಿದ್ದ ರೈತರು ಸಹ ತೊಂದರೆ ಅನುಭವಿಸಿದರು. ನಿರೀಕ್ಷೆಯಷ್ಟು ಜನ ಖರೀದಿಗೆ ಬಾರದ ಕಾರಣ ತರಕಾರಿ ಮರಳಿ ಮನೆಗೆ ಒಯ್ಯಬೇಕಾಗಿದೆ ಎಂದು ಚಿಟ್ಟಾದ ರೈತ ನಾಗೇಶ ಹೇಳಿದರು.

ಮಧ್ಯಾಹ್ನ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೂ ಜನರ ಓಡಾಟ ನಿಂತಿರಲಿಲ್ಲ. ವಾಹನಗಳ ಸಂಚಾರ ಮುಂದುವರಿದಿತ್ತು. ಜನ ಮಾಸ್ಕ್‌ ಸಹ ಧರಿಸಿರಲಿಲ್ಲ. ಬೆಳಿಗ್ಗೆ ಮಾರುಕಟ್ಟೆಗೆ ಬಂದಿದ್ದ ಯಾರೊಬ್ಬರೂ ಮಾಸ್ಕ್‌ ಹಾಕಿಕೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT