ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿ ಟಿವಿ ಕ್ಯಾಮೆರಾ ಇದ್ದರೂ ಪ್ರಯೋಜನವಿಲ್ಲ

ದುರಸ್ತಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು; ಪೊಲೀಸರಿಗೆ ಹೆಚ್ಚಿದ ಕಾರ್ಯ ಒತ್ತಡ
Last Updated 28 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಗೆ ನೆರೆಯ ರಾಜ್ಯಗಳಿಂದ ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಗಡಿಗಳಲ್ಲಿ ಪೊಲೀಸರು ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದರೂ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು ಇಲ್ಲದ ಕಾರಣ ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ.

ಬೀದರ್‌ ಜಿಲ್ಲೆಯಿಂದಲೇ ವಿವಿಧೆಡೆ ಗಾಂಜಾ ಸರಬರಾಜು ಆಗುತ್ತಿದೆ ಎಂದು ಮಹಾರಾಷ್ಟ್ರದ ಲಾತೂರಿನ ಮರಾಠಿ ಹಾಗೂ ಹೈದರಾಬಾದ್‌ನ ತೆಲುಗು ಪತ್ರಿಕೆಗಳು ಅನೇಕ ಬಾರಿ ಪ್ರಕಟಿಸಿವೆ. ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಮಾದಕ ವಸ್ತುಗಳ ಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪ ಇದೆ.

ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೆಲ ಕಡೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಬಹುತೇಕ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿಲ್ಲ. ರಸ್ತೆ ಅಪಘಾತ, ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗುತ್ತಿದ್ದ ಸಿಸಿ ಟಿವಿ ಕ್ಯಾಮೆರಾಗಳು ಬಂದ್‌ ಆಗಿರುವ ಕಾರಣ ಪೊಲೀಸರ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಪೊಲೀಸರು ಖಾಸಗಿ ಸಂಸ್ಥೆಗಳು ಅಳವಡಿಸಿರುವ ಸಿಸಿ ಟಿವಿ ಪುಟೇಜ್‌ಗಳನ್ನು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬಸವಕಲ್ಯಾಣದ ಚಂಡಕಾಪುರ, ಬೀದರ್ ತಾಲ್ಲೂಕಿನ ಭಂಗೂರ್, ಶಹಾಪುರ ಗೇಟ್, ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ವನಮಾರಪಳ್ಳಿ ಗಡಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬ ಬೇಡಿಕೆ ಬಹುದಿನಗಳಿಂದ ಇದೆ. ಆದರೆ, ಪೊಲೀಸ್‌ ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ನಗರ ಸ್ಥಳೀಯ ಸಂಸ್ಥೆಗಳು ಅನುದಾನ ಕೊಡಲು ಹಿಂದೇಟು ಹಾಕುತ್ತಿವೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುದಾನ ಪಡೆಯಲು ಅವಕಾಶ ಇದೆ. ಆದರೆ, ಮಂಡಳಿಯಿಂದಲೂ ಅನುದಾನ ದೊರೆಯುತ್ತಿಲ್ಲ. ಸಿಸಿ ಟಿವಿಗಳೇ ಕಾರ್ಯನಿರ್ವಹಿಸದ ಕಾರಣ ಜಿಲ್ಲೆಯಲ್ಲಿ ಪರೋಕ್ಷವಾಗಿ ಅಪರಾಧ ಕೃತ್ಯ ಹೆಚ್ಚುತ್ತಿವೆ ಎಂದು ಹೇಳಲಾಗುತ್ತಿದೆ.

ಪೊಲೀಸರು ಇದ್ದರೆ ಮಾತ್ರ ನಿಯಮ ಪಾಲನೆ

ಬೀದರ್ ನಗರದ ನೌಬಾದ್‌ ವೃತ್ತ ಹಾಗೂ ರೋಟರಿ ವೃತ್ತದಲ್ಲಿ ಮಹಾರಾಷ್ಟ್ರ, ತೆಲಂಗಾಣ ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬರುವ ನೂರಾರು ಬಸ್‌ಗಳು ಇಲ್ಲಿ ನಿಲುಗಡೆಯಾಗುತ್ತವೆ. ಖಾಸಗಿ ವಾಹನಗಳು ಬೇಕಾಬಿಟ್ಟಿಯಾಗಿ ಎಲ್ಲಿ ಬೇಕೆಂದಲ್ಲಿ ನಿಲುಗಡೆ ಮಾಡಲಾಗುತ್ತದೆ. ಪೊಲೀಸರು ಇದ್ದಾಗ ಮಾತ್ರ ಸರಿಯಾಗಿ ವಾಹನ ನಿಲುಗಡೆ ಮಾಡುವ ಟ್ರಾಕ್ಸ್‌ ಹಾಗೂ ಆಟೊ ಚಾಲಕರು, ಪೊಲೀಸರು ನಿರ್ಗಮಿಸಿದ ನಂತರ ನಂತರ ಮತ್ತೆ ಮನಸ್ಸಿಗೆ ಬಂದಂತೆ ವಾಹನ ನಿಲುಗಡೆ ಮಾಡುತ್ತಾರೆ.

ರೋಟರಿ ವೃತ್ತದಿಂದ ಜಿಲ್ಲಾ ರಂಗಮಂದಿರ ಕಡೆಗೆ ಹೋಗುವ ಮಾರ್ಗದಲ್ಲಿ ಬೆಳಗಿನ ಅವಧಿಯಲ್ಲಿ ಕಳ್ಳರು ದ್ವಿಚಕ್ರ ವಾಹನ ಮೇಲೆ ಬಂದು ಪಾದಚಾರಿಗಳ ಮೊಬೈಲ್‌ ಹಾಗೂ ಕೊರಳಲ್ಲಿನ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆಗಳು ನಡೆದಿವೆ.

ನಗರಸಭೆ ಹಾಗೂ ಪೊಲೀಸ್‌ ಇಲಾಖೆ ನಗರದ ಪ್ರಮುಖ ವೃತ್ತಗಳು ಹಾಗೂ ಅಪರಾಧ ಕೃತ್ಯಗಳು ಹೆಚ್ಚು ನಡೆಯುವ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರಂಗಮಂದಿರ ಮಾರ್ಗದಲ್ಲೇ ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಈ ಮಾರ್ಗದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತೆ ರಜಿಯಾ ಬಳಬಟ್ಟಿ ಹೇಳುತ್ತಾರೆ.

ಬೀದರ್‌ನ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್‌ ವೃತ್ತ, ಭಗತ್‌ಸಿಂಗ್ ವೃತ್ತದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿದೆ. ಸಿಸಿ ಟಿವಿ ಕ್ಯಾಮೆರಾಗಳು ಚಾಲ್ತಿಯಲ್ಲಿದ್ದರೆ ನಿಯಮಗಳ ಉಲ್ಲಂಘನೆ ಸಂಖ್ಯೆ ಕಡಿಮೆಯಾಗಲಿದೆ ಎನ್ನುತ್ತಾರೆ ಹೋಟೆಲ್‌ ಉದ್ಯಮಿ ಶಂಕರ ಮರಕಲ್‌.

ದುರಸ್ತಿಯಾಗದ ಸಿಸಿ ಟಿವಿ ಕ್ಯಾಮೆರಾಗಳು

ಬೀದರ್‌ ನಗರದಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾಗಳು ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಕಾನೂನು ಬಾಹಿರ ಕೃತ್ಯಗಳ ಚಲನವಲನ ಸೆರೆಹಿಡಿಯಬೇಕಾದ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ.

ಅಕ್ರಮ ಕಲ್ಲು ಸಾಗಣೆ, ವಾಹನ ಕಳ್ಳತನ, ಹಸುಗಳ ಅಕ್ರಮ ಸಾಗಣೆಯಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಸಲುವಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾಗಳ ದುರಸ್ತಿಗೆ ಪೊಲೀಸ್‌ ಇಲಾಖೆ ಮುಂದಾಗಬೇಕು ಎಂಬುದು ಜನರ ಬೇಡಿಕೆಯಾಗಿದೆ.

ಕ್ಯಾಮೆರಾಗಳು ಸಮರ್ಪಕವಾಗಿದ್ದಲ್ಲಿ ಅಪರಾಧ ಕೃತ್ಯ ತಡೆಯಲು ಹಾಗೂ ಪಾರ್ಕಿಂಗ್‌ ವ್ಯವಸ್ಥೆ ನಿರ್ವಹಿಸಲು ಅನುಕೂಲವಾಗಲಿದೆ. ಕ್ಯಾಮೆರಾ ಅಳವಡಿಸಿದ ಕಂಪನಿ ನಿರ್ವಹಣೆಯನ್ನೇ ಮಾಡಿಲ್ಲ. ಹೀಗಾಗಿ ಸರ್ಕಾರ ಕಂಪನಿಯನ್ನೇ ಕಪ್ಪು ಪಟ್ಟಿಗೆ ಸೇರಿಸಿದೆ ಎನ್ನಲಾಗಿದೆ.

ನಗರದಲ್ಲಿ 170 ಸ್ಥಳಗಳನ್ನು ಗುರುತಿಸಿ ಕ್ಯಾಮೆರಾಗಳ ಅಗತ್ಯವಿರುವುದನ್ನು ಉಲ್ಲೇಖಿಸಿ ನಗರಸಭೆ ಮೂಲಕ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಪ್ರತಿಕ್ರಿಯೆ ಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಇನ್ನೂ ಪ್ರಸ್ತಾವ ಹಂತದಲ್ಲೇ

ಔರಾದ್: ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಇಂದಿಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಲ್ಲ. ಅಂತರರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ಎಪಿಎಂಸಿ ಕ್ರಾಸ್, ಬಸ್ ನಿಲ್ದಾಣ, ಬಸವೇಶ್ವರ ವೃತ, ಅಮರೇಶ್ವರ ದೇವಸ್ಥಾನದ ಹತ್ತಿರ ಸಿಸಿ ಕ್ಯಾಮರಾ ಅಳವಡಿಸುವಂತೆ ಸಾರ್ವಜನಿಕರು‌ ಬೇಡಿಕೆ ಸಲ್ಲಿಸಿದ್ದಾರೆ. ಈಗಾಗಲೇ ದೇವಸ್ಥಾನದಲ್ಲಿ ಭಕ್ತರಿಗೆ ಕಳ್ಳರ ಕಾಟದ ಅನುಭವ ಆಗಿದೆ. ಈ ಕುರಿತು ತಾಲ್ಲೂಕು ಆಡಳಿತದ ಗಮನಕ್ಕೂ ತರಲಾಗಿದೆ.

ಅಪರಾಧ ನಿಯಂತ್ರಣ ಹಾಗೂ ಜನರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದ ಪ್ರಮುಖ ಹಾಗೂ ಜನನಿಬಿಡ ಪ್ರದೇಶದಲ್ಲಿ ಸಿಸಿ‌ ಕ್ಯಾಮೆರಾ ಅಳವಡಿಸಲು ಸಲ್ಲಿಸಿದ ಪ್ರಸ್ತಾವಕ್ಕೆ ಮಂಜೂರಾತಿ ಸಿಕ್ಕಿದೆ. ಆದಷ್ಟು ಬೇಗ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಸುಕುಮಾರ ತಿಳಿಸಿದ್ದಾರೆ.

ಚೆಕ್‌ಪೋಸ್ಟ್‌ ಬಳಿಯೇ ಇಲ್ಲ ಕ್ಯಾಮೆರಾ

ಹುಮನಾಬಾದ್: ಪಟ್ಟಣದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಎಪಿಎಂಸಿ ಮಾರುಕಟ್ಟೆ ಪ್ರವೇಶ ದ್ವಾರ ಸೇರಿ ಒಟ್ಟು 16 ಸಿಸಿ ಟಿವಿ ಕ್ಯಾಮೆರಾಗಳು ಇವೆ. ಪಟ್ಟಣದ ಹಳೆ ಚೆಕ್‌ಪೋಸ್ಟ್ ಸೇರಿದಂತೆ 3 ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಆದರೆ, ಸ್ಪಂದನೆ ದೊರೆಯುತ್ತಿಲ್ಲ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಪೂರಕ ಮಾಹಿತಿ:
ಮನ್ಮಥಪ್ಪ ಸ್ವಾಮಿ, ಗುಂಡು ಅತಿವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT