ಬೀದರ್ ಜಿಲ್ಲೆಯಲ್ಲಿ ಹೆಚ್ಚಿದ ಧಗೆ: ಇನ್ನೂ ಒಂದು ವಾರ ಕೆಂಡದಂತಹ ಬಿಸಿಲು

ಬುಧವಾರ, ಜೂನ್ 19, 2019
25 °C
ತತ್ತರಿಸಿದ ಜನ

ಬೀದರ್ ಜಿಲ್ಲೆಯಲ್ಲಿ ಹೆಚ್ಚಿದ ಧಗೆ: ಇನ್ನೂ ಒಂದು ವಾರ ಕೆಂಡದಂತಹ ಬಿಸಿಲು

Published:
Updated:
Prajavani

ಬೀದರ್: ಎರಡು ತಿಂಗಳಿಂದ ಜಿಲ್ಲೆಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇದೆ. ಮೂರು ದಿನಗಳಿಂದ 41 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಬುಧವಾರದಿಂದ ಇನ್ನೂ ಒಂದು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಲಿದ್ದು, ವಾರದ ಅಂತ್ಯದವರೆಗೂ ಕೆಂಡದಂತಹ ಬಿಸಿಲು ಮುಂದುವರಿಯಲಿದೆ.

ನಿತ್ಯ ಸೂರ್ಯದೇವ ದರ್ಶನ ನೀಡುವ ಮೊದಲೇ ಸೆಕೆ ಶುರುವಾಗುತ್ತಿದೆ. ಬೆಳಿಗ್ಗೆ 9 ಗಂಟೆಯ ವೇಳೆಗೆ ಪ್ರಖರ ಬಿಸಿಲು ಇರುತ್ತದೆ. ಜನ ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ಕಾಂಕ್ರಿಟ್‌ ಕಟ್ಟಡಗಳು ಕಾದು ಬಿಸಿ ಹಬೆಯನ್ನು ಬಿಡುತ್ತಿವೆ. ಕಚೇರಿಗಳಲ್ಲಿ ಕುಳಿತು ಕೆಲಸ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಂದು ಅಂಗಡಿಗಳಲ್ಲಿ ಕೂಲರ್‌ಗಳು ತಿರುಗುತ್ತಿವೆ. ಆದರೂ ಧಗೆ ಕಡಿಮೆಯಾಗುತ್ತಿಲ್ಲ.

ವಿದ್ಯುತ್‌ ಕೈಕೊಟ್ಟರೆ ನಿರಂತರವಾಗಿ ತಿರುಗುವ ಫ್ಯಾನ್‌ಗಳು ಆಫ್‌ ಆಗಿ ಕಚೇರಿಗಳಲ್ಲಿ ಕೆಲಸ ಮಾಡುವವರು ಹಿಂಸೆ ಅನುಭವಿಸುತ್ತಿದ್ದಾರೆ. ಮೈಯಲ್ಲ ಬೆವತು ಬಟ್ಟೆಗಳು ತೊಯ್ದು ತೊಪ್ಪೆಯಾಗುತ್ತಿವೆ. ಎರಡು ಮೂರು ದಿನಗಳಿಂದ ರಾತ್ರಿ ವಿದ್ಯುತ್‌ ಕಣ್ಣಾಮುಚ್ಚಾಲೆ ಆಡುತ್ತಿದೆ. ಕಾಂಕ್ರಿಟ್‌ ಮನೆಗಳಲ್ಲಿ ವಾಸವಾಗಿರುವ ಜನ ಧಗೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಮನೆಯ ತಾರಸಿಯ ಮೇಲೆ ಟವಲ್‌ನಿಂದ ಗಾಳಿ ಬೀಸಿಕೊಳ್ಳುತ್ತ ಸಮಯ ಕಳೆಯುತ್ತಿದ್ದಾರೆ. ವಿದ್ಯುತ್‌ ಕೈಕೊಟ್ಟರೆ ಮನೆಯಲ್ಲಿ ನಿದ್ರಿಸಲು ಸಾಧ್ಯವಾಗದಂತಹ ಸೆಕೆ ಇದೆ.

ಪೋಸ್ಟ್‌ಮನ್‌, ಕೋರಿಯರ್‌ ಸಿಬ್ಬಂದಿ ಲಕೋಟೆಗಳನ್ನು ಕೊಡಲು ಕಚೇರಿಯಿಂದ ಹೋಗುವಾಗ ಟೊಪ್ಪಿಗೆಯನ್ನು ನೀರಲ್ಲಿ ತೊಯ್ಯಿಸಿಕೊಂಡು ತಲೆ ಮೇಲೆ ಹಸಿಬಟ್ಟೆ ಹಾಕಿಕೊಂಡು ಹೋಗುತ್ತಿದ್ದಾರೆ. ಬಹುತೇಕ ಸಿಬ್ಬಂದಿ ಸುಡು ಬಿಸಿಲಲ್ಲಿ ಅಲೆದಾಡಲು ಹಿಂಜರಿಯುತ್ತಿದ್ದಾರೆ. ಸಂಜೆಯಿಂದ ರಾತ್ರಿಯ ವರೆಗೂ ಕೋರಿಯರ್‌ ಸೇವೆ ಕೊಡುತ್ತಿದ್ದಾರೆ. ಬಿಸಿಲಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ಮುನ್ನೆಚ್ಚರಿಕೆ ಕ್ರಮವಾಗಿ ಒಂದೆರಡು ಲೀಟರ್‌ ಮಾತ್ರ ಪೆಟ್ರೋಲ್‌ ಹಾಕಿಕೊಳ್ಳುತ್ತಿದ್ದಾರೆ.

ಡಾ.ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ ಹಾಗೂ ಬೊಮ್ಮಗೊಂಡೇಶ್ವರ ವೃತ್ತಗಳಲ್ಲಿ ಸಂಚಾರ ದಟ್ಟಣೆ ಇದೆ. ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ದ್ವಿಚಕ್ರ ವಾಹನ ಸವಾರರು ಬಿಸಿಲಿಗೆ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಬಿಸಿಲಲ್ಲಿ ಸ್ವಲ್ಪಹೊತ್ತು ನಿಂತರೂ ಬೆನ್ನ ಮೇಲೆ ಬೊಬ್ಬೆಗಳು ಏಳುತ್ತಿವೆ. ಹೀಗಾಗಿ ಜನ ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಪೊಲೀಸರು ಬಿಸಿಲಿನಲ್ಲಿ ನಿಲ್ಲಲು ಸಾಧ್ಯವಾಗದೆ ಅಂಗಡಿಗಳ ಮುಂದಿನ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ನೂರು ವರ್ಷಗಳ ಇತಿಹಾಸವನ್ನು ಅವಲೋಕಿಸಿದರೆ ಬೀದರ್‌ ಜಿಲ್ಲೆಯಲ್ಲಿ 2010 ರ ಮೇ 13ರಂದು ಬೀದರ್‌ನ ಹಳ್ಳದಕೇರಿಯಲ್ಲಿ 43.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದಕ್ಕೂ ಮೊದಲು 1931ರ ಮೇ 8 ರಂದು ಗರಿಷ್ಠ 43.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂದು ಹೇಳುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞ ಬಸವರಾಜ ಬಿರಾದಾರ.

‘ಜಿಲ್ಲೆಯಲ್ಲಿನ ನದಿ, ಹಳ್ಳಕೊಳ್ಳಗಳು, ಬ್ಯಾರೇಜ್, ಬಹುತೇಕ ಕೆರೆ ಕಟ್ಟೆಗಳು ಬತ್ತಿವೆ. ಅಂತರ್ಜಲ ಆಳಕ್ಕೆ ಕುಸಿದ ಕಾರಣ ಭೂಮಿ ಬಾಯಿಬಿಟ್ಟಿದೆ. ಕರಾವಳಿಯಲ್ಲಿ ಚಂಡಮಾರುತ ಕಾಣಸಿಕೊಂಡರೂ ಇಲ್ಲಿ ಮಳೆ ಸುರಿದಿಲ್ಲ. ಒಂದು ವಾರದಿಂದ ವಿಪರೀತ ಬಿಸಿಲು ಇದೆ. ಜಿಲ್ಲೆಯ ಜನ ಬಿಸಿಲ ಧಗೆಯನ್ನು ಸಹಿಸಿಕೊಳ್ಳಲಾಗದೆ ವರುಣ ದೇವನ ಆಗಮನಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !