ಅಂಗವಿಕಲರಿಗೆ ಮನೆ: ಜಿಲ್ಲಾಧಿಕಾರಿ ಭರವಸೆ

7
ಜಿಲ್ಲಾ ರಂಗಮಂದಿರದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ

ಅಂಗವಿಕಲರಿಗೆ ಮನೆ: ಜಿಲ್ಲಾಧಿಕಾರಿ ಭರವಸೆ

Published:
Updated:
Deccan Herald

ಬೀದರ್‌: ‘ಜಿಲ್ಲೆಯಲ್ಲಿ ವಸತಿ ರಹಿತ ಅಂಗವಿಕಲರಿಗೆ ಶೀಘ್ರ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ ಭರವಸೆ ನೀಡಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರವು ಪಟ್ಟಣ ಪ್ರದೇಶಗಳಲ್ಲಿ ಅಂಗವಿಕಲರಿಗೆ 6,600 ಮನೆಗಳನ್ನು ನೀಡಿದೆ. ಜಿಲ್ಲೆಯಲ್ಲಿ ವಸತಿ ಸೌಲಭ್ಯ ಕೋರಿ ಅಂಗವಿಕಲರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

‘ಅಂಗವಿಕಲರ ಶಾಲೆಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಸಿಗುತ್ತಿಲ್ಲ ಎನ್ನುವ ದೂರುಗಳಿವೆ. ಈ ಕುರಿತು ವರದಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಅಂಗವಿಕಲರ ಏಳಿಗೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಈ ಎಲ್ಲ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.

‘ಎಲ್ಲ ಇಲಾಖೆಗಳಲ್ಲಿ ಅಂಗವಿಕಲರಿಗೆ ಶೇ 3ರಷ್ಟು ಅನುದಾನ ಮೀಸಲಿಡುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ತಿಂಗಳೊಳಗೆ ಜಾರಿಗೊಳಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಜಿಲ್ಲೆಯಲ್ಲಿ 44,000 ಅಂಗವಿಕಲರಿದ್ದಾರೆ. ಇವರ ಕಲ್ಯಾಣಕ್ಕೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಈ ಯೋಜನೆಗಳು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಅಂಗವಿಕಲರ ಅಧಿನಿಯಮದ ಮಾಜಿ ಆಯುಕ್ತ ದಾಸ್ ಸೂರ್ಯವಂಶಿ, ‘ರಾಜ್ಯ ಸರ್ಕಾರವು ಅಂಗವಿಕಲರ ಅಭಿವೃದ್ಧಿಗಾಗಿ ದೇಶಕ್ಕೆ ಮಾದರಿಯಾದ ಅಂಗವಿಕಲರ ಪುನರ್ವಸತಿ ಯೋಜನೆ ಜಾರಿಗೆ ತಂದಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಎಂ.ಆರ್.ಡಬ್ಲ್ಯೂ ಮತ್ತು ಬಿ.ಆರ್.ಡಬ್ಲ್ಯೂಗಳನ್ನು ನೇಮಿಸಿ ಅಂಗವಿಕಲರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತಿದೆ. ಈ ಯೋಜನೆಗೆ ಪ್ರತಿ ವರ್ಷ ₹ 25 ಕೋಟಿ ವೆಚ್ಚ ಮಾಡುತ್ತಿದೆ’ ಎಂದು ತಿಳಿಸಿದರು.

ಎಂಆರ್‌ಡಬ್ಲ್ಯೂ ಶಿವಕುಮಾರ ಪಾಟೀಲ, ಮೊಗಲಪ್ಪ ಮಾಳಗೆ ಮಾತಾಡಿದರು. ಅಂಗವಿಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಅಂಗವಿಕಲರು ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರಶಸ್ತಿ ನೀಡಲಾಯಿತು.

ಸ್ವಚ್ಛ ಭಾರತ ಮಿಷನ್ ನೋಡಲ್ ಅಧಿಕಾರಿ ಡಾ.ಗೌತಮ ಅರಳಿ, ನವಜೀವನ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಅನೀಲ ಬೆಲ್ದಾರ್‌, ಅಮೂಲ್ಯ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ರಾಜು ಕಡ್ಯಾಳ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಪ್ರಭುಲಿಂಗ ಸ್ವಾಮಿ, ಅಂಗವಿಕಲರ ಸಂಘಟನೆಗಳ ಪ್ರಮುಖರಾದ ಸಂತೋಷ ಭಾಲ್ಕೆ, ಪ್ರಭು ಪಾಂಚಾಳ, ಸಂಜು ಕೇರಿ, ಮಂಗಲಾ ಮರಖಲೆ, ಸಂತೋಷ ಢಣಕೆ, ಶಿವರಾಜ ಕಪಲಾಪುರ ಉಪಸ್ಥಿತರಿದ್ದರು. ಬಂಡೆಪ್ಪ ಕಾಡವಾದ ನಿರೂಪಿಸಿದರು. ಗೌರಿಶಂಕರ ಪರತಾಪುರೆ ಸ್ವಾಗತಿಸಿದರು. ಲೋಕೇಶ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !