ಭಾನುವಾರ, ಜುಲೈ 25, 2021
22 °C

ಬ್ರಿಮ್ಸ್ ಅವ್ಯವಸ್ಥೆ ಸರಿಪಡಿಸಲಾಗುವುದು: ಸಚಿವ ಡಾ. ಸುಧಾಕರ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಬ್ರಿಮ್ಸ್) ಅವ್ಯವಸ್ಥೆಯನ್ನು ಶೀಘ್ರ ಸರಿಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ತಿಳಿಸಿದರು.

ಇಲ್ಲಿಯ ಬ್ರಿಮ್ಸ್ ಬೋಧಕ ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ನಡೆದ ಜನಪ್ರತಿನಿಧಿಗಳು ಹಾಗೂ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಆಯೋಜಿಸಿ ಸಂಸ್ಥೆಯ ಸುಧಾರಣೆ ಕುರಿತು ಸಮಗ್ರ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಬ್ರಿಮ್ಸ್ ಅವ್ಯವಸ್ಥೆ ನೋಡಿ ಸಾಕು ಸಾಕಾಗಿದೆ ಎಂದು ದೂರಿದ ಶಾಸಕರು, ಡಾ.ಸುಧಾಕರ ಅವರು ವ್ಯವಸ್ಥೆ ಸುಧಾರಿಸುವುದನ್ನು ಸವಾಲಾಗಿ ಸ್ವೀಕರಿಸುವುದಾಗಿ ಹೇಳುತ್ತಿದ್ದಂತೆಯೇ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಬ್ರಿಮ್ಸ್‌ನಲ್ಲಿ 71 ಗ್ರೂಪ್ ಎ, 1 ಗ್ರೂಪ್ ಬಿ, 135 ಗ್ರೂಪ್ ಸಿ, 82 ಗ್ರೂಪ್ ಡಿ ಸೇರಿ 289 ಹುದ್ದೆಗಳು ಹಾಗೂ ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ 12 ಗ್ರೂಪ್ ಎ, 2 ಗ್ರೂಪ್ ಬಿ, 71 ಗ್ರೂಪ್ ಸಿ ಮತ್ತು 15 ಗ್ರೂಪ್ ಡಿ ಸೇರಿ 100 ಹುದ್ದೆಗಳು ಸೇರಿದಂತೆ ಒಟ್ಟು 389 ಹುದ್ದೆಗಳು ಖಾಲಿ ಇವೆ ಎಂದು ಬ್ರಿಮ್ಸ್ ನಿರ್ದೇಶಕ ಸಭೆಗೆ ಮಾಹಿತಿ ನೀಡಿದರು.

13 ವರ್ಷದ ಈ ಕಾಲೇಜಿಗೆ ಆಡಳಿತಾಧಿಕಾರಿಯೇ ಇಲ್ಲವೆಂದರೆ ಹೇಗೆ, ಒಟ್ಟು ಮಂಜೂರಾದ 1,085 ಹುದ್ದೆಗಳ ಪೈಕಿ ಈವರೆಗೆ 389 ಹುದ್ದೆಗಳು ಭರ್ತಿಯೇ ಆಗಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಸಚಿವರು, ಈ ಆಸ್ಪತ್ರೆಯಿಂದ ಜನರಿಗೆ ಅನುಕೂಲವಾಗುತ್ತಿಲ್ಲ ಎಂದ ಮೇಲೆ ನೂರಾರು ಕೋಟಿ ರೂಪಾಯಿ ವ್ಯಯಿಸಿ ಆಸ್ಪತ್ರೆ ನಿರ್ಮಿಸಿ ಪ್ರಯೋಜನವೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದ ಭಗವಂತ ಖೂಬಾ ಮಾತನಾಡಿ,‘ಹಲವು ಬಾರಿ ಆಸ್ಪತ್ರೆಗೆ ಭೇಟಿ ನೀಡಿ, ಸಭೆ ನಡೆಸಿ ಸೂಚನೆ ನೀಡಿದರೂ ಈವರೆಗೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಿಲ್ಲ’ ಎಂದು ಬೇಸರ ಹೊರ ಹಾಕಿದರು.

ಆಸ್ಪತ್ರೆಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ ಜಿಲ್ಲೆಯ ಜನ ಸರಿಯಾಗಿ ಚಿಕಿತ್ಸೆ ಸಿಗದೆ ಸೊಲ್ಲಾಪುರ, ಹೈದರಾಬಾದ್‍ಗೆ ಹೋಗುವಂತಾಗಿದೆ ಎಂದು ಶಾಸಕ ರಹೀಂಖಾನ್ ದೂರಿದರು.

ಬಹಳ ವರ್ಷಗಳಿಂದ ಬ್ರಿಮ್ಸ್ ಸುಧಾರಣೆ ವಿಷಯ ಸಭೆಗೆ ಮಾತ್ರ ಸೀಮಿತ ಆಗುತ್ತಿದೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಇಲ್ಲಿ ಸರಿಯಾದ ಆಡಳಿತ ವ್ಯವಸ್ಥೆ ಇಲ್ಲ. ನಿಮ್ಮಿಂದಾದರೂ ಸಮಸ್ಯೆ ಬಗೆಹರಿಯಲಿ ಎಂದು ಶಾಸಕ ಬಿ. ನಾರಾಯಣರಾವ್ ನುಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು