ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೆ, ಹಿರೇಕಾಯಿ ಸೇರಿ ಹಲವು ತರಕಾರಿಗಳ ಬೆಲೆಯಲ್ಲಿ ದಿಢೀರ್‌ ಹೆಚ್ಚಳ

Last Updated 14 ಆಗಸ್ಟ್ 2020, 14:07 IST
ಅಕ್ಷರ ಗಾತ್ರ

ಬೀದರ್‌: ಗಣೇಶ ಚೌತಿಗೆ ಇನ್ನೂ ಒಂದು ವಾರ ಬಾಕಿ ಇದೆ. ಆಗಲೇ ತರಕಾರಿ ಬೆಲೆಯಲ್ಲಿ ದಿಢೀರ್‌ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಪ್ರತಿ ಕ್ವಿಂಟಲ್‌ಗೆ ₹ 8,500ಗೆ ಜಿಗಿದರೆ, ತರಕಾರಿ ರಾಜ ಬದನೆಕಾಯಿ ಹಾಗೂ ಜನರ ಬಹುಬೇಡಿಕೆಯ ಹಿರೇಕಾಯಿ ಬೆಲೆ ಏರಿಕೆಯಿಂದಾಗಿ ಹಿರಿಹಿರಿ ಹಿಗ್ಗಿವೆ.

ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 4 ಸಾವಿರದಿಂದ ₹8,500ಕ್ಕೆ ಹೆಚ್ಚಳವಾಗಿದೆ. ಬದನೆಕಾಯಿ ₹ 2,000 ರಿಂದ ₹ 4,500 ಹಾಗೂ ಹಿರೇಕಾಯಿ ₹ 2,500ರಿಂದ ₹4,500ಕ್ಕೆ ಏರಿಕೆಯಾಗಿದೆ. ಸ್ಥಳೀಯವಾಗಿ ಬೆಳೆದ ತರಕಾರಿ ಮಾರುಕಟ್ಟೆಗೆ ಬಂದರೂ ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ ತಟ್ಟಿದೆ. ತರಕಾರಿ ಬೆಳೆದ ರೈತ ಮಾತ್ರ ಅತ್ಯಂತ ಸಂಭ್ರಮದೊಂದಿಗೆ ಚೌತಿಗೆ ಗಣೇಶನನ್ನು ಬರಮಾಡಿಕೊಳ್ಳುವಂತಾಗಿದೆ.

ಬೆಳ್ಳುಳ್ಳಿ ಬೆಲೆ ಕ್ವಿಂಟಲ್‌ಗೆ ₹14,000 ತಲುಪಿ ಮತ್ತೆ ದಾಖಲೆ ಸೃಷ್ಟಿಸಿದೆ. ಬೆಳ್ಳುಳ್ಳಿ ಬೆಳೆದ ರೈತರು ಹಾಗೂ ಬೆಳ್ಳುಳ್ಳಿ ದಾಸ್ತಾನು ಇಟ್ಟುಕೊಂಡಿದ್ದ ವ್ಯಾಪಾರಿಗಳು ಅಧಿಕ ಖುಷಿ ಪಡುವಂತಾಗಿದೆ. ಈರುಳ್ಳಿ ಬೆಲೆ ಮಾತ್ರ ಸ್ಥಿರವಾಗಿದೆ.

ಈ ವಾರ ಪ್ರತಿ ಕ್ವಿಂಟಲ್‌ ಗಜ್ಜರಿ ಬೆಲೆ ₹ 3,500, ಆಲೂಗಡ್ಡೆ, ಕೊತಂಬರಿ ₹500, ಎಲೆಕೋಸು, ತೊಂಡೆಕಾಯಿ ₹ 2,000, ಪಾಲಕ್‌, ಬೀಟ್‌ರೂಟ್, ಟೊಮೆಟೊ ₹ 2,500 ಹಾಗೂ ಬೆಂಡೆಕಾಯಿ ₹ 2000 ರಿಂದ ₹3,500 ವರೆಗೆ ಹೆಚ್ಚಳವಾಗಿದೆ.

ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಹಸಿ ಮೆಣಸಿನಕಾಯಿ, ಆಲೂಗಡ್ಡೆ, ಬೀನ್ಸ್, ಬೀಟ್‌ರೂಟ್‌, ತೊಂಡೆಕಾಯಿ, ಬೆಂಡೆಕಾಯಿ, ಬೆಳಗಾವಿಯಿಂದ ಗಜ್ಜರಿ, ನುಗ್ಗೆಕಾಯಿ, ಬೆಂಗಳೂರು ಗ್ರಾಮೀಣ ಪ್ರದೇಶದಿಂದ ಟೊಮೊಟೊ, ಬೀದರ್‌, ಭಾಲ್ಕಿ, ಚಿಟಗುಪ್ಪ ತಾಲ್ಲೂಕಿನಿಂದ ಹಿರೇಕಾಯಿ, ಎಲೆಕೋಸು, ಹೂಕೋಸು, ಬದನೆಕಾಯಿ, ಮೆಂತೆ, ಸಬ್ಬಸಗಿ, ಕರಿಬೇವು, ಕೊತಂಬರಿ ಹಾಗೂ ಪಾಲಕ್‌ ಮಾರುಕಟ್ಟೆಗೆ ಬಂದಿದೆ.

‘ಜಿಲ್ಲೆಯಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಬೆಳೆಯಲಾದ ತಾಜಾ ತರಕಾರಿ ಹಾಗೂ ಸೊಪ್ಪು ಮಾರುಕಟ್ಟೆಗೆ ಬರುತ್ತಿದೆ. ಬೇರೆ ಜಿಲ್ಲೆಗಳ ತರಕಾರಿ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ತಿಳಿಸಿದ್ದಾರೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ ಧಾರಣೆ ವಿವರ

* ಈರುಳ್ಳಿ15-20
* ಮೆಣಸಿನಕಾಯಿ 30-40
* ಆಲೂಗಡ್ಡೆ 30-40
* ಬೆಳ್ಳುಳ್ಳಿ 120-140
* ಎಲೆಕೋಸು 30-40
* ಗಜ್ಜರಿ 25-30, 50-55
* ಬೀನ್ಸ್‌ 30-35, 50-55
* ಬದನೆಕಾಯಿ 40-45
* ಮೆಂತೆ ಸೊಪ್ಪು 40-45
* ಹೂಕೋಸು 40-45
* ಸಬ್ಬಸಗಿ 40-45
* ಬೀಟ್‌ರೂಟ್ 45-50
* ತೊಂಡೆಕಾಯಿ 30-40
* ಕರಿಬೇವು 20-25
* ಕೊತಂಬರಿ20-25
* ಟೊಮೆಟೊ 30-40
* ಪಾಲಕ್‌ 30-40
* ಬೆಂಡೆಕಾಯಿ 30-35
* ಹಿರೇಕಾಯಿ 40-45
* ನುಗ್ಗೆಕಾಯಿ80-85

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT