ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ‘ಶರಣರ ಸಂಘದಿಂದ ಮನದ ಮಲಿನ ದೂರ’

Published 12 ಜೂನ್ 2024, 16:18 IST
Last Updated 12 ಜೂನ್ 2024, 16:18 IST
ಅಕ್ಷರ ಗಾತ್ರ

ಬೀದರ್‌: ‘ಶರಣರ ಸಂಘದಿಂದ ಮನದ ಮಲಿನ ದೂರವಾಗಿ ವ್ಯಕ್ತಿಯಲ್ಲಿ ಮಹಾಶಕ್ತಿ ಉದಯವಾಗುತ್ತದೆ. ಬದುಕು ಸಂತೃಪ್ತಿಯಿಂದ ಸಾಗುತ್ತದೆ’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಮಂಗಳವಾರ ರಾತ್ರಿ ನಡೆದ 164ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಮತ್ತು ವಿಶ್ವ ಪರಿಸರ ದಿನಾಚರಣೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶರಣರ ಲಿಂಗಾಂಗ ಸಿದ್ದಾಂತವು ವೈಯಕ್ತಿಕ ಶಾಂತಿ, ಸಮಾಧಾನಕ್ಕೆ ಸಿಮೀತವಾಗಲಾರದೆ ಬೇರೆಯವರು ಕೂಡ ಲಿಂಗಾಂಗ ಸಾಮರಸ್ಯದ ಸುಖ, ಶಾಂತಿ ಉಣಬಡಿಸುವ ಕಾರ್ಯವಾಗಬೇಕಾಗಿದೆ. ಭಕ್ತನು ಐಕ್ಯ ಸ್ಥಳ ಅಥವಾ ಶರಣ ಸ್ಥಳದಲ್ಲಿದಲ್ಲಿದ್ದರೂ ಸ್ತುತಿ ನಿಂದೆಗಳು ಬಂದರೂ ಸಮಾಧಾನದಿಂದ ಬಸವತತ್ವ ಪ್ರಚಾರಕ್ಕಾಗಿ ಜೀವನ ತ್ಯಾಗ ಮಾಡಬೇಕು ಎಂದರು.

12ನೇ ಶತಮಾನದಲ್ಲಿ 1 ಲಕ್ಷ 96 ಸಾವಿರ ಶರಣರು ಬಸವ ಧರ್ಮ ಪ್ರಸಾರ ಮಾಡುತ್ತಿದ್ದರು. ಶರಣರ ಸತ್ಸಂಗದಿಂದ ವ್ಯಕ್ತಿಯ ಮನಸ್ಸು, ಸಮಚಿತ್ತ ಶಾಂತಿ, ನೆಮ್ಮದಿ ಲಭಿಸುತ್ತದೆ. ಲಿಂಗಪೂಜೆ, ಕಾಯಕ, ದಾಸೋಹ ತತ್ವಗಳು ನಿರಂತರ ನಡೆಯಬೇಕು ಎಂದು ಹೇಳಿದರು.

ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಕಾಂತ ಮಿರ್ಚೆ ಕಾರ್ಯಕ್ರಮ‌ ಉದ್ಘಾಟಿಸಿ ಮಾತನಾಡಿ, ‘ಭಾವದಲ್ಲಿ ಒಬ್ಬ ದೇವರು’ ಎಂಬ ಪ್ರಭುದೇವರ ವಚನವನ್ನು ಎಲ್ಲರೂ ಪಾಲಿಸಬೇಕು ಎಂದರು.

ಬಸವಕಲ್ಯಾಣದ ಬಂದವರ ಓಣಿಯ ಸತ್ಯಕ್ಕ ಮಾತನಾಡಿ, ಜೀವನದಲ್ಲಿ ನಾನು ಯಾರು ಎಂಬ ಪ್ರಶ್ನೆಯನ್ನು ಅರಿತು ಜೀವಿಸಬೇಕು. ಜೀವನದ ಪರಮ ಗುರಿ ಪರಮ ಸತ್ಯ, ಪರಮ ಶಾಂತಿ ಕಂಡುಕೊಳ್ಳುವುದು ಎಂದು ತಿಳಿಸಿದರು.

ನಿವೃತ್ತ ಚಿತ್ರಕಲಾ ಶಿಕ್ಷಕ ಶ್ರೀಕಾಂತ ಶೋಭಾ ಬಿರಾದಾರ, ನಿವೃತ್ತ ದೈಹಿಕ ಶಿಕ್ಷಕ ಶಿವಾನಂದ ಮಠಮತಿ ಅವರನ್ನು ಸನ್ಮಾನಿಸಲಾಯಿತು.

ಮಹಾನಂದಾ ರಘುನಾಥ ಕೋಟೆ, ಆಕಾಶ ಕೋಟೆ, ಕವಿತಾ ಭೀಮರಾವ ಪಾಟೀಲ ಅವರು ಗುರುಬಸವ ಪೂಜೆಯನ್ನು ನೆರವೇರಿಸಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಜನಾ, ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ. ಎಸ್.ಬಿ ಬಿರಾದಾರ, ಉಮಾಕಾಂತ ಮೀಸೆ, ಶಾಲಿವಾನ ಬೋಗಾರ, ಚನ್ನಬಸಪ್ಪ ನೌಬಾದೆ, ರಾಜಕುಮಾರ ಜುಬರೆ, ಪ್ರೊ.ಸಂಗ್ರಾಮ ಎಂಗಳೆ, ಸುವರ್ಣಾ ಶರಣಪ್ಪ ಚೀಮಕೊಡೆ, ಗುರುನಾಥ ಬಿರಾದಾರ, ಮಹೇಶ ಮಜ್ಜಿಗೆ, ಮೀನಾಕ್ಷಿ ಪಾಟೀಲ, ಲಕ್ಷ್ಮಿ ಬಿರಾದಾರ, ಕಸ್ತೂರಬಾಯಿ ಬಿರಾದಾರ, ಮಹಾನಂದ ಸ್ವಾಮಿ, ಪ್ರೇಮಾ, ಶಕುಂತಲಾ ಬೆಲ್ದಾಳೆ, ಉಷಾ ಮಿರ್ಚೆ, ತೀರ್ಥಮ್ಮ, ಮಾಲಾಶ್ರೀ, ನೀಲಕಂಠ ಬಿರಾದಾರ, ಭೀಮಶಂಕರ ಬಿರಾದಾರ ಹಾಜರಿದ್ದರು.

ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ಪರಿಸರ ಪ್ರಜ್ಞೆ ಕುರಿತ ಶಿವಲೀಲಾ ನಿರ್ದೇಶನದ ಕಿರುನಾಟಕ ಪ್ರಸ್ತುತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT