ಗುರುವಾರ , ಜೂನ್ 17, 2021
27 °C
ನೆರೆ ರಾಜ್ಯದಲ್ಲಿ ತುಂಬಿದ ಬ್ಯಾರೇಜ್‌ಗಳು

ಬೀದರ್‌: ಇನ್ನೂ ಭರ್ತಿಯಾಗದ ಕಾರಂಜಾ ಜಲಾಶಯ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮಳೆಗಾಲ ಶುರುವಾಗಿ ಎರಡು ತಿಂಗಳಾದರೂ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯಕ್ಕೆ ಇನ್ನೂ ನಿರೀಕ್ಷಿಸಿದಷ್ಟು ನೀರು ಹರಿದು ಬಂದಿಲ್ಲ. ಒಳ ಹರಿವು ಕಡಿಮೆ ಇರುವ ಕಾರಣ ಜಲಾಶಯ ಅರ್ಧದಷ್ಟೂ ಭರ್ತಿಯಾಗಿಲ್ಲ.

7.691 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಕೇವಲ 1.128 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. 24 ಗಂಟೆಗಳ ಅವಧಿಯಲ್ಲಿ 358.79 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ. ಎರಡು ವಾರಗಳಿಂದ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಇದೆ. ಆದರೆ, ನೀರು ಹರಿದು ಹೋಗುವಷ್ಟು ಮಳೆ ಸುರಿದಿಲ್ಲ. ಈ ಕಾರಣಕ್ಕೆ ಹಳ್ಳಕೊಳ್ಳಗಳು ಭರ್ತಿಯಾಗಿಲ್ಲ.

ಬೀದರ್‌ ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ಉಮರ್ಗಾ ಹಾಗೂ ಉದಗಿರ ತಾಲ್ಲೂಕಿನಲ್ಲಿರುವ ತಗರಖೇಡಾ, ಔರಾದ್‌(ಎಸ್‌) ಹಾಗೂ ಗಂಜರಗಾದ ಬ್ಯಾರೇಜ್‌ಗಳಿಗೂ ನೀರು ಹರಿದು ಬಂದಿಲ್ಲ. ಹೀಗಾಗಿ ಈ ಬ್ಯಾರೇಜ್‌ಗಳೂ ತುಂಬಿಲ್ಲ. ಮಹಾರಾಷ್ಟ್ರದ ಧನೇಗಾಂವ್‌ ಹಾಗೂ ತೇರಣಾದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಗಡಿ ಭಾಗದ ಜನ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಮಾಂಜ್ರಾ ಹಾಗೂ ತೇರಣಾ ನದಿ ಬ್ಯಾರೇಜ್‌ಗಳಲ್ಲಿ ಸಾಕಷ್ಟು ನೀರು ಹರಿದು ಬಂದಿದೆ. ಈಗಾಗಲೇ ಅವು ನಿಗದಿತ ಮಟ್ಟ ತಲುಪಿವೆ. ಈ ಬ್ಯಾರೇಜ್‌ಗಳಿಂದ ಯಾವುದೇ ಸಂದರ್ಭದಲ್ಲಿ ನೀರು ಹರಿ ಬಿಡುವ ಸಾಧ್ಯತೆ ಇದೆ. ನದಿ ದಂಡೆಯ ಗ್ರಾಮಗಳ ನಿವಾಸಿಗಳು ನದಿಗಳಿಗೆ ತೆರಳಬಾರದು. ಜೀವ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಔರಾದ್‌ ತಹಶೀಲ್ದಾರರು ಎಚ್ಚರಿಕೆ ವಹಿಸಬೇಕು ಎಂದು ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ್ ಸೂಚಿಸಿದ್ದಾರೆ.

ಸಾಧಾರಣ ಮಳೆ

ಜಿಲ್ಲೆಯಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದ ದಟ್ಟವಾದ ಮೋಡ ಆವರಿಸಿ ಮಧ್ಯಾಹ್ನದ ವೇಳೆ ಜೋರಾಗಿ ಸುರಿದಿದೆ. ಜಿಟಿ ಜಿಟಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತು.

ಔರಾದ್, ಕಮಲನಗರ, ಭಾಲ್ಕಿ, ಚಿಟಗುಪ್ಪ ಹಾಗೂ ಹುಮನಾಬಾದ್‌ನಲ್ಲೂ ಸಾಧಾರಣ ಮಳೆಯಾಗಿದೆ. ಬೀದರ್‌ ನಗರದಲ್ಲಿ 29 ಮಿ.ಮೀ, ಬೀದರ್‌ ಗ್ರಾಮೀಣ ಪ್ರದೇಶದಲ್ಲಿ 19 ಮಿ.ಮೀ., ಜನವಾಡದಲ್ಲಿ 11 ಮಿ.ಮೀ, ಔರಾದ್‌ನಲ್ಲಿ 8 ಮಿ.ಮೀ, ಸಂತಪುರದಲ್ಲಿ 14 ಮಿ.ಮೀ, ಚಿಂತಾಕಿಯಲ್ಲಿ 16 ಮಿ.ಮೀ, ಕಮಲನಗರದಲ್ಲಿ 10 ಮಿ.ಮೀ, ಭಾಲ್ಕಿ ಪಟ್ಟಣದಲ್ಲಿ 22 ಮಿ.ಮೀ, ಭಾಲ್ಕಿ ತಾಲ್ಲೂಕಿನ ಹಲಬರ್ಗಾದಲ್ಲಿ 21 ಮಿ.ಮೀ, ನಿಟ್ಟೂರಲ್ಲಿ 16 ಮಿ.ಮೀ., ಚಿಟಗುಪ್ಪ ಹಾಗೂ ನಿರ್ಣಾದಲ್ಲಿ 14 ಮಿ.ಮೀ, ಹುಮನಾಬಾದ್‌ ಪಟ್ಟಣ ಹಾಗೂ ತಾಲ್ಲೂಕಿನ ದುಬಲಗುಂಡಿಯಲ್ಲಿ 16 ಮಿ.ಮೀ. ಮಳೆಯಾಗಿದೆ.

ಮೋಡ ಕವಿದ ವಾತಾವರಣದಿಂದಾಗಿ ಬೆಳೆಗಳಿಗೆ ಕೀಟ ಬಾಧೆ ಕಾಣಿಸಿಕೊಂಡಿದ್ದು, ಕೀಟಗಳನ್ನು ನಿಯಂತ್ರಿಸಲಾಗದೆ ರೈತರು ಕಂಗಲಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.