ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ | ಸಜ್ಜನರ-ದುರ್ಜನರ ನಡುವಿನ ಸಂಘರ್ಷ: ಮುಖ್ಯಮಂತ್ರಿ ಬೊಮ್ಮಾಯಿ

ಭಾಲ್ಕಿ: ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ
Last Updated 20 ಏಪ್ರಿಲ್ 2023, 14:04 IST
ಅಕ್ಷರ ಗಾತ್ರ

ಭಾಲ್ಕಿ: ‘ಭಾಲ್ಕಿ ವಿಧಾನಸಭೆ ಕ್ಷೇತ್ರದ ಚುನಾವಣೆ ಸಜ್ಜನರ-ದುರ್ಜನರ ನಡುವಿನ ಸಂಘರ್ಷವಾಗಿದ್ದು, ಜನರು ಸರಳ ರಾಜಕಾರಣಿ ಪ್ರಕಾಶ ಖಂಡ್ರೆ ಅವರನ್ನು ಗೆಲ್ಲಿಸಬೇಕು‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಗಣೇಶಪೂರ ವಾಡಿ ರಸ್ತೆಯಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಜನಶಕ್ತಿ, ದರ್ಪದ ಶಕ್ತಿಯ ನಡುವಿನ ಹೋರಾಟದಲ್ಲಿ ಯಾವಾಗಲೂ ಜನಶಕ್ತಿ ಗೆಲ್ಲುತ್ತದೆ. ಎಲ್ಲರನ್ನ, ಎಲ್ಲ ಕಾಲದಲ್ಲಿಯೂ ಮೋಸ ಮಾಡಲು ಆಗುವುದಿಲ್ಲ. ಕ್ಷೇತ್ರದ ಶಾಸಕರು 15 ವರ್ಷಗಳ ಕಾಲ ಸ್ವಾರ್ಥ ರಾಜಕಾರಣ ನಡೆಸಿದ್ದಾರೆ. ಜನಹಿತ, ಅಭಿವೃದ್ಧಿಪರ ಕಾರ್ಯ ಮಾಡಿಲ್ಲ‘ ಎಂದು ದೂರಿದರು.

‘ಜನರನ್ನು ಯಾಮಾರಿಸೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್‍ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ ಅದೊಂದು ವಿಜಿಟಿಂಗ್ ಕಾರ್ಡ್, ಬೋಗಸ್‌ ಕಾರ್ಡ್‌ ಎಂದು ವ್ಯಂಗ್ಯವಾಡಿದರು. ಬಿಜೆಪಿ ಸರ್ಕಾರದಲ್ಲಿ ರಸ್ತೆ, ನೀರಾವರಿ, ಆಸ್ಪತ್ರೆ, ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ್ದೇವೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಈ ಭಾಗದ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಟ್ಟಿದ್ದೇವೆ‘ ಎಂದರು.

‘ಮೀಸಲಾತಿ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಬರೀ ಮಾತೆತ್ತಿದ್ದರೇ ಸಾಮಾಜಿಕ ಬದ್ಧತೆ ಬಗ್ಗೆ ಮಾತನಾಡುವ ಕಾಂಗ್ರೆಸ್ ಬಡ ಜನರು, ದುರ್ಬಲ ವರ್ಗದ ಪರ ಏಕೆ ನಿಲ್ಲಲಿಲ್ಲ‘ ಎಂದು ಪ್ರಶ್ನಿಸಿದರು.

‘ನಾವು ಅಧಿಕಾರಕ್ಕೆ ಬಂದ ಮೇಲೆ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿ ನ್ಯಾಯ ಒದಗಿಸಿದ್ದೇವೆ. ಈ ಭಾಗದ ರೈತರ ಬಹುದಿನಗಳ ಕನಸಾಗಿದ್ದ ಮೆಹಕರ ಏತ ನೀರಾವರಿಗೆ ₹ 750 ಕೋಟಿ, ಅನುಭವ ಮಂಟಪ ನಿರ್ಮಾಣಕ್ಕೆ 650, ಜಿಲ್ಲೆಯ ಎನ್‌ಎಸ್‌ಎಸ್‌ಕೆ, ಬಿಎಸ್‌ಎಸ್‌ಕೆ ಕಾರ್ಖಾನೆಗಳ ಉಳಿವು ಮತ್ತು ಏಳಿಗೆಗಾಗಿ ಕ್ರಮವಾಗಿ ₹125. 20 ಕೋಟಿ ವಿಶೇಷ ಸಾಲ ನೀಡಿದ್ದೇವೆ‘ ಎಂದು ತಿಳಿಸಿದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ‘ಕ್ಷೇತ್ರದ ಜನರಿಗೆ ಸುಳ್ಳು ಹೇಳಿ, ಮೋಸ ಮಾಡಿ ಮೂರು ಬಾರಿ ಶಾಸಕರಾಗಿರುವ ಈಶ್ವರ ಖಂಡ್ರೆ ಅವರು ಈ ಬಾರಿ ಬಿಜೆಪಿ ಒಗ್ಗಟ್ಟಿನ ಬಲದಿಂದ ಸೋಲು ಕಾಣಲಿದ್ದಾರೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಮಾತನಾಡಿ, ‘ಈ ಹಿಂದೆಯು ಎರಡು ಅವಧಿಗೆ ಕ್ಷೇತ್ರದ ಶಾಸಕನಾಗಿ ಜನರ ಸೇವೆ ಮಾಡಿದ್ದೇನೆ. ಸಾವಿನಿಂದ ಹೊರ ಬಂದಿರುವ ನನಗೆ ಇದು ಕೊನೆಯ ಚುನಾವಣೆ ಆಗಿದೆ. ಕ್ಷೇತ್ರದ ಮತದಾರರು ಈ ಬಾರಿ ನನ್ನನ್ನು ಆಶೀರ್ವದಿಸಬೇಕು‘ ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಮಾತನಾಡಿ, ‘ಶಾಸಕ ಈಶ್ವರ ಖಂಡ್ರೆ ಅವರು ಅಭಿವೃದ್ಧಿ ಮಾಡಿದ್ದರೇ ಸೀರೆ ಹಂಚುವ ಪರಿಸ್ಥಿತಿ ಏಕೆ ಬರುತ್ತಿತ್ತು ಎಂದು ಪ್ರಶ್ನಿಸಿದ ಅವರು, ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಬಿಜೆಪಿಯನ್ನು ಗೆಲ್ಲಿಸಲಿದ್ದೇವೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀಲಂಗಾದ ಶಾಸಕ ಸಂಭಾಜಿ ಪಾಟೀಲ, ಮರಾಠಾ ನಿಗಮ ಮಂಡಳಿ ಅಧ್ಯಕ್ಷ ಮಾರುತಿರಾವ್‌ ಮೂಳೆ, ಡಾ.ದಿನಕರ ಮೋರೆ, ಜರ್ನಾಧನರಾವ್‌ ಬಿರಾದಾರ, ಕಿಶನರಾವ್‌ ಪಾಟೀಲ ಇಂಚೂರಕರ್, ಯಾದವರಾವ್‌ ಕನಸೆ, ಬಾಬುರಾವ್‌ ಕಾರಬಾರಿ, ಪ್ರಸನ್ನ ಖಂಡ್ರೆ, ಶಿವು ಲೋಖಂಡೆ, ವೀರಣ್ಣ ಕಾರಬಾರಿ, ಲುಂಬಿಣಿ ಗೌತಮ, ಗೋವಿಂದರಾವ್‌ ಬಿರಾದಾರ, ಅನಿಲ್‌ ಶಿಂಧೆ, ಬಸವರಾಜ ಮನಮೊಳೆ, ಕಿರಣ ಪಾಟೀಲ, ಅನಿಲ ಭೂಸಾರೆ ಇದ್ದರು. ಪಂಡಿತ ಶಿರೋಳೆ ಸ್ವಾಗತಿಸಿದರು. ಶಿವರಾಜ ಗಂದಗೆ ನಿರೂಪಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT