ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಇಂಗ್ಲಿಷ್‌ ಶಾಲೆ ತೆರೆದವರಿಗೆ ಕಸಾಪ ಗೌರವ

ತಾಲ್ಲೂಕು ಸಮ್ಮೇಳನಕ್ಕೆ ಅನರ್ಹರ ಆಯ್ಕೆ: ಸಾಹಿತಿಗಳ ಅಸಮಾಧಾನ
Last Updated 16 ಫೆಬ್ರುವರಿ 2023, 3:26 IST
ಅಕ್ಷರ ಗಾತ್ರ

ಬೀದರ್: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಅನರ್ಹರನ್ನು ಆಯ್ಕೆ ಮಾಡಿರುವುದಕ್ಕೆ ಜಿಲ್ಲೆಯಾದ್ಯಂತ ಸಾಹಿತಿಗಳು ಹಾಗೂ ಕನ್ನಡಾಭಿಮಾನಿಗಳ ಅಸಮಾಧಾನ ಮುಂದುವರಿದಿದೆ. ಗಡಿಯಲ್ಲಿ ಇಂಗ್ಲಿಷ್‌ ಶಾಲೆ ತೆರೆದವರಿಗೆ ಕಸಾಪ ಗೌರವ ನೀಡಲು ಮುಂದಾಗಿರುವುದಕ್ಕೂ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಹಿರಿಯ ಸಾಹಿತಿಗಳು ಹಾಗೂ ಉದಯೋನ್ಮುಖ ಬರಹಗಾರರು ತಾವು ರಚಿಸಿದ ಕೃತಿಗಳು, ಕನ್ನಡಕ್ಕಾಗಿ ಸಲ್ಲಿಸಿದ ಸೇವೆಯನ್ನು ಉಲ್ಲೇಖಿಸಿ ಇ–ಮೇಲ್‌ ಹಾಗೂ ವಾಟ್ಸ್‌ಆ್ಯಪ್‌ಗಳಲ್ಲಿ ವಿವರಗಳನ್ನು ಕಳಿಸುತ್ತಿದ್ದಾರೆ. ಗಡಿಯಲ್ಲಿರುವ ಮರಾಠಿ ಭಾಷಿಕರೂ ಕಸಾಪ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಇಂತಹ ಘಟನೆ ನಡೆದಿಲ್ಲ. ಹಾಗೇನಾದರೂ ಆದರೆ ಬೀದರ್‌ ಜಿಲ್ಲೆಗೆ ಹಾಗೂ ಕಸಾಪದ ಸಂಸ್ಕೃತಿಗೆ ಮಸಿ ಬಳಿದಂತೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು ಹಠಮಾರಿ ಧೋರಣೆ ಅನುಸರಿಸಿ ತಮಗೆ ಬೇಕಿರುವ ವ್ಯಕ್ತಿಯನ್ನೇ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡುವುದಾದರೆ ಮೊದಲು ಅವರ ಹೆಸರಲ್ಲಿ ಹತ್ತಾರು ಪುಸ್ತಕ ಪ್ರಕಟಿಸಲಿ, ಬೇಕಿದ್ದರೆ ಮುಂದಿನ ವರ್ಷ ಜಾತ್ರೆ ಮಾಡಿಕೊಳ್ಳಲಿ ಎಂದು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಕಸಾಪದ ಆಯ್ದ ಕೆಲ ವ್ಯಕ್ತಿಗಳು ಅನರ್ಹರ ಬೆಂಬಲಕ್ಕೆ ನಿಂತಿದ್ದಾರೆ. ಧಾರ್ಮಿಕ ಸಂಸ್ಥೆಯನ್ನು ಗುರಾಣಿಯಾಗಿ ಬಳಸಿಕೊಂಡರೆ ಸಮ್ಮೇಳನ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಅನರ್ಹರೇ ಸ್ವಯಂ ಪ್ರೇರಣೆಯಿಂದ ಸರ್ವಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವುದು ಹೆಚ್ಚು ಗೌರವಯುತ ಎಂದು ಹಲವರು ಆಡಿಕೊಳ್ಳುತ್ತಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ ಕೆಲ ಸಂಘಟನೆಗಳು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅನರ್ಹ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸಿದರೆ ಕಪ್ಪು ಬಾವುಟ ತೋರಿಸಿ ವಿರೋಧಿಸಲು ಸಿದ್ಧತೆ ನಡೆಸಿವೆ.

‘ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮಾವಳಿಗೆ ಅನುಸಾರವಾಗಿ ಅರ್ಹರನ್ನು ಆಯ್ಕೆ ಮಾಡಬೇಕು. ಸಮ್ಮೇಳನಾಧ್ಯಕ್ಷರಾಗುವವರು ಯಾವುದೇ ಧರ್ಮ, ಜಾತಿಗೆ ಸೇರಿರಲಿ ಕನಿಷ್ಠ ನಾಲ್ಕು ಪುಸ್ತಕಗಳನ್ನಾದರೂ ಬರೆದಿರಬೇಕು. ಕನಿಷ್ಠ 35 ವರ್ಷ ಮೇಲ್ಪಟ್ಟವರು ಇರಬೇಕು. ಸಾರ್ವಜನಿಕ ಸಮಾರಂಭದಲ್ಲಿ ಕೊಡುವ ನಾಲ್ಕು ಸ್ಮರಣಿಕೆಗಳನ್ನು ಹಿಡಿದುಕೊಂಡು ಪೊಟೊ ತೆಗೆದುಕೊಂಡ ಮಾತ್ರಕ್ಕೆ ಅವುಗಳನ್ನೇ ಪ್ರಶಸ್ತಿ ಎಂದು ಪರಿಗಣಿಸಬಾರದು. ಇನ್ನೂ ಕಾಲ ಮಿಂಚಿಲ್ಲ. ಅರ್ಹರನ್ನು, ಅದರಲ್ಲೂ ಸಾಹಿತಿಗಳನ್ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಈ ಮೂಲಕ ಕನ್ನಡಿಗರನ್ನು ಗೌರವಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಮನವಿ ಮಾಡಿದ್ದಾರೆ.

ಅನರ್ಹರಿಗೆ ಅವಕಾಶ ಕೊಟ್ಟರೆ ಸಾಧನೆಯ ಶಿಖರವೇರಲು ವಾಮ ಮಾರ್ಗ ತೋರಿಸಿದಂತೆ ಆಗಲಿದೆ. ನಿಜವಾದ ಶರಣ ಬಂಧುಗಳು ಅಂತಹದಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ಇದೆ ಎಂದು ಹೆಸರು ಹೇಳಲಿಚ್ಛಿಸದ ಸಾಹಿತಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

‘ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಸ್ಥಾನಕ್ಕೆ ಹಿರಿಯ, ನುರಿತ ಬರಹಗಾರರು, ಸಾಹಿತಿಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. ಇದರಿಂದ ಸಮ್ಮೇಳನಕ್ಕೆ ಮೆರುಗು ಬರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವವೂ ಹೆಚ್ಚಾಗುತ್ತದೆ’ ಎಂದು ಬೀದರ್ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ ಹೇಳಿದ್ದಾರೆ.

‘ವ್ಯಕ್ತಿಗತವಾಗಿ ಯಾರನ್ನೂ ವಿರೋಧಿಸುವುದಿಲ್ಲ. ನಾನು ಆರು ಕೃತಿಗಳನ್ನು ಹೊರ ತಂದಿದ್ದೇನೆ. ನನ್ನಂಥ ಲೇಖಕರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು’ ಎಂದು ಕಮಲನಗರ ತಾಲ್ಲೂಕಿನ ಹೊಳಸಮುದ್ರ ಗ್ರಾಮದ ಸಂಗಮೇಶ ಮುರ್ಕೆ ಮನವಿ ಮಾಡಿದ್ದಾರೆ.

‘ನಾನು ಕಮಲನಗರ ತಾಲ್ಲೂಕಿನ ಖೇಡ ಗ್ರಾಮದವನು. ಬೀದರ್‌ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ. ಹುಟ್ಟೂರಿನೊಂದಿಗೆ ನಿರಂತರ ಸಂಪರ್ಕ ಇದೆ. 14 ಕೃತಿ ಹಾಗೂ ಒಂದು ಸಂಪಾದನೆ ಗ್ರಂಥ ಸೇರಿ ಒಟ್ಟು 15 ಕೃತಿಗಳನ್ನು ಹೊರಗೆ ತಂದಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತು ಅರ್ಹ ಸಾಹಿತಿಗಳನ್ನು ಕಡೆಗಣಿಸಿರುವುದು ಬೇಸರ ತಂದಿದೆ’ ಎಂದು ಸಾಹಿತಿ ವಿಶ್ವನಾಥ ಕಿವಡೆ ಬೇಸರ ವ್ಯಕ್ತಪಪಡಿಸಿದ್ದಾರೆ.

ಅನರ್ಹರು ಅಧ್ಯಕ್ಷರಾದರೆ ಸಮ್ಮೇಳನದ ಮೆರವಣಿಗೆ ಕಪ್ಪು ಬಾವುಟ ಪ್ರದರ್ಶನ

ಬೀದರ್‌: ಅನರ್ಹರು ತಾಲ್ಲೂಕು ಸಮ್ಮೇಳನದ ಸರ್ವಾಧ್ಯಕ್ಷರಾದರೆ ಸಮ್ಮೇಳನ ಮೆರವಣಿಗೆಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಐದು ಸಂಘಟನೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಕ್ಕೆ ಎಚ್ಚರಿಕೆ ನೀಡಿವೆ.

ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಆಸ್ತಿಯಾಗಿದೆ. ಪರಿಷತ್ತು ಜಾತಿಯನ್ನಲ್ಲದೇ ಸಾಹಿತ್ಯ, ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಕೆಲ ತಾಲ್ಲೂಕು ಸಮ್ಮೇಳನ ಅಧ್ಯಕ್ಷರ ಆಯ್ಕೆಯೇ ಸರಿ ಇಲ್ಲ. ಗಡಿಯಲ್ಲಿ ಇಂಗ್ಲಿಷ್‌ ಶಾಲೆಗಳನ್ನು ನಡೆಸುತ್ತಿರುವವರಿಗೆ ತಾಲ್ಲೂಕು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ಖಂಡನೀಯ ಎಂದು ಸಂಘಟನೆಗಳು ಹೇಳಿವೆ.

ಸಾಹಿತ್ಯ ಪರಿಷತ್ತಿನ ತಾಲ್ಲೂಕು, ಜಿಲ್ಲಾ ಘಟಕ ದೊಡ್ಡ ತಪ್ಪು ಮಾಡುತ್ತಿವೆ. ಈಗ ಆಗಿರುವ ಲೋಪವನ್ನು ಸರಿಪಡಿಸಬೇಕು. ಪರಿಷತ್ತಿನ ನಿಯಮಾವಳಿಯಂತೆ ತಾಲ್ಲೂಕು ಸಮ್ಮೇಳನಾಧ್ಯಕ್ಷರ ಆಯ್ಕೆ ಆಗಬೇಕು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಮನವಿ ಮಾಡಿವೆ.

ಇಂಗ್ಲಿಷ್ ಶಾಲೆಗಳನ್ನು ನಡೆಸುತ್ತಿರುವ, ಸಾಹಿತ್ಯ ಲೋಕಕ್ಕೆ ವೈಯಕ್ತಿಕವಾಗಿ ಯಾವುದೇ ಕೊಡುಗೆ ನೀಡದ ವ್ಯಕ್ತಿಗೆ ಮಣೆ ಹಾಕಿದರೆ ಕನ್ನಡ ಮಾತೆಗೆ ಅವಮಾನ ಮಾಡಿದಂತೆ ಆಗಲಿದೆ. ತಾಲ್ಲೂಕು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರ ಕ್ರಮ ಖಂಡಿಸಿ ಸಮ್ಮೇಳಾನಧ್ಯಕ್ಷರ ಮೆರವಣಿಗೆಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ವಿಶ್ವ ಕನ್ನಡಿಗರ ಸಂಸ್ಥೆ–ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ, ದಲಿತ ಸೇನೆ (ರಾಮವಿಲಾಸ) ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ನಿರಾಟೆ, ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಪ್ರೇಮಕುಮಾರ ಕಾಂಬಳೆ, ವೀರ ಕನ್ನಡಿಗರ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮುಕೇಶ ಶಹಾಗಂಜ್, ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾಸಂಘದ ಜಿಲ್ಲಾ ಅಧ್ಯಕ್ಷ ಸೂರ್ಯಕಾಂತ ಸಾಧುರೆ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT