ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾವುದೇ ಶಾಲೆಯಲ್ಲಿ ಆಟ ಆಡಿಸುತ್ತಿಲ್ಲ: ಶಾಸಕ ಶರಣು ಸಲಗರ

Published 8 ಜುಲೈ 2024, 16:32 IST
Last Updated 8 ಜುಲೈ 2024, 16:32 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ತಾಲ್ಲೂಕಿನಲ್ಲಿ ದಿನವೂ ಸಂಚರಿಸುತ್ತೇನೆ. ಆದರೆ ಯಾವುದೇ ಶಾಲಾ ಆವರಣದಲ್ಲಿ ಮಕ್ಕಳು ಆಟ ಆಡುವುದನ್ನು ನಾನು ಎಂದೂ ಕಂಡಿಲ್ಲ ಕಾರಣವೇನು?’ ಎಂದು ಶಾಸಕ ಶರಣು ಸಲಗರ ಸಂಬಂಧಿತ ಅಧಿಕಾರಿಗಳಿಗೆ ಪ್ರಶ್ನಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ದೈಹಿಕ ಶಿಕ್ಷಕರ ಕೊರತೆ ಇದೆಯೇ, ಆಟದ ಮೈದಾನ ಇಲ್ಲವೇ? ಬಟಗೇರಾ, ಕೊಹಿನೂರ, ಬೇಲೂರಿನ ಶಾಲೆಗಳ ಎದುರಲ್ಲಿ ಉತ್ತಮ ವ್ಯವಸ್ಥೆ ಇದೆ. ಆದರೂ ಕ್ರೀಡೆಗಳು ನಡೆಯುವುದಿಲ್ಲ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪಾಠದ ಜೊತೆಯಲ್ಲಿ ಆಟವೂ ಮುಖ್ಯವಾಗಿದ್ದು ಮುಂದೆ ಹಾಗಾಗದಂತೆ ನೋಡಿಕೊಳ್ಳಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಉತ್ತಮ ಶಿಕ್ಷಕರ ವ್ಯವಸ್ಥೆ ಆಗಲಿ. ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಬೇಕು’ ಎಂದರು.

‘ತಾಲ್ಲೂಕು ಆಸ್ಪತ್ರೆಗೆ ಎರಡು ಡಯಾಲಿಸಿಸ್ ಯಂತ್ರಗಳು, ಆಂಬುಲೆನ್ಸ್, ಸಿಟಿ ಸ್ಕ್ಯಾನಿಂಗ್ ಒದಗಿಸುತ್ತೇನೆ. ಬ್ಲಡ್ ಬ್ಯಾಂಕ್ ಮತ್ತು ಶವ ಪರೀಕ್ಷಾ ಕೇಂದ್ರಕ್ಕೆ ರಸ್ತೆ ನಿರ್ಮಿಸುತ್ತೇನೆ. ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ಇಲ್ಲದಿದ್ದರೂ ಹೆರಿಗೆಗಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದು ಅದನ್ನು ತಡೆಯಬೇಕು. ಅಪಘಾತಗಳಿಗೆ ಹೆಲ್ಮೆಟ್ ಹಾಕದಿರುವುದು ಕಾರಣವಾಗುತ್ತಿದ್ದು ಪೊಲೀಸ್ ಇಲಾಖೆಯವರು ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದರು.

‘ತಾಲ್ಲೂಕಿನಲ್ಲಿ 3235 ಎಕರೆ ವಕ್ಫ್ ಆಸ್ತಿಯಿದೆ. ಅದರಲ್ಲಿ ನಗರ ಹಾಗೂ ಸುತ್ತಲಿನಲ್ಲಿ 200 ಎಕರೆಯಷ್ಟು ಅತಿಕ್ರಮಣ ಆಗಿದೆ. ಆದ್ದರಿಂದ ನಗರಸಭೆ ಆಯುಕ್ತರು, ತಹಶೀಲ್ದಾರ್ ಹಾಗೂ ವಕ್ಫ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ನಾಳೆಯಿಂದಲೇ ಜಾಗ ಕಬಳಿಸಿದವರಿಗೆ ನೋಟಿಸ್ ನೀಡಬೇಕು. ಕೆಲ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ರೈತರು ತೊಂದರೆಯಲ್ಲಿದ್ದು ಈ ಸಮಸ್ಯೆ ಬಗೆಹರಿಸಬೇಕು. ಈಚೆಗೆ ಬೀದರ್‌ಗೆ ಬಂದಿದ್ದ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಸಹ ಅತಿಕ್ರಮಣ ತಡೆಗೆ ಸೂಚಿಸಿದ್ದರಾದರೂ ಸಂಬಂಧಿತರು ಕ್ರಮ ತೆಗೆದುಕೊಂಡಿಲ್ಲ’ ಎಂದರು.

ವಿಧಾನಪರಿಷತ್ ಸದಸ್ಯ ಭೀಮರಾವ್ ಪಾಟೀಲ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇದ್ದರೂ ಅನೇಕ ಮಕ್ಕಳು ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮತ್ತು ಕೋಚಿಂಗ್ ಕ್ಲಾಸ್‌ಗಳಿಗೆ ಹೋಗುತ್ತಿರುವ ಬಗ್ಗೆ ದೂರುಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ, ಹಾವು ಕಡಿತಕ್ಕೆ ತಕ್ಷಣ ಚಿಕಿತ್ಸೆ ನೀಡುವುದು ಅತ್ಯಗತ್ಯ’ ಎಂದರು.

ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ‘ತಾಲ್ಲೂಕು ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಕೆಲ ಮಾತ್ರೆ ಮತ್ತು ಔಷಧ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಎಲ್ಲ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಕೋಚಿಂಗ್ ಕೇಂದ್ರಗಳಿಗೆ ನೋಟಿಸ್: ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರು ಮಾತನಾಡಿ, ‘ನಗರದಲ್ಲಿನ ಅನಧಿಕೃತ 23 ಕೋಚಿಂಗ್ ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ 212 ಹಾಗೂ ಪ್ರೌಢಶಾಲೆಗಳಲ್ಲಿನ 81 ಖಾಲಿ ಸ್ಥಾನಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಉಚಿತವಾಗಿ ನೀಡಬೇಕೆಂದು ಸರ್ಕಾರ ಹೇಳಿದ್ದರೂ ಏಕಂಬಾ, ಉಜಳಂಬ ಹಾಗೂ ಇತರೆ ಪ್ರೌಢಶಾಲೆಗಳ ವಿದ್ಯುತ್ ಸಂಪರ್ಕ ತೆಗೆಯಲಾಗಿದೆ. ತಕ್ಷಣ ಸಂಪರ್ಕ ಒದಗಿಸುವಂತೆ ಕ್ರಮ ತೆಗೆದುಕೊಳ್ಳಬೇಕು. ಮಿರ್ಜಾಪುರ, ಸಸ್ತಾಪುರ, ಬಟಗೇರಾವಾಡಿ, ಕಿಟ್ಟಾ, ಚಿಕ್ಕನಾಗಾಂವ ತಾಂಡಾ, ಗೌರತಾಂಡಾ, ಘೋಟಾಳ, ಉಜಳಂಬ, ಚೌಕಿವಾಡಿ, ಬಾಗಹಿಪ್ಪರ್ಗಾ ಗ್ರಾಮಗಳ ಕೆಲ ಶಾಲಾ ಕೊಠಡಿಗಳು ಮತ್ತು ಶೌಚಾಲಯಗಳು ಅರ್ಧಕ್ಕೆ ನಿಂತಿದ್ದು ಕೆಲಸ ಪೂರ್ಣಗೊಳಿಸಲು ಸಂಬಂಧಿತರಿಗೆ ಸೂಚಿಸಬೇಕು’ ಎಂದು ಕೇಳಿಕೊಂಡರು.

ಕೃಷಿ ಸಹಾಯಕ ನಿರ್ದೇಶಕ ಮಾರ್ತಂಡ ಮಚಕೂರಿ ಮಾತನಾಡಿ, ‘ಅತಿವೃಷ್ಟಿಯಿಂದಾಗಿ ಅಟ್ಟೂರ್ ಮತ್ತು ಕೊಹಿನೂರ ಕೆರೆ ಒಡೆದು 890 ಎಕರೆ ಜಮೀನಿಗೆ ಹಾನಿ ಆಗಿದೆ. ₹64 ಲಕ್ಷ ಪರಿಹಾರ ಧನದ ಅಗತ್ಯವಿದ್ದು ಎರಡು ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ. ಈ ಸಲ ಉದ್ದು ಮತ್ತು ಹೆಸರಿನ ಬಿತ್ತನೆ ಅಧಿಕವಾಗಿದೆ’ ಎಂದು ತಿಳಿಸಿದರು.

ನಗರಸಭೆ ಆಯುಕ್ತ ರಾಜೀವ ಬಣಕಾರ್, ‘ನಗರದ ಮುಖ್ಯ ರಸ್ತೆಯಲ್ಲಿನ ಅತಿಕ್ರಮಣ ತೆರವುಗೊಳಿಸಲಾಗಿದೆ. ಇತರೆಡೆಯೂ ಈ ಕಾರ್ಯಾಚರಣೆ ಮುಂದುವರೆಯಲಿದೆ’ ಎಂದರು.

ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಲಾ ನಾರಾಯಣರಾವ್ ಅವರನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಶಾಂತಗೌಡ ಬಿರಾದಾರ, ಇಒ ರಮೇಶ ಸುಲ್ಫಿ ಉಪಸ್ಥಿತರಿದ್ದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಶೋಕ ಮೈಲಾರೆ, ಮುಖ್ಯ ವೈದ್ಯೆ ಡಾ.ಅಪರ್ಣಾ ಮಹಾನಂದ, ಅಕ್ಷರ ದಾಸೋಹ ಯೋಜನಾಧಿಕಾರಿ ಸಂಜೀವಕುಮಾರ ಕಾಂಗೆ, ವಕ್ಫ್ ಅಧಿಕಾರಿ ಶಹಜಾದ್ ಅಹ್ಮದ್, ಅರಣ್ಯಾಧಿಕಾರಿ ಸಂತೋಷಕುಮಾರ ಯಾಚೆ ಮತ್ತಿತರರು ವರದಿ ವಾಚಿಸಿದರು.

ಶಾಲೆಗಳಿಗೆ ಒದಗಿಸುತ್ತಿರುವ ಬೂಟ್ ಬ್ಯಾಗ್ ಇತ್ಯಾದಿ ಕಳಪೆ ಆಗಿದ್ದು ತಿಂಗಳಲ್ಲಿಯೇ ಬಳಕೆಗೆ ಬಾರದಂತಾಗುತ್ತಿವೆ. ಆದ್ದರಿಂದ ಸಂಬಂಧಿತರು ಪರಿಶೀಲಿಸಲಿ
-ಭೀಮರಾವ್ ಪಾಟೀಲ ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT