ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ‌| ‘ಅರ್ಹತೆ ಇಲ್ಲದಿದ್ದರೂ ಕಾಮಗಾರಿ ಗುತ್ತಿಗೆ‘

ಕೇಂದ್ರ ಸಚಿವ ಭಗವಂತ ಖೂಬಾ ಸಹೋದರನ ವಿರುದ್ಧ ಗಂಭೀರ ಆರೋಪ
Published 4 ಮೇ 2024, 16:26 IST
Last Updated 4 ಮೇ 2024, 16:26 IST
ಅಕ್ಷರ ಗಾತ್ರ

ಬೀದರ್‌: ‘ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರ ಸೋದರ ಸಂಬಂಧಿ ಜಗದೀಶ ಖೂಬಾ ಅವರಿಗೆ ಅರ್ಹತೆ ಇಲ್ಲದಿದ್ದರೂ ಸುಳ್ಳು ದಾಖಲೆಗಳನ್ನು ಕೊಟ್ಟು ಪ್ರಥಮ ದರ್ಜೆ ಗುತ್ತಿಗೆದಾರರು ಎಂದು ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಪಡೆದಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

‘ಈ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಮುಖ್ಯ ಎಂಜಿನಿಯರ್ ಅವರು, ಲೋಕೋಪಯೋಗಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದರಿಂದ ಖೂಬಾ ಅವರ ಇಡೀ ಕುಟುಂಬ ಸುಳ್ಳು ದಾಖಲೆ ನೀಡಿ ಸರ್ಕಾರಕ್ಕೆ ವಂಚನೆ ಮಾಡಿರುವುದು ಸಾಬೀತಾಗಿದೆ’ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ 4ರ ಅಡಿ ಪ್ಯಾಕೇಜ್ 371 ಬೀದರ್ ಜಿಲ್ಲೆ, ಔರಾದ್ ತಾಲ್ಲೂಕಿನ ಮಹಾರಾಷ್ಟ್ರ ಗಡಿ -ಮುರ್ಕಿ-ಹಂದರ್ಕಿ ರಾಜ್ಯ ಹೆದ್ದಾರಿ 122 ಕಿ.ಮೀ 0.00 ರಿಂದ 18.00 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿ ಪಡೆಯಲು ತಮ್ಮ ಬಳಿ ನಿಗದಿತ ಪ್ರಮಾಣದ ವಾಹನ ಮತ್ತು ಉಪಕರಣ ಇಲ್ಲದಿದ್ದರೂ ಖೋಟಾ, ಸುಳ್ಳು, ನಕಲಿ ದಾಖಲೆ ಕೊಟ್ಟು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ತಮ್ಮ ಬಳಿ ವಾಹನಗಳು ಇಲ್ಲದಿದ್ದರೂ ಖೊಟ್ಟಿ ದಾಖಲೆ ಸೃಷ್ಟಿಸಿ ಮೋಸ ಮಾಡಿ ಟೆಂಡರ್‌ ಪಡೆದಿದ್ದಾರೆ. ಇದು ವಂಚನೆ ಪ್ರಕರಣವಾಗಿದೆ. ಇಲಾಖೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿ, ಸುಳ್ಳು ದಾಖಲೆ ಸೃಷ್ಟಿಸಿ, ಸರ್ಕಾರಕ್ಕೆ ವಂಚನೆ ಮಾಡಿರುವ ಜಗದೀಶ್ ಖೂಬಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು’ ಎಂದು ಒತ್ತಾಯಿಸಿದ್ದಾರೆ. 

‘ಭಗವಂತ ಖೂಬಾ ಮತ್ತೊಬ್ಬ ಸೋದರನಿಗೆ ಬ್ರಿಮ್ಸ್ ಆಸ್ಪತ್ರೆಯ ಹೊರಗುತ್ತಿಗೆ ನೌಕರರನ್ನು ಒದಗಿಸುವ ಗುತ್ತಿಗೆ ಕೊಡಿಸಿದ್ದು, ಬಡವರಿಗೆ, ದಲಿತರಿಗೆ ಕನಿಷ್ಠ ವೇತನ ನೀಡದೆ, ವಂಚಿತರ, ಶೋಷಿತರ ಸಂಬಳ ಗುಳಂ ಮಾಡಿದ್ದಾರೆ. ಖೂಬಾ ಕುಟುಂಬ ರಾಜ್ಯದ ಎಲ್ಲೆಡೆ ಇಂತಹ ದ್ರೋಹ, ವಂಚನೆ ಮಾಡುತ್ತಿದೆ. ಖೂಬಾ ಮತ್ತು ಸೋದರರ ಎಲ್ಲ ಗುತ್ತಿಗೆ, ಸರ್ಕಾರಿ ಕಾಮಗಾರಿಯ ಕುರಿತಂತೆ ಸಮಗ್ರ ತನಿಖೆ ಮಾಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಸುಳ್ಳು ಹೇಳುವುದು, ಸುಳ್ಳು ದಾಖಲೆ ನೀಡಿ ಸರ್ಕಾರಕ್ಕೆ ವಂಚಿಸಿ ಕೋಟಿ ಕೋಟಿ ಲೂಟಿ ಮಾಡುವುದೇ ಭಗವಂತ ಖೂಬಾ ಮತ್ತು ಸೋದರರ ಕಾಯಕವಾಗಿದೆ. ಇಡೀ ಖೂಬಾ ಕುಟುಂಬ ರಾಜ್ಯದಲ್ಲಿ ಹಗಲು ದರೋಡೆ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಕೇಂದ್ರ ಸಚಿವ ಭಗವಂತ ಖೂಬಾ ಅವರು ಚಿತ್ತಾಪುರದ ವಚ್ಚಾದಲ್ಲಿ 2 ಎಕರೆಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದು, 8 ಎಕರೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ. ಕಲಬುರಗಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರು ನೋಟಿಸ್‌ ನೀಡಿ ₹25 ಕೋಟಿ ದಂಡ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ಈಗ ಭಗವಂತ ಖೂಬಾ ಅವರ ಸೋದರ ಸಂಬಂಧಿ ಜಗದೀಶ್ ಖೂಬಾ ಕರ್ಮಕಾಂಡ ಬಯಲಿಗೆ ಬಂದಿದೆ’ ಎಂದು ತಿಳಿಸಿದ್ದಾರೆ.

ಬಸವರಾಜ ಜಾಬಶೆಟ್ಟಿ
ಬಸವರಾಜ ಜಾಬಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT