ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ತಾಲ್ಲೂಕು ಕಚೇರಿಯಲ್ಲಿ ಸೌಲಭ್ಯಕ್ಕೆ ಬರ

ಕುಡಿಯಲು ಶುದ್ಧ ನೀರಿಲ್ಲ, ಶೌಚಾಲಯಕ್ಕೂ ಪರದಾಟ
ಮನ್ಮಥಪ್ಪ ಸ್ವಾಮಿ
Published 10 ಫೆಬ್ರುವರಿ 2024, 6:20 IST
Last Updated 10 ಫೆಬ್ರುವರಿ 2024, 6:20 IST
ಅಕ್ಷರ ಗಾತ್ರ

ಔರಾದ್: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ವಿವಿಧ ಮೂಲ ಸೌಲಭ್ಯದ ಕೊರತೆಯಿಂದ ಸಾರ್ವಜನಿಕರು ಪರದಾಡಬೇಕಿದೆ.

ನಿತ್ಯ ಸಾವಿರಾರು ಜನ ಬಂದು ಹೋಗುವ ತಾಲ್ಲೂಕು ಮಟ್ಟದ ಕಚೇರಿಯಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಕೂಡಲು ಆಸನ ವ್ಯವಸ್ಥೆ ಹಾಗೂ ಮಾಹಿತಿ ಫಲಕಗಳಿರಬೇಕು. ಆದರೆ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಈ ಅಗತ್ಯ ಸೌಲಭ್ಯ ಇಲ್ಲದಿರುವುದು ಸಾರ್ವಜನಿಕರನ್ನು ಕೆರಳಿಸಿದೆ.

ಇಲ್ಲಿಯ ಮಿನಿ ವಿಧಾನಸೌಧ ಊರು ಬಿಟ್ಟು 2 ಕಿ.ಮೀ. ದೂರದಲ್ಲಿದೆ. ಈ ಕಚೇರಿ ಕಟ್ಟಡದಲ್ಲೇ ಉಪ ನೋಂದಣಾಧಿಕಾರಿ ಕಚೇರಿ, ಉಪ ಖಜಾನೆ ಕಚೇರಿ, ಭೂ ದಾಖಲೆ ಇಲಾಖೆ, ಆಹಾರ ಇಲಾಖೆ, ಕಾರ್ಮಿಕ ಇಲಾಖೆ ಕಚೇರಿಗಳು ಇವೆ. ನಿತ್ಯ ಇಲ್ಲಿಗೆ 30-35 ಕಿ.ಮೀ. ದೂರದ ಗ್ರಾಮಗಳಿಂದ ಬಂದು ಹೋಗುವ ಜನರಿಗೆ ತಾಲ್ಲೂಕು ಆಡಳಿತ ಕನಿಷ್ಠ ಸೌಲಭ್ಯ ಕಲ್ಪಿಸದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಶುದ್ಧ ನೀರಿನ ಘಟಕ ಇದ್ದರೂ ಅದು ಕೆಟ್ಟು ನಿಂತಿದೆ. ಹೀಗಾಗಿ ಬಾಯಾರಿಕೆ ನೀಗಿಸಿಕೊಳ್ಳಲು ಹಣ ಕೊಟ್ಟು ನೀರು ಖರೀದಿಸಬೇಕು. ಇನ್ನು ಶೌಚಾಲಯ ಕಟ್ಟಡಗಳಿದ್ದರೂ ಅವು ಬಳಕೆಯಾಗುತ್ತಿಲ್ಲ. ಈ ವಿಷಯದಲ್ಲಿ ಮಹಿಳೆಯರು ಹೆಚ್ಚಿನ ತೊಂದರೆ ಎದುರಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಶೌಚಾಲಯ ಬಂದ್ ಆಗಿದೆ. ಇದರಿಂದ ನಾವು ಸಮಸ್ಯೆಯಲ್ಲಿದ್ದೇವೆ ಎಂದು ತಹಶೀಲ್ದಾರ್ ಕಚೇರಿ ಮಹಿಳಾ ಸಿಬ್ಬಂದಿಯೊಬ್ಬರು ಗೋಳು ತೋಡಿಕೊಂಡಿದ್ದಾರೆ.

ಕಚೇರಿಗೆ ಬರುವ ಜನರಿಗೆ ಕೂಡಲು ಸೂಕ್ತ ಆಸನದ ವ್ಯವಸ್ಥೆ ಇಲ್ಲ. ಯಾವ ಕೆಲಸಕ್ಕೆ ಎಲ್ಲಿ ಹೋಗಬೇಕು ಎಂಬ ನಾಮಫಲಕಗಳಿಲ್ಲ. ತಾಲ್ಲೂಕು ಮಟ್ಟದ ಇಂತಹ ದೊಡ್ಡ ಕಚೇರಿ ಆವರಣ ಹಾಳಾಗಿದೆ. ಬೇಕಾಬಿಟ್ಟಿ ಕಲ್ಲುಗಳು ಬಿದ್ದಿವೆ. ವಯಸ್ಸಾದವರಿಗೆ ನಡೆಯಲು ಬರುವುದಿಲ್ಲ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.

ಇಲ್ಲಿಯ ಮಿನಿ ವಿಧಾನಸೌಧ ಕಟ್ಟಡದಲ್ಲಿ ಅನೇಕ ಸಮಸ್ಯೆಗಳಿವೆ. ಮೊದಲಿಗೆ ಕಚೇರಿ ಎದುರಿನ ಆವರಣದಲ್ಲಿ ಕಾಂಕ್ರೀಟ್ ಹಾಕಿ ಸರಿ ಮಾಡಬೇಕು. ಶುದ್ಧ ನೀರು ಹಾಗೂ ಶೌಚಾಲಯ ವ್ಯವಸ್ಥೆ ಆಗಬೇಕು ಎಂದು ಸ್ಥಳೀಯ ನಿವಾಸಿ ದೇವಿಪ್ರಸಾದ ಘೋಡ್ಕೆ ಆಗ್ರಹಿಸಿದ್ದಾರೆ.

ನಾಗಯ್ಯ ಹಿರೇಮಠ
ನಾಗಯ್ಯ ಹಿರೇಮಠ
ನಾನು ಹೊಸದಾಗಿ ಇಲ್ಲಿಗೆ ಬಂದಿದ್ದೇನೆ. ಸಮಸ್ಯೆ ಏನು ಅಂತ ತಿಳಿದುಕೊಂಡು ಹಂತ ಹಂತವಾಗಿ ಪರಿಹರಿಸಲಾಗುವುದು
-ನಾಗಯ್ಯ ಹಿರೇಮಠ ತಹಶೀಲ್ದಾರ್ ಔರಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT