ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೌಲಭ್ಯ ಕೊರತೆ: ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು

ಪಾಳು ಬಿದ್ದ ರೇಷ್ಮೆ ಇಲಾಖೆಯ ಕಚೇರಿಗಳು
Last Updated 19 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಸರ್ಕಾರ ರೇಷ್ಮೆ ಇಲಾಖೆಯನ್ನು ನಿರ್ಲಕ್ಷಿಸಿರುವ ಕಾರಣ ಜಿಲ್ಲೆಯ ರೇಷ್ಮೆ ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ರೇಷ್ಮೆ ಕೃಷಿಗೆ ಸೂಕ್ತವಾದ ಹವಾಗುಣ ಜಿಲ್ಲೆಯಲ್ಲಿದೆ. ಸರ್ಕಾರ ರೇಷ್ಮೆ ಇಲಾಖೆಯ ಕಚೇರಿಗಳ ಬಾಗಿಲುಗಳನ್ನೇ ಮುಚ್ಚುತ್ತಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಬೀದರ್‌ನ ನೌಬಾದ್‌ ಹಾಗೂ ಕೊಳಾರ ನಡುವೆ ರೇಷ್ಮೆ ಇಲಾಖೆಗೆ ಸೇರಿದ 82 ಎಕರೆ 24 ಗುಂಟೆ ಜಾಗ ಇದೆ. ಅದರಲ್ಲಿ ಈಗಾಗಲೇ 49 ಎಕರೆ ಜಾಗವನ್ನು ತೋಟಗಾರಿಕೆ ಕಾಲೇಜಿಗೆ ಕೊಡಲಾಗಿದೆ. ರೇಷ್ಮೆ ಇಲಾಖೆಯ ಜಾಗದಲ್ಲೇ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದು ಇಲಾಖೆಯ ಅಭಿವೃದ್ಧಿಗೆ ತೊಡಕಾಗಿದೆ.

1987ರಲ್ಲಿ ಪ್ರಾರಂಭಿಸಿದ ರೇಷ್ಮೆ ಮೊಟ್ಟೆ ತಯಾರಿಕೆ ಕೇಂದ್ರ, 1995ರಲ್ಲಿ ನಿರ್ಮಿಸಿದ ರೈತರ ತರಬೇತಿ ಕೇಂದ್ರ, ಮಹಿಳಾ ರೇಷ್ಮೆ ಬೆಳೆಗಾರರ ವಸತಿ ನಿಲಯ ಹಾಗೂ 40 ವಸತಿ ಗೃಹಗಳು ಇಲ್ಲಿವೆ. ಸರ್ಕಾರ ಸಿಬ್ಬಂದಿ ನೇಮಕ ಮಾಡದ ಕಾರಣ ಬಹುತೇಕ ಎಲ್ಲವೂ ಬಾಗಿಲು ಮುಚ್ಚಿವೆ. 83 ಹುದ್ದೆಗಳಲ್ಲಿ 21 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಅನೇಕ ಸಿಬ್ಬಂದಿ ವಸತಿ ಗೃಹಗಳು ಖಾಲಿ ಬಿದ್ದಿವೆ. ಮನೆಗಳ ಮೇಲೆ ಹುಲ್ಲು ಬೆಳೆದಿದೆ. ನಿರ್ವಹಣೆ ಇಲ್ಲದ ಕಾರಣ ಕೆಲ ಮನೆಗಳ ಬಾಗಿಲು ಕೊಳೆತು ಹೋಗಿವೆ. ಇನ್ನು ಕೆಲ ಮನೆಗಳು ಸೋರಲಾರಂಭಿಸಿದೆ. ಹತ್ತು ಕುಟುಂಬಗಳು ಮಾತ್ರ ಇಲ್ಲಿ ವಾಸವಾಗಿವೆ. ಈ ಕುಟುಂಬಗಳು ಇರುವ ಕಾರಣ ಉಳಿದ ಕಟ್ಟಡಗಳ ಬಾಗಿಲು, ಕಿಟಕಿಗಳು ಉಳಿದಿವೆ. ಇಲ್ಲದಿದ್ದರೆ ಅವು ಕಳ್ಳರ ಪಾಲಾಗುತ್ತಿದ್ದವು.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಕಟ್ಟಡಗಳು ಕಣ್ಣೆದುರೇ ಹಾಳಾಗುತ್ತಿರುವುದನ್ನು ನೋಡಿ ರೇಷ್ಮೆ ಇಲಾಖೆಯ ಸಿಬ್ಬಂದಿ ಮಮ್ಮಲ ಮರಗುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ರೇಷ್ಮೆ ಬೆಳೆಗಾರರಿಗೆ ತರಬೇತಿ ಇನ್ನಿತರ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗುತ್ತಿಲ್ಲ.

ರೈತರಿಗೆ ಸಲಹೆ ನೀಡಲು ಸಿಬ್ಬಂದಿ ಇಲ್ಲ

ರೇಷ್ಮೆ ಬೆಳೆ ಬೆಳೆಯಲು ಹುಮನಾಬಾದ್ ತಾಲ್ಲೂಕಿನ ವಾತಾವರಣ ಪೂರಕವಾಗಿರುವ ಕಾರಣ ಹುಮನಾಬಾದ್ ತಾಲ್ಲೂಕಿನ 20 ಗ್ರಾಮಗಳ 83.60 ಹೆಕ್ಟೇರ್‌ ಪ್ರದೇಶದಲ್ಲಿ 107 ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಳವೆಬಾವಿ ಮತ್ತು ತೆರೆದ ಬಾವಿಗಳು ಇರುವ ಕಾರಣ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗಿಲ್ಲ ಎನ್ನುತ್ತಾರೆ ರೇಷ್ಮೆ ಇಲಾಖೆ ಅಧಿಕಾರಿ ಲಕ್ಷ್ಮಣ ಪೂಜಾರಿ.

ಧುಮ್ಮನಸೂರಿನಲ್ಲಿ ಮೈಲಾರಲಿಂಗೇಶ್ವರ ಖಾಸಗಿ ಚಾಕಿ ಸಾಗಾಣಿಕೆ ಕೇಂದ್ರ ಇದೆ. 100 ಮೊಟ್ಟೆಗೆ ₹2,600 ಬೆಲೆ ಇದೆ. ರೈತರಿಗೆ ರೇಷ್ಮೆ ಇಲಾಖೆ ₹ 1,000 ಸಾವಿರ ಸಹಾಯಧನ ನೀಡುತ್ತಿದೆ ಎಂದು ರೈತ ಬಾಲಾಜಿ ಹೇಳುತ್ತಾರೆ.

2021ರ ಮಾರ್ಚ್‌ನಿಂದ ಸೆಪ್ಟೆಂಬರ್ ವರೆಗೆ 20.58 ಟನ್‌ ರೇಷ್ಮೆ ಹುಮನಾಬಾದ್‌ ಮಾರುಕಟ್ಟೆಗೆ ಬಂದಿದೆ. ಸುಮಾರು ₹ 68.57 ಲಕ್ಷ ವ್ಯವಹಾರವಾಗಿದೆ. ಹುಮನಾಬಾದ್‌ನ ರೇಷ್ಮೆ ಇಲಾಖೆಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 14 ಜನರ ಪೈಕಿ 8 ಜನ ಸಿಬ್ಬಂದಿ ನಿವೃತ್ತರಾಗಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. ರೇಷ್ಮೆ ಬೆಳೆಯ ಪ್ರಾತ್ಯಕ್ಷಿಕೆ, ತಾಂತ್ರಿಕ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು

ರೇಷ್ಮೆ ಸಾಗಣೆ ಸಮಸ್ಯೆ

ಔರಾದ್ ತಾಲ್ಲೂಕಿನಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಾಗಣೆಯ ಸಮಸ್ಯೆ ಬಹುವಾಗಿ ಕಾಡುತ್ತಿದೆ.
ಭಂಡಾರಕುಮಟಾ ಗ್ರಾಮವೊಂದರಲ್ಲೇ 80 ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯುತ್ತಾರೆ. ಇನ್ನು ಅಕನಾಪುರ, ಮುಧೋಳ, ಕೊಟಗ್ಯಾಳ ಮೊದಲಾದ ಗ್ರಾಮಗಳ ಒಟ್ಟು 150 ಎಕರೆಗೂ ಜಾಸ್ತಿ ಜಮೀನು ರೇಷ್ಮೆ ಬೆಳೆಗೆ ಮೀಸಲಿಡಲಾಗಿದೆ. ರೈತರು ಕಷ್ಟಪಟ್ಟು ಟನ್‍ಗಟ್ಟಲೇ ರೇಷ್ಮೆ ಗೂಡು ಉತ್ಪಾದಿಸಿದರೂ ಅದನ್ನು ಕೊಂಡೊಯ್ಯಲು ಸೂಕ್ತ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸಬೇಕಾಗಿದೆ.

‘ರೈತರು ದೂರದ ರಾಮನಗರ ಹಾಗೂ ಶಿಡ್ಲಘಟ್ಟಕ್ಕೆ ರೇಷ್ಮೆ ಮಾರಾಟ ಮಾಡಲು ಹೋಗಬೇಕಾದ ಸ್ಥಿತಿ ಇದೆ.
ಹುಮನಾಬಾದ್ ಹಾಗೂ ಕಲಬುರ್ಗಿಯಲ್ಲಿ ಮಾರುಕಟ್ಟೆ ಇದ್ದರೂ ಬೆಲೆ ಕಡಿಮೆ ಸಿಗುತ್ತಿದೆ. ರಾಮನಗರದಲ್ಲಿ ರೇಷ್ಮೆ ಕೆ.ಜಿಗೆ ₹ 600 ವರೆಗೆ ಮಾರಾಟವಾದರೆ, ಹುಮನಾಬಾದ್‌ನಲ್ಲಿ ₹ 400 ರಿಂದ ₹ 500 ವರೆಗೆ ಮಾರಾಟವಾಗುತ್ತಿದೆ. ಸಾಗಣೆ ಸಮಸ್ಯೆಯಿಂದ ನಷ್ಟ ಅನುಭವಿಸಬೇಕಾಗಿದೆ’ ಎಂದು ಭಂಡಾರಕುಮಟಾದ ರೇಷ್ಮೆ ಬೆಳೆಗಾರ ಜಾಕಿರ್ ಪಟೇಲ್ ಹೇಳುತ್ತಾರೆ.

‘ಮೊದಲು ನಾವು ಬೀದರ್‌ನಿಂದ ಖಾಸಗಿ ಬಸ್ ಮೂಲಕ ರಾಮನಗರಕ್ಕೆ ರೇಷ್ಮೆ ಗೂಡು ಸಾಗಿಸುತ್ತಿದ್ದೇವು.
ಸಾಗಣೆ ವೆಚ್ಚವೇ ಅಧಿಕವಾಗಿದ್ದರಿಂದ ರೈತರೆಲ್ಲ ಸೇರಿಕೊಂಡು ದೊಡ್ಡ ವಾಹನದಲ್ಲಿ ರಾಮನಗರಕ್ಕೆ ರೇಷ್ಮೆ ಸಾಗಿಸುತ್ತಿದ್ದೇವೆ’ ಎನ್ನುತ್ತಾರೆ.

‘ಜಿಲ್ಲೆಯ ರೈತರು ರೇಷ್ಮೆ ಬೆಳೆಯಲು ಉತ್ಸುಕರಾಗಿದ್ದಾರೆ. ಸರ್ಕಾರವೇ ಮಾರುಕಟ್ಟೆಗೆ ರೇಷ್ಮೆ ಗೂಡು ಸಾಗಿಸುವ ವ್ಯವಸ್ಥೆ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ ಅಭಿಪ್ರಾಯಪಡುತ್ತಾರೆ.

ಭಾಲ್ಕಿ ತಾಲ್ಲೂಕಿನಲ್ಲೂ 25 ರೇಷ್ಮೆ ಬೆಳೆಗಾರರಿದ್ದಾರೆ. ಅವರಿಗೂ ಮಾರುಕಟ್ಟೆಗೆ ರೇಷ್ಮೆ ಸಾಗಿಸುವುದೇ ತುಂಬಾ ಸಮಸ್ಯೆಯಾಗಿದೆ. ಜಿಲ್ಲಾ ಕೇಂದ್ರದಿಂದ ರಾಮನಗರ ಬಹಳ ದೂರ ಇದೆ. ಸಾರಿಗೆ ವೆಚ್ಚವೇ ಅಧಿಕವಾಗುತ್ತಿದೆ. ಇದರಿಂದ ಬೆಳೆಗಾರರು ನಿರೀಕ್ಷೆಯಷ್ಟು ಆದಾಯ ಪಡೆಯಲು ಸಾಧ್ಯವಾಗುತ್ತಿಲ್ಲ.
ಕಲಬುರ್ಗಿ, ಹುಮನಾಬಾದ್ ನಲ್ಲಿ ರೇಷ್ಮೆ ಖರೀದಿಗೆ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿ, ಹೆಚ್ಚಿನ ಮುತುವರ್ಜಿ ವಹಿಸಿದರೆ ನಮಗೆ ಅನುಕೂಲ ಆಗುತ್ತದೆ ಎಂದು ರೈತರು ಹೇಳುತ್ತಾರೆ.

ಎರಡು ವರ್ಷಗಳಲ್ಲಿ ₹ 13 ಕೋಟಿ ಆದಾಯ

ಜಿಲ್ಲೆಯ ಹವಾಮಾನ, ಮಣ್ಣು ರೇಷ್ಮೆ ಕೃಷಿಗೆ ಸೂಕ್ತವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 524 ಜನ ರೇಷ್ಮೆ ಬೆಳೆಗಾರರು 115 ಗ್ರಾಮಗಳ 1,000 ಎಕರೆ ಜಮೀನಿನಲ್ಲಿ ರೇಷ್ಮೆ ವ್ಯವಸಾಯ ಮಾಡುತ್ತಿದ್ದಾರೆ. ಎರಡು ವರ್ಷಗಳಲ್ಲಿ ರೇಷ್ಮೆ ಬೆಳೆಗಾರರು 331 ಮೆಟ್ರಿಕ್ ಟನ್ ಗೂಡು ಉತ್ಪಾದಿಸಿ ಅಂದಾಜು ₹ 13 ಕೋಟಿ ಆದಾಯ ಪಡೆದಿದ್ದಾರೆ.

‘ರೇಷ್ಮೆ ಉತ್ಪಾದನೆಗೆ 50X20 ಅಳತೆಯ ಶೆಡ್‌ ನಿರ್ಮಿಸಲು ₹ 1.5 ಲಕ್ಷ ಬೇಕು. ಸರ್ಕಾರ ಶೇಕಡ 50ರಷ್ಟು ರಿಯಾಯಿತಿ ಕೊಡುತ್ತಿದೆ. ರೇಷ್ಮೆ ಸಾಕಾಣಿಕೆಗೆ ಉತ್ತೇಜನ ಕೊಡಲು ನೂರು ಮೊಟ್ಟೆಗೆ ₹ 1 ಸಾವಿರ ಪ್ರೋತ್ಸಾಹಧನ ಒದಗಿಲಾಗುತ್ತಿದೆ’ ಎಂದು ರೇಷ್ಮೆ ವಿಸ್ತೀರ್ಣಾಧಿಕಾರಿ ವಿ.ಜಿ.ಸೆಳಕೆ ಹೇಳುತ್ತಾರೆ.

ರೇಷ್ಮೆ ಅಭಿವೃದ್ಧಿಗಾಗಿ ರೇಷ್ಮೆ ಬೆಳೆಗಾರರಿಗೆ ಹಲವಾರು ಸಹಾಯ ಸೌಲಭ್ಯ ನೀಡಲಾಗಿದೆ. ರೇಷ್ಮೆ ಹುಳು ಸಾಕಾಣಿಕೆ ಮನೆ, ಶೆಡ್‌ಗೆ 54 ಫಲಾನುಭವಿಗಳಿಗೆ, ರೇಷ್ಮೆ ಹುಳು ಸಾಕಾಣಿಕೆ ಸಲಕರಣೆಗಾಗಿ 215 ಫಲಾನುಭವಿಗಳಿಗೆ, ಹನಿ ನೀರಾವರಿಗೆ 75 ಫಲಾನುಭವಿಗಳಿಗೆ, ದ್ವಿತಳಿ ಚಾಕಿ ಸಾಕಾಣಿಕೆಗೆ 399 ಫಲಾನುಭವಿಗಳಿಗೆ, ದ್ವಿತಳಿ ಗೂಡು ಸಾಗಾಣಿಕೆಗೆ 143 ಫಲಾನುಭವಿಗಳಿಗೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 119 ಫಲಾನುಭವಿಗಳಿಗೆ, ಹಿಪ್ಪುನೇರಳೆ (ರೇಷ್ಮೆ) ಹೊಸ ನಾಟಿಗಾಗಿ 29 ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆ ಎಂದು ವಿವರಿಸುತ್ತಾರೆ.

***
ಪೂರಕ ಮಾಹಿತಿ:
ಗುಂಡು ಅತಿವಾಳ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT