ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಬೆ ಕೃಷಿಯಲ್ಲಿ ಖುಷಿ ಕಂಡ ರೈತ

ನಾಗೂರ (ಎಂ): ತರಕಾರಿ ಬೆಳೆದು ಉತ್ತಮ ಆದಾಯ ಪಡೆಯುತ್ತಿರುವ ಪಾಟೀಲ
Last Updated 9 ನವೆಂಬರ್ 2019, 10:17 IST
ಅಕ್ಷರ ಗಾತ್ರ

ಔರಾದ್: ಸಾಂಪ್ರದಾಯಿಕ ಬೆಳೆ ಬೆಳೆದು ಸದಾ ಅನುಭವಿಸುತ್ತಿದ್ದ ತಾಲ್ಲೂಕಿನ ರೈತರೊಬ್ಬರು ತೋಟಗಾರಿಕೆ ಬೆಳೆ ಕಡೆ ಮುಖ ಮಾಡಿ ಯಶಸ್ಸು ಸಾಧಿಸಿದ್ದಾರೆ.

ನಾಗೂರ (ಎಂ) ಗ್ರಾಮದ ರೈತ ದೀಪಕ ಪಾಟೀಲ ತೋಟಗಾರಿಕೆ ಬೆಳೆಗಳಾದ ನಿಂಬೆ, ಹುಣಸೆ ಜತೆಗೆ ತರಕಾರಿ ಬೆಳೆದು ಅದರಲ್ಲಿ ಖುಷಿ ಕಂಡಿದ್ದಾರೆ.

ಪಾಟೀಲರಿಗೆ 10 ಎಕರೆ ಜಮೀನು ಇದ್ದರೂ ಉಪಜೀವನಕ್ಕೂ ಪರದಾಡುವಂತಹ ಪರಿಸ್ಥಿತಿ ಇತ್ತು. ಇಂತಹ ಸಂಕಷ್ಟದ ಸಮಯದಲ್ಲಿ ರಿಲಯನ್ಸ್ ಫೌಂಡೇಶನ್‌ನಿಂದ ಆರ್ಥಿಕ ನೆರವು ಮತ್ತು ಕೃಷಿ ಇಲಾಖೆಯಿಂದ ಸಲಹೆ ಪಡೆದ ಅವರು ಬರಡು ಜಮೀನಿನಲ್ಲಿ ತೋಟಗಾರಿಕೆ ಕೃಷಿ ಆರಂಭಿಸಿದರು.

ಕೊಳವೆಬಾವಿ ಕೊರೆಸಿ ಮೂರು ಎಕರೆ ಜಮೀನನ್ನು ಹನಿ ನೀರಾವರಿ ಪದ್ಧತಿಗೆ ಒಳಪಡಿಸಿದರು. ನಾಟಿ ಮಾಡಿದ 500 ನಿಂಬೆ ಗಿಡಗಳು ಕಳೆದ ವರ್ಷದಿಂದ ಇಳುವರಿ ಕೊಡುತ್ತಿವೆ. ಆರಂಭದ ವರ್ಷ ₹ 80 ಸಾವಿರ ಆದಾಯ ಬಂದಿತ್ತು. ಈ ವರ್ಷ ₹ 1 ಲಕ್ಷಕ್ಕೂ ಹೆಚ್ಚು ಅದಾಯ ಬರುವ ವಿಶ್ವಾಸವನ್ನು ಪಾಟೀಲರು ಹೊಂದಿದ್ದಾರೆ.

ನಿಂಬೆ ಜತೆಗೆ ಅಂತರ ಬೆಳೆಯಾಗಿ ತರಕಾರಿ ಬೆಳೆಯುತ್ತಿದ್ದಾರೆ. ಇದರಿಂದ ವರ್ಷಕ್ಕೆ ₹25 ಸಾವಿರ ಬರುತ್ತಿದೆ. ಮಳೆ ಕೊರತೆಯಿಂದ ಬರದ ಬವಣೆಯಲ್ಲಿ ಬದುಕುತ್ತಿರುವ ರೈತ ದೀಪಕ ಈಗ ಕಡಿಮೆ ನೀರಲ್ಲಿ ಅತ್ಯುತ್ತಮ ಬೆಳೆ ಬೆಳೆದು ವರ್ಷವೀಡಿ ಕೆಲಸ ಹಾಗೂ ಕೈತುಂಬ ಹಣ ಮಾಡಿಕೊಂಡು ಇತರೆ ರೈತರಿಗೆ ಮಾದರಿಯಾಗಿದ್ದಾರೆ.

'ಕೃಷಿಯಲ್ಲಿ ಯಶಸ್ಸು ಕಾಣುವುದು ಕನಸಿನ ಮಾತು ಎಂದು ಭಾವಿಸಿದ್ದೆ. ಆದರೆ, ಕೃಷಿ ಇಲಾಖೆ ನಡೆಸಿದ ಸಂವಾದ, ಪ್ರಾತ್ಯಕ್ಷಿಕೆಯಿಂದ ಸ್ವಲ್ಪ ವಿಶ್ವಾಸ ಬಂತು. ತೋಟಗಾರಿಕೆ ಇಲಾಖೆಯವರು ಸೂಕ್ತ ಮಾರ್ಗದರ್ಶನ ನೀಡಿದ ಕಾರಣ ಈಗ ನನ್ನ 3 ಎಕರೆ ಜಮೀನು ಬಂಗಾರ ಕೊಡುವ ಭೂಮಿಯಾಗಿ ಮಾರ್ಪಟ್ಟಿದೆ' ಎಂದು ರೈತ ದೀಪಕ ಪಾಟೀಲ ಆತ್ಮವಿಶ್ವಾಸದಿಂದ
ಹೇಳುತ್ತಾರೆ.

'ನಿಂಬೆ 15-20 ವರ್ಷದವರೆಗೆ ಇಳುವರಿ ಕೊಡುತ್ತವೆ. ಈ ಗಿಡಗಳ ನಡುವೆ 70 ಹುಣಸೆ ಸಸಿ ನಾಟಿ ಮಾಡಿದ್ದೇನೆ. ಎಂಟು ವರ್ಷದ ನಂತರ ಅವು ಕೂಡ ಇಳುವರಿ ಕೊಡುತ್ತವೆ. ಹೀಗಾಗಿ ನನಗೆ ಈಗ ನಿರ್ವಹಣೆ ಮಾಡುವುದನ್ನು ಬಿಟ್ಟರೆ ಬೇರೆ ಯಾವುದೇ ಆತಂಕ ಇಲ್ಲ' ಎನ್ನುತ್ತಾರೆ ಅವರು.

ಸೋಲಾರ್ ಬಳಕೆ: ನಿಂಬೆ ಗಿಡಗಳಿಗೆ ಜಾನುವಾರುಗಳ ಕಾಟ ತಪ್ಪಿಸಲು ಮೂರು ಎಕರೆ ಜಮೀನು ಸುತ್ತ ಹಾಕಲಾದ ತಂತಿಗೆ ಸೋಲಾರ ವಿದ್ಯುತ್ ಹರಿಸಲಾಗಿದೆ. ಎರೆಹುಳು ಗೊಬ್ಬರ, ತಿಪ್ಪೆಗೊಬ್ಬರ ಹೆಚ್ಚು ಬಳಕೆ ಮಾಡಲಾಗುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತಿದ್ದು, ಉತ್ತಮ ಇಳುವರಿ ಬರುತ್ತಿದೆ' ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT