ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಕನ್ನಡ ಪ್ರಾಧಿಕಾರದ ಕೇಂದ್ರ ಕಚೇರಿ ಸ್ಥಾಪಿಸಲಿ

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಓಂಪ್ರಕಾಶ ದಡ್ಡೆ ಆಗ್ರಹ
Last Updated 8 ಫೆಬ್ರುವರಿ 2023, 14:21 IST
ಅಕ್ಷರ ಗಾತ್ರ

ಜನವಾಡ: ರಾಜ್ಯ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯನ್ನು ಬೀದರ್‍ನಲ್ಲಿ ಸ್ಥಾಪಿಸಬೇಕು ಎಂದು ಬೀದರ್ ತಾಲ್ಲೂಕು ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಓಂಪ್ರಕಾಶ ದಡ್ಡೆ ಆಗ್ರಹಿಸಿದರು.

ಗಡಿ ಜಿಲ್ಲೆಯಲ್ಲಿ ಕನ್ನಡ ಉಳಿಸಿ ಬೆಳೆಸಲು ಪ್ರಾಧಿಕಾರದ ಕೇಂದ್ರ ಕಚೇರಿ ಸ್ಥಾಪನೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಬೀದರ್‍ನಲ್ಲಿ ನೂರಾರು ಸಂಗೀತ ಕಲಾವಿದರು ಇದ್ದಾರೆ. ಸಂಗೀತದ ಬೆಳವಣಿಗೆಗೆ ಪೂರಕವಾಗಿ ಇಲ್ಲಿ ಸಂಗೀತ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಭರತನಾಟ್ಯಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಭರತನಾಟ್ಯ ಅಕಾಡೆಮಿ ಸ್ಥಾಪಿಸಬೇಕು. ಮಾಂಜ್ರಾ ನದಿ ಹರಿಯುವ ತಾಲ್ಲೂಕಿನಲ್ಲಿ ಮೈಸೂರಿನ ಬೃಂದಾವನ ಉದ್ಯಾನ ಮಾದರಿಯಲ್ಲಿ ಬೃಹತ್ ಉದ್ಯಾನ ನಿರ್ಮಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಪ್ರವಾಸಿಗರನ್ನು ಆಕರ್ಷಿಸಲು ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಬೇಕು. ಬೀದರ್ ಕೋಟೆ, ಮದರಸಾ, ಮಹಮೂದ್ ಗವಾನ್ ಮದರಸಾ, ಪಾಪನಾಶ, ವನವಾಸಿ ರಾಮ ಮಂದಿರ, ಶುಕ್ಲತೀರ್ಥ, ಸಾಧು ಘಾಟ, ಅಷ್ಟೂರಿನ ಗೊಮ್ಮಟ, ಸಂಗಮೇಶ್ವರ ಕೊಳಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಕಲಾವಿದರನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು. ಪ್ರತಿ ಗ್ರಾಮಗಳ ಕೆರೆ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸದ್ಯ ಮಕ್ಕಳಿಗೆ ನೈತಿಕ ಶಿಕ್ಷಣ ಹೆಚ್ಚು ಅವಶ್ಯಕವಾಗಿದೆ. ಟಿವಿ, ಇಂಟರ್ನೆಟ್ ಪ್ರಭಾವದಿಂದ ಯುವಕರು ಒಳ್ಳೆಯದರತ್ತ ಕಡಿಮೆ ಹಾಗೂ ಕೆಟ್ಟದ್ದರ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಗುರು- ಹಿರಿಯರು ಅವರಿಗೆ ಸನ್ಮಾರ್ಗವನ್ನು ತೋರಬೇಕಾಗಿದೆ ಎಂದು ಹೇಳಿದರು.
ಕನ್ನಡದ ಅಭಿವೃದ್ಧಿ ಕಾರ್ಯ ವಿಧಾನಸೌಧದಿಂದಲೇ ಆರಂಭವಾಗಬೇಕು ಎಂದು ಸಮ್ಮೇಳನ ಉದ್ಘಾಟಿಸಿದ ಹಿರಿಯ ಪತ್ರಕರ್ತ ಸದಾನಂದ ಜೋಶಿ ಹೇಳಿದರು.
ಕನ್ನಡ ಪರ ಚಟುವಟಿಕೆಗಳಿಗೆ ಸರ್ಕಾರ ದೊಡ್ಡ ಮೊತ್ತ ಮೀಸಲಿಡಬೇಕು. ಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಅಧಿಕ ಅನುದಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬೀದರ್‍ನಲ್ಲಿ ನಿರ್ಮಿಸುತ್ತಿರುವ ಜಿಲ್ಲಾ ಕನ್ನಡ ಭವನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಿ ರೂ. 2 ಕೋಟಿ ಮಂಜೂರು ಮಾಡಿಸಿದ್ದೆ. ರೂ. 1 ಕೋಟಿ ಬಿಡುಗಡೆ ಆಗಿದೆ. ಉಳಿದ ರೂ. 1 ಕೋಟಿ ಬಿಡುಗಡೆಗೂ ಮನವಿ ಮಾಡಲಾಗಿದೆ ಎಂದು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದರು.
ಬರೀ ಮಾತಿನಲ್ಲಷ್ಟೇ ಕಾಳಜಿ ತೋರಿದರೆ ಕನ್ನಡ ಬೆಳೆಯದು. ಅದು ಕೃತಿ ರೂಪಕ್ಕೆ ಬರಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿದರು. ಬಾಬುರಾವ್ ಗುರೂಜಿ, ರೇಣುಕಾ ದಡ್ಡೆ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಪಾಟೀಲ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಕುಮಾರ ಆನಂದೆ, ಹಿರಿಯ ಎಂಜಿನಿಯರ್ ಹಾವಶೆಟ್ಟಿ ಪಾಟೀಲ, ರಮೇಶ ಮೂಲಗೆ, ದೀಪಕ್ ಗಾದಗಿ, ಸಿದ್ದೋಬಾ ಲೌಟೆ, ಕಾಮಶೆಟ್ಟಿ ಘೋಡಂಪಳ್ಳಿ, ಪೀರಪ್ಪ ಯರನಳ್ಳಿ, ಮಹಾದೇವ ಬಿರಾದಾರ, ಚಂದು ಇದ್ದರು.
ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗೀರಾ ನಿರೂಪಿಸಿದರು. ಶಿವಕುಮಾರ ಚನಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT