ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಡಗಾಪುರ ಗ್ರಾ.ಪಂ ಪಿಡಿಒಗೆ ಜೀವ ಬೆದರಿಕೆ 

Published 22 ನವೆಂಬರ್ 2023, 14:27 IST
Last Updated 22 ನವೆಂಬರ್ 2023, 14:27 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಹೆಡಗಾಪುರದ ಪಿಡಿಒ ಮಹಾಲಕ್ಷ್ಮಿ ಅವರನ್ನು ಅದೇ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಅವರ ಮೂವರು ಮಕ್ಕಳು ಜೀವ ಬೆದರಿಕೆ ಹಾಕಿರುವ ಕುರಿತು ದೂರು ದಾಖಲಾಗಿದೆ.

ಪಿಡಿಒ ಮಹಾಲಕ್ಷ್ಮಿ ನೀಡಿದ ದೂರು ಆಧರಿಸಿ ಠಾಣಾಕುಶನೂರ ಪೊಲೀಸರು ಉಪಾಧ್ಯಕ್ಷ ಶರ್ಫೊದ್ದಿನ್ ಹಾಗೂ ಅವರ ಮಕ್ಕಳಾದ ಅಕ್ಬರ್, ಮಹೆಬೂಬ್ ಹಾಗೂ ಇಬ್ರಾಹಿಂ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

‘ಉಪಾಧ್ಯಕ್ಷ ಸೈಯದ್ ಶರ್ಫೊದ್ದಿನ್ ಹಾಗೂ ಅವರ ಮಕ್ಕಳು ಕಳೆದ ನವೆಂಬರ್‌ 17ರಂದು ನನ್ನ ಕಚೇರಿಗೆ ನುಗ್ಗಿ ಕಾನೂನು ಬಾಹಿರ ಕೆಲಸ ಮಾಡಲು ಒತ್ತಡ ಹಾಕಿದರು. ಮಾಡಿಕೊಡದಿದ್ದರೆ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನವೆಂಬರ್ 4ರಂದು ನಡೆದ ಪಂಚಾಯಿತಿ ಸಾಮಾನ್ಯ ಸಭೆಗೆ ನುಗ್ಗಿ ನಡುವಳಿ ಪುಸ್ತಕ ಮನಬಂದಂತೆ ತಿದ್ದಿ ಹಾಳು ಮಾಡಿದ್ದಾರೆ’ ಎಂದು ಪಿಡಿಒ ಮಹಾಲಕ್ಷಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದೂರು ನೀಡಿದ್ದಕ್ಕಾಗಿ ಪ್ರತಿಕಾರ:

‘ಗ್ರಾಮ ಪಂಚಾಯಿತಿ 15ನೇ ಹಣಕಾಸು ಯೋಜನೆ ಅನುದಾನ ದುರ್ಬಳಕೆ, ವಿವಿಧ ವಸತಿ ಹಂಚಿಕೆ ಕುರಿತು ಕೇಳಿದ ಮಾಹಿತಿ ನೀಡದಿರುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವ ಕುರಿತು ಮೇಲಧಿಕಾರಿಗಳಿಗೆ ದೂರು ನೀಡಿರುವುದಕ್ಕೆ ಪ್ರತಿಕಾರವಾಗಿ ಪಿಡಿಒ ಮಹಾಲಕ್ಷ್ಮಿ ಅವರು ನನ್ನ ಹಾಗೂ ನನ್ನ ಮಕ್ಕಳ ವಿರುದ್ಧ ದೂರು ದಾಖಲಿಸಿದ್ದಾಗಿ’ ಹೆಡಗಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೈಯದ್ ಶರ್ಫೊದ್ದಿನ್ ಸ್ಪಷ್ಟನೆ ನೀಡಿದ್ದಾರೆ.

‘ನಾನು ಅವರ ಕಚೇರಿಗೆ ಹೋಗಿ ಬೆದರಿಕೆ ಹಾಕಿದ್ದೇನೆ ಎಂಬುದು ಶುದ್ಧ ಸುಳ್ಳು. ಅಂದು ನಾನು ಊರಲ್ಲೇ ಇರಲಿಲ್ಲ. ನನ್ನ ಒಬ್ಬ ಮಗ ಅಪಘಾತವಾಗಿ ಮನೆಯಲ್ಲೇ ಇದ್ದಾನೆ. ಅವನ ಮೇಲೂ ದೂರು ದಾಖಲಿಸಿದ್ದಾರೆ. ವಾಸ್ತವವಾಗಿ ಈ ಪಿಡಿಒ ಬಂದ ಮೇಲೆ ನಮ್ಮ ಊರಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಸದಸ್ಯರ ನಡುವೆಯೇ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ತನಿಖೆ ಮಾಡಿ ನನ್ನದೇನಾದರೂ ತಪ್ಪು ಇದ್ದರೆ ನನಗೆ ಶಿಕ್ಷೆ ಕೊಡಿ’ ಎಂದು ಸೈಯದ್ ಶರ್ಫೊದ್ದಿನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT