ಮತದಾನ ಮುಗಿದ ಬೆನ್ನಲ್ಲೇ ಸಕ್ರಿಯರಾದ ಪ್ರಭು ಚವಾಣ್
ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮತದಾನ ಮುಗಿದ ಬೆನ್ನಲ್ಲೇ ಔರಾದ್ ಬಿಜೆಪಿ ಶಾಸಕ ಪ್ರಭು ಚವಾಣ್ ಅವರು ಮತ್ತೆ ಸಕ್ರಿಯರಾಗಿದ್ದಾರೆ. ಸಾರ್ವಜನಿಕರ ಭೇಟಿಗೆ ಮುಂದಾಗಿದ್ದಾರೆ. ‘ಔರಾದ್ ತಾಲ್ಲೂಕಿನ ಬೋಂತಿ ತಾಂಡಾದ ಗೃಹ ಕಚೇರಿಯಲ್ಲಿ ಬುಧವಾರ (ಮೇ 8) ನಾನು ಸಾರ್ವಜನಿಕರ ಭೇಟಿಗೆ ಲಭ್ಯವಿದ್ದೇನೆ’ ಎಂದು ಅವರ ಫೇಸ್‌ಬುಕ್ ಅಧಿಕೃತ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡಬಾರದು ಎಂದು ಚವಾಣ್ ಪಟ್ಟು ಹಿಡಿದಿದ್ದರು. ಅನೇಕ ವೇದಿಕೆಗಳಲ್ಲಿ ಅದನ್ನು ವಿರೋಧಿಸಿದ್ದರು. ಆದರೆ ಹೈಕಮಾಂಡ್ ಖೂಬಾ ಅವರಿಗೆ ಟಿಕೆಟ್ ನೀಡಿತ್ತು. ಟಿಕೆಟ್ ಘೋಷಣೆಯಾದ ದಿನವೇ ಚವಾಣ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು. ‘ಕನಿಷ್ಠ ಎರಡರಿಂದ ಮೂರು ತಿಂಗಳು ವಿಶ್ರಾಂತಿ ಮಾಡಬೇಕೆಂದು ವೈದ್ಯರು ಸಲಹೆ ಮಾಡಿದ್ದು ಅವರು ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ’ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಅದರಂತೆ ಅವರು ಪ್ರಚಾರ ಕಾರ್ಯದಲ್ಲೂ ಪಾಲ್ಗೊಂಡಿರಲಿಲ್ಲ. ಆದರೆ ಮತದಾನ ಮುಗಿದ ಮರುದಿನವೇ ಅವರು ಸಾರ್ವಜನಿಕರ ಭೇಟಿಗೆ ಮುಂದಾಗಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ. ಈ ಸಂಬಂಧ ಚವಾಣ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಇತ್ತು.