ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢ ಶಿಕ್ಷಣಕ್ಕೆ ಮಹಾರಾಷ್ಟ್ರವೇ ಗತಿ

ಔರಾದ್: ತಾಲ್ಲೂಕಿನ ಚೊಂಡಿಮುಖೇಡ್ ಗ್ರಾಮದ ವಿದ್ಯಾರ್ಥಿಗಳ ಸಂಕಷ್ಟ
Last Updated 17 ನವೆಂಬರ್ 2022, 5:13 IST
ಅಕ್ಷರ ಗಾತ್ರ

ಔರಾದ್: ಸುತ್ತಲೂ ಮಹಾರಾಷ್ಟ್ರ ಪ್ರದೇಶವೇ ಸುತ್ತುವರಿದು ನಡುಗಡ್ಡೆಯಂತಿರುವ ಬೀದರ್‌ ಜಿಲ್ಲೆಯ ಔರಾದ್‌ ತಾಲ್ಲೂಕಿನ ಚೊಂಡಿಮುಖೇಡ್ ಗ್ರಾಮಸ್ಥರು ಈಗಲೂ ಶಿಕ್ಷಣ, ವ್ಯಾಪಾರ ಸೇರಿ ದಂತೆ ಎಲ್ಲದಕ್ಕೂ ನೆರೆಯ ಮಹಾರಾಷ್ಟ್ರವನ್ನೇ ಅವಲಂಬಿಸಿದ್ದಾರೆ.

ಈ ರೀತಿ ನಡುಗಡ್ಡೆಯಂತಿರುವ ಈ ಊರು ರಾಜ್ಯಾದ್ಯಂತ ಗಮನ ಸೆಳೆದಿದೆ. ಈ ಊರಿನಲ್ಲಿ ಹಿಂದೆ ಮುಖ್ಯಮಂತ್ರಿ ಯಾಗಿದ್ದ ಎಚ್‍.ಡಿ.ಕುಮಾರಸ್ವಾಮಿ ಅವರ ನಿಗದಿಯಾಗಿದ್ದ ಗ್ರಾಮ ವಾಸ್ತವ್ಯ ಕೊನೆ ಘಳಿಗೆಯಲ್ಲಿ ಮುಂದೂಡಲಾಗಿತ್ತು.

ಈ ಹಿಂದಿನ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಹಾಗೂ ಈಗಿನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಈ ಊರಲ್ಲಿ ಗ್ರಾಮ ವಾಸ್ತವ್ಯ ಮಾಡಿ ಸರ್ಕಾರ ನಿಮ್ಮ ಜತೆ ಇದೆ ಎಂದು ಗ್ರಾಮಸ್ಥರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನವೂ ನಡೆಯಿತು. ಇಷ್ಟೆಲ್ಲ ಆದರೂ, ತಮ್ಮ ಊರಿನ ಪ್ರಮುಖ ಸಮಸ್ಯೆ ಬಗೆಹರಿದಿಲ್ಲ ಎನ್ನು ತ್ತಾರೆ ಗ್ರಾಮಸ್ಥರು.

ಕರ್ನಾಟಕ ಏಕೀಕರಣವಾಗಿ ಏಳು ದಶಕ ಕಳೆ ದರೂ ಇಲ್ಲಿನ ಮಕ್ಕಳಿಗೆ ಕನಿಷ್ಠ ಹೈಸ್ಕೂಲ್ ಶಿಕ್ಷಣ ಸೌಲಭ್ಯ ಸಿಕ್ಕಿಲ್ಲ. ಊರಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಮಕ್ಕಳು ಹೈಸ್ಕೂಲ್ ಶಿಕ್ಷಣಕ್ಕಾಗಿ ಮಹಾರಾಷ್ಟ್ರದ ರಾವಣಕೋಳಾ, ಮುಕ್ರಮಬಾದ್, ಉದಗಿರ್‌ಗೆ ಹೋಗುವುದು ಅನಿವಾರ್ಯವಾಗಿದೆ.

‘ಈ ರೀತಿ ಇತ್ತ ಕರ್ನಾಟಕದ ಶಿಕ್ಷಣವೂ ಸಿಗದೆ ಅತ್ತ ಮಹಾರಾಷ್ಟ್ರದ ಶಿಕ್ಷಣವೂ ಪೂರ್ಣ ಆಗದೆ ನಮ್ಮ ಮಕ್ಕಳ ಬದುಕು ಅತಂತ್ರವಾಗಿದೆ’ ಎಂದು ಚೊಂಡಿಮುಖೇಡ್ ಗ್ರಾಮದವರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮದಾಸ್ ಮುಖೇಡಕರ್ ಕಳವಳ ವ್ಯಕ್ತಪಡಿಸಿದ್ದಾರೆ.

‘ನಮ್ಮ ಊರಿನಲ್ಲಿ ಇಬ್ಬರು ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ನಡೆಸಿದರೂ ನಮ್ಮ ಮಕ್ಕಳ ಶೈಕ್ಷಣಿಕ ಸಮಸ್ಯೆ ಬಗೆಹರಿದಿಲ್ಲ. ಒಬ್ಬರು ಖಾಯಂ ಕನ್ನಡ ಶಿಕ್ಷಕರ ನೇಮಕವೂ ಆಗಿಲ್ಲ’ ಎಂದು ಅವರು ಅಸಮಾಧಾನ ಹೊರ ಹಾಕುತ್ತಾರೆ.

‘ರಸ್ತೆ, ನೀರು, ವಿದ್ಯುತ್ ಸೇರಿದಂತೆ ಕೆಲ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಆದರೆ ನಮ್ಮ ಮಕ್ಕಳ ಶಿಕ್ಷಣ, 371ನೇ (ಜೆ) ಪ್ರಮಾಣಪತ್ರ ವಿತರಣೆಯಲ್ಲಿನ ತೊಂದರೆ ಸೇರಿದಂತೆ ಮಹತ್ವದ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ಅವರು ಗೋಳು ತೋಡಿಕೊಂಡಿದ್ದಾರೆ.

‘ಗ್ರಾಮದ ಮಕ್ಕಳಿಗೆ ಹೈಸ್ಕೂಲ್ ಶಿಕ್ಷಣದ ವ್ಯವಸ್ಥೆ ಹಾಗೂ ಅಲ್ಲಿಯ ವಿದ್ಯಾರ್ಥಿಗಳಿಗೆ 371(ಜೆ) ಪ್ರಮಾಣಪತ್ರ ನೀಡುವಲ್ಲಿನ ತೊಂದರೆ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT