ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಮರಾಠರಿಗೆ ನ್ಯಾಯ ಒದಗಿಸಲು ಸ್ಪರ್ಧೆ: ಡಾ.ದಿನಕರ್‌ ಮೋರೆ

ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಕೆ
Published 19 ಏಪ್ರಿಲ್ 2024, 16:07 IST
Last Updated 19 ಏಪ್ರಿಲ್ 2024, 16:07 IST
ಅಕ್ಷರ ಗಾತ್ರ

ಬೀದರ್‌: ‘ಮರಾಠ ಸಮಾಜಕ್ಕೆ ನ್ಯಾಯ ಒದಗಿಸಲು ಚುನಾವಣೆಗೆ ನಿಂತಿದ್ದೇನೆ. ಸಮಾಜಕ್ಕಾಗಿ ನಾನು ಅವಮಾನಗಳನ್ನು ಮೆಟ್ಟಿ ನಿಲ್ಲಲು ಸಿದ್ಧ’ ಎಂದು ಮರಾಠ ಸಮುದಾಯದ ಮುಖಂಡ, ಪಕ್ಷೇತರ ಅಭ್ಯರ್ಥಿ ಡಾ.ದಿನಕರ್‌ ಮೋರೆ ಹೇಳಿದರು.

ನಗರದಲ್ಲಿ ಶುಕ್ರವಾರ ತಮ್ಮ ಬೆಂಬಲಿಗರೊಂದಿಗೆ ಎರಡನೇ ಸೆಟ್‌ ನಾಮಪತ್ರ ಸಲ್ಲಿಸಿದರು. ಇದಾದ ಬಳಿಕ ನಗರ ಹೊರವಲಯದ ಚಿಕಪೇಟ್‌ನಲ್ಲಿ ಬೀದರ್‌ ಸ್ವಾಭಿಮಾನಿ ಆಘಾಡಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ನಾನು ಯಾರಿಗೂ ಜಗ್ಗುವುದಿಲ್ಲ. ಬಗ್ಗುವುದೂ ಇಲ್ಲ. ಗೆದ್ದು ತೋರಿಸುವೆ. ಮರಾಠ ಸಮಾಜಕ್ಕೆ ನ್ಯಾಯ ಒದಗಿಸುವೆ. ಪ್ರಧಾನಿ ನರೇಂದ್ರ ಮೋದಿಯವರ ಮುಖ ನೋಡಿಕೊಂಡು ಮರಾಠರು ಮತ ಹಾಕುತ್ತಾರೆ ಎಂದು ಬಿಜೆಪಿ ತ‍‍ಪ್ಪಾಗಿ ಭಾವಿಸಿದೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಮರಾಠರಿಗೆ ಟಿಕೆಟ್ ನೀಡಲಿಲ್ಲ. ಲೋಕಸಭಾ ಚುನಾವಣೆಯಲ್ಲೂ ಸಮಾಜಕ್ಕೆ ಅನ್ಯಾಯವಾಗಿದೆ. ಮರಾಠರಿಗೆ ಟಿಕೆಟ್ ನೀಡಿದರೆ ಲಿಂಗಾಯತ ಮತಗಳು ಬರುವುದಿಲ್ಲ. ಆದರೆ, ಲಿಂಗಾಯತರಿಗೆ ನೀಡಿದರೆ ಮರಾಠರು ಕಣ್ಮುಚ್ಚಿ ಮತ ಹಾಕಬೇಕಾ?. ಇಷ್ಟೆಲ್ಲಾ ಅವಮಾನ ರಾಷ್ಟ್ರೀಯ ಪಕ್ಷಗಳು ನಮಗೆ ಮಾಡುತ್ತಿವೆ ಎಂದು ತಿಳಿಸಿದರು.

ರಾಷ್ಟ್ರೀಯ ಪಕ್ಷಗಳು ಸುಳ್ಳು ಆಶ್ವಾಸನೆಗಳನ್ನು ನೀಡಿ ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿವೆ. ನಾನು ಸ್ವಾಭಿಮಾನಿಯಾಗಿ ಈ ಬಾರಿ ಸಂಸತ್ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ನಾನು ಯಾರ ಹತ್ತಿರವೂ ಒಂದು ರೂಪಾಯಿ ಭಿಕ್ಷೆ ಬೇಡಿಲ್ಲ. ನಾನು ಸಚಿವ ಈಶ್ವರ ಖಂಡ್ರೆ ಹತ್ತಿರ ಹಣ ಪಡೆದಿದ್ದೇನೆ ಎಂದು ಹಲವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.

ಬೀದರ್‌ ಸ್ವಾಭಿಮಾನಿ ಆಘಾಡಿಯ ಮುಖಂಡ ಪದ್ಮಾಕರ ಪಾಟೀಲ ಮಾತನಾಡಿ,‘ಭಗವಂತ ಖೂಬಾ ಅವರನ್ನು ಹತ್ತು ವರ್ಷ ಸಂಸದರಾಗಿ, ಸಚಿವರಾಗಿ ಮಾಡಿದರೂ ನಮ್ಮ ಮರಾಠ ಸಮಾಜದ ಸಮಸ್ಯೆಗಳ ಬಗ್ಗೆ, ಮೀಸಲಾತಿ ಕುರಿತು ಲೋಕಸಭೆಯಲ್ಲಿ ಹತ್ತು ಸೆಕೆಂಡ್ ಮಾತನಾಡಿಲ್ಲ. ಹಿರಿಯರಾದ ಎಂ.ಜಿ.ಮುಳೆಯವರನ್ನು ಹಳ್ಳಿಯಿಂದ ದಿಲ್ಲಿವರೆಗೆ ಓಡಾಡಿಸಿ ಹೇಳಿಕೊಳ್ಳುವಂತಹ ಯಾವ ಸ್ಥಾನಮಾನವೂ ನೀಡದೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿದರು.

ಕಳೆದ ಒಂದು ದಶಕದ ಅವಧಿಯಲ್ಲಿ ಮರಾಠ ಸಮಾಜದವರಿಗೆ ಜಿಲ್ಲಾಧ್ಯಕ್ಷ, ಕಾರ್ಯದರ್ಶಿ ಸ್ಥಾನವೂ ನೀಡಿಲ್ಲ. ಶಾಸಕ, ಸಂಸದ, ರಾಜ್ಯಸಭಾ ಸದಸ್ಯರಾಗಿ ಮಾಡಲಿಲ್ಲ. ಜಿಲ್ಲೆಯಲ್ಲಿ ನಾಲ್ಕಾರು ಜನರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದರೂ ಮರಾಠರಿಗೆ ಒಂದು ಸ್ಥಾನವೂ ನೀಡಿಲ್ಲ ಎಂದರು.

ಪ್ರಮುಖರಾದ ಜನಾರ್ದನ ಬಿರಾದಾರ, ಡಾ.ಬಾಲಾಜಿ ಸಾವಳೆಕರ್, ಶರಣು ಕಡಗಂಚಿ, ಕ್ಷತ್ರೀಯ ಮರಾಠ ಪರಿಷತ್ತಿನ ಕಲಬುರಗಿಯ ಅಧ್ಯಕ್ಷ ಜಗದಾಳೆ, ರಾಹು ಸಾಹೇಬ್, ರಘುನಾಥ ಜಾಧವ, ಶಿವಾಜಿ ಪಾಟೀಲ ಮುಂಗನಾಳ, ನರೇಶ ಭೋಸ್ಲೆ, ಅಂಗದರಾವ್‌, ಆನಂದ ಪಾಟೀಲ, ಅಶ್ಫಾಕ್‌ ಪಟೇಲ್, ಸ್ವಾಮಿದಾಸ ಮುದಾಳೆ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ತಮ್ಮ ಬೆಂಬಲಿಗರೊಂದಿಗೆ ಬಂದ ದಿನಕರ್‌ ಮೋರೆಯವರು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಆನಂತರ ಕೇಸರಿ ಶಾಲು, ಟೋಪಿ ಧರಿಸಿ ಬೆಂಬಲಿಗರೊಂದಿಗೆ ಕುದುರೆ ಮೇಲೆ ಕುಳಿತು ರೋಡ್ ಶೋ ನಡೆಸಿದರು. 

ಖೂಬಾ ಹೇಳಿದಂತೆ ಕೇಳಲು ನಾವೇನೂ ಗುಲಾಮರಾ?

‘ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಈಗ ಮರಾಠ ಸಮಾಜದವರು ನೆನಪಾಗಿದ್ದಾರೆ. ಅವರು ಹೇಳಿದಂತೆ ಕೇಳಲು ನಾವೇನೂ ಅವರ ಗುಲಾಮರಾ’ ಹೀಗೆಂದು ಪ್ರಶ್ನಿಸಿದವರು ಮರಾಠ ಸಮಾಜದ ಮುಖಂಡ ಪದ್ಮಾಕರ ಪಾಟೀಲ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು‘ಜೈ ಭವಾನಿ ಜೈ ಶಿವಾಜಿ ಎಂದು ಘೋಷಣೆ ಕೂಗುತ್ತ ಹೀಗೆ ಬರುತ್ತಾರೆ. ಹಾಗೆ ಹೋಗುತ್ತಾರೆ. ನಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ. ಖೂಬಾ ಅವರ ಅಹಂಕಾರದ ಮಾತುಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಚೂರು ಚೂರಾಗಿದೆ. ನಮಗೆ ಈಗ ಯಾವ ಸ್ಥಾನಮಾನಗಳೂ ಬೇಡ. ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ 2ಎ ಮೀಸಲಾತಿ ಬೇಕು. ನಮ್ಮ ಸಮಾಜದ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಲು ಎಲ್ಲರೂ ಸಹಕರಿಸಬೇಕು’ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT