ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ| ಸಂಕಷ್ಟದಲ್ಲಿ ರೈತರ ಕೈಹಿಡಿದ ಸಜ್ಜೆ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಬೆಳೆ
Last Updated 23 ಏಪ್ರಿಲ್ 2020, 3:50 IST
ಅಕ್ಷರ ಗಾತ್ರ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಬೆಳೆಯಾಗಿ ಬಿತ್ತನೆ ಮಾಡಿದ ಸಜ್ಜೆ ಬೆಳೆ ರೈತರ ಪಾಲಿಗೆ ವರವಾಗಿ ಪರಿಣಮಿಸಿದೆ. ನಿರೀಕ್ಷೆಗೂ ಮೀರಿ ಇಳುವರಿ ಬಂದಿದ್ದು ರೈತರಿಗೆ ನೆಮ್ಮದಿ ಮೂಡಿಸಿದೆ.

‘ಮುಂಗಾರು ಹಂಗಾಮಿನ ಬೆಳೆಗೆ ನಾರಾಯಣಪುರ ಎಡದಂಡೆ ಕಾಲುವೆ ನೀರು ಸಮರ್ಪಕವಾಗಿ ದೊರೆಯಿತು. ನಂತರ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಇದ್ದ ಕಾರಣ ಬೇಸಿಗೆ ಹಂಗಾಮಿನ ಬೆಳೆಗೂ ನೀರು ದೊರೆಯುವುದು ಖಾತರಿಯಾಯಿತು. ಮುಂಗಾರು ಬೆಳೆಯನ್ನು ತೆಗೆದುಕೊಂಡ ನಂತರ ರೈತರು ಸಜ್ಜೆ ಬಿತ್ತನೆ ಮಾಡಿದ್ದರು. ಎಕರೆಗೆ ₹ 3 ಸಾವಿರ ಖರ್ಚು ಮಾಡಿದ್ದೇವೆ. ಪ್ರತಿ ಎಕರೆಗೆ 9ರಿಂದ 10 ಕ್ವಿಂಟಲ್ ಇಳುವರಿ ಬಂದಿದೆ. ಧಾರಣಿ ₹ 2 ಸಾವಿರ ಇದೆ’ ಎಂದು ರೈತ ಹನುಮಂತರಾಯ ತಿಳಿಸಿದರು.

‘ಸಜ್ಜೆ ಗ್ರಾಮೀಣ ಪ್ರದೇಶದ ಜನತೆಗೆ ಹೆಚ್ಚು ಉಪಯುಕ್ತವಾಗಿದೆ. ಜಾನುವಾರುಗಳಿಗೆ ಸಜ್ಜೆಯನ್ನು ಕುದಿಸಿ ಇಡುತ್ತಾರೆ. ಕುರಿ, ಮೇಕೆಗಳಿಗೆ ಹಾಕುತ್ತಾರೆ ಹಾಗೂ ಊಟಕ್ಕೂ ಉಪಯೋಗಿಸುತ್ತಾರೆ. ಕೊರೊನಾ ವೈರಸ್ ಸಂಕಷ್ಟ ಕಾಲದಲ್ಲಿ ಸಜ್ಜೆ ಬೆಳೆ ನಮಗೆ ಒಪ್ಪತ್ತಿನ ಊಟಕ್ಕೆ ನೆರವಿನ ಅಭಯ ನೀಡಿದೆ. ಮುಂದಿನ ಕೆಲ ದಿನಗಳವರೆಗೂ ನಮಗೆ ಯಾವುದೇ ತೊಂದರೆ ಇಲ್ಲ. ಧಾರಣಿ ನಮ್ಮ ಕೈಗೆಟುಕುತ್ತಿರುವುದರಿಂದ ಒಂದಿಷ್ಟು ಖರೀದಿಸಿ, ಸಂಗ್ರಹಿಸಿ ಇಟ್ಟಿದ್ದೇವೆ’ ಎಂದು ವನದುರ್ಗ ಗ್ರಾಮದ ರೈತ ಮಾನಯ್ಯ ಹೇಳಿದರು.

‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಬಾರಿ ರೈತರು ತುಸು ನೆಮ್ಮದಿ ಬದುಕು ಕಾಣುವಂತೆ ಆಗಿದೆ. ಮೂರು ವರ್ಷದ ಬಳಿಕ ಮುಂಗಾರು ಮತ್ತು ಹಿಂಗಾರು ಎರಡು ಅವಧಿಗೂ ನೀರು ಲಭಿಸಿದೆ. ಕೊರೊನಾ ಭೀತಿ ನಡುವೆಯೂ ಮುಂಗಾರು ಪೂರ್ವದ ಮಳೆ ಬಂದರೆ ಮತ್ತೆ ಕೃಷಿ ಚಟುವಟಿಕೆಗಳು ಗರಿಗೆದರಲಿವೆ’ ಎಂದು ರೈತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT