ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26 ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಕ್ರಮ

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಘೋಷಣೆ
Last Updated 16 ಆಗಸ್ಟ್ 2020, 7:15 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ, ಮಿನಿ ವಿಧಾನಸೌಧ ಸೇರಿದಂತೆ ಒಟ್ಟು 26 ಕಾಮಗಾರಿಗಳನ್ನು ತಕ್ಷಣ ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ತಿಳಿಸಿದರು.

ಇಲ್ಲಿಯ ಪೊಲೀಸ್‌ ಕವಾಯತ್ ಮೈದಾನದಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಬೀದರ್‌ ಹೊರ ವಲಯದಲ್ಲಿರುವ ರೇಷ್ಮೆ ಇಲಾಖೆಯ ಜಾಗದಲ್ಲೇ ಜಿಲ್ಲಾಡಳಿತಗಳ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಶೀಘ್ರ ಟೆಂಡರ್‌ ಸಹ ಕರೆಯಲಾಗುವುದು’ ಎಂದು ಹೇಳಿದರು.

'ಜಿಲ್ಲೆಯ ಔರಾದ್‌ ತಾಲ್ಲೂಕಿನ 1200 ಎಕರೆ ಪ್ರದೇಶದಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಪಾರ್ಕ್‌ ಸ್ಥಾಪನೆಗೆ ಅಗತ್ಯವಿರುವ ಜಾಗವನ್ನು ತಕ್ಷಣ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಸೋಲಾರ್‌ ಪಾರ್ಕ್‌ ನಿರ್ಮಾಣವಾದಲ್ಲಿ ಜಿಲ್ಲೆಯ ಜನ ಕೆಲಗಳಿಗೆ ಬೇರೆ ಊರಿಗಳಿಗೆ ವಲಸೆ ಹೋಗುವುದು ಕಡಿಮೆಯಾಗಲಿದೆ. ಊರಲ್ಲಿ ಉದ್ಯೋಗ ದೊರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬೀದರ್‌–ಔರಾದ್‌ ನಡುವಿನ ಹೆದ್ದಾರಿ ₹ 336 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಲಿದೆ. ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ, ಬೀದರ್‌ ತಾಲ್ಲೂಕಿನ ಕೊಳಾರ ಬಳಿ ಹೊಸ ಜೈಲು ಕಟ್ಟಡ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ’ ಎಂದು ತಿಳಿಸಿದರು.

‘ಕೋವಿಡ್‌ ಸೋಂಕಿನಿಂದಾಗಿ ಅಭಿವೃದ್ಧಿ ಕಾರ್ಯಗಳಿಗೂ ಸ್ವಲ್ಪ ಮಟ್ಟಿಗೆ ತೊಡಕಾಗಿದೆ. ಜಿಲ್ಲಾಡಳಿತ ಸೋಂಕು ನಿಯಂತ್ರಣಕ್ಕೆ ಹಗಳಿರಳು ಶ್ರಮಿಸುತ್ತಿದೆ. ಬೀದರ್‌ನ ವಾಲಿಶ್ರೀ ಆಸ್ಪತ್ರೆ 82 ಹಾಸಿಗೆಗಳನ್ನು ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟಿದೆ. ಇನ್ನುಳಿದ ಆಸ್ಪತ್ರೆಗಳು ಸಾರ್ವಜನಿಕರ ನೆರವಿಗೆ ಬರಬೇಕು’ ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಪಡೆ, ಪೊಲೀಸ್‌ ಪಡೆ, ಗೃಹರಕ್ಷಕ ದಳದ ಪರೇಡ್ ವೀಕ್ಷಣೆ ಮಾಡಿದರು. ಕೋವಿಡ್‌ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ಎನ್‌ಸಿಸಿ, ಸ್ಕೌಟ್‌ ಮತ್ತು ಗೈಡ್ಸ್‌, ಸೇವಾ ದಳದ ವಿದ್ಯಾರ್ಥಿಗಳಿಗೆ ಪರೇಡ್‌ನಲ್ಲಿ ಅವಕಾಶ ಕಲ್ಪಿಸಿರಲಿಲ್ಲ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಸಂಸದ ಭಗವಂತ ಖೂಬಾ, ಶಾಸಕರಾದ ರಹೀಂಖಾನ್‌,  ಬಂಡೆಪ್ಪ ಖಾಶೆಂಪೂರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ರಾಮುಲು, ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್., ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡಿ, ಡಿಎಫ್‌ಒ ಶಿವಶಂಕರ, ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ ಇದ್ದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT