ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲಾತಿ ಹೋರಾಟಕ್ಕೆ ಮೋದಿ ಬಲ: ಮಾದಿಗರ ಸಮಾವೇಶದಲ್ಲಿ ಎ. ನಾರಾಯಣಸ್ವಾಮಿ

Published 28 ಡಿಸೆಂಬರ್ 2023, 15:59 IST
Last Updated 28 ಡಿಸೆಂಬರ್ 2023, 15:59 IST
ಅಕ್ಷರ ಗಾತ್ರ

ಬೀದರ್‌: ‘ಮಾದಿಗರಿಗೆ ಒಳಮೀಸಲಾತಿ ನೀಡಬೇಕೆಂಬ ದಶಕಗಳ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಬಲ ಸಿಕ್ಕಿದೆ. ಸುಪ್ರೀಂಕೋರ್ಟ್‌ನಲ್ಲಿ ಮಾದಿಗರ ಪರ ತೀರ್ಪು ಬರುವ ಭರವಸೆ ಇದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ‘ಮಾದಿಗ ಮುನ್ನಡೆ–ಮಾದಿಗರ ಆತ್ಮಗೌರವ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದಲ್ಲಿ ಮಾದಿಗ ಸಮಾಜದ ಮುಖಂಡ ಮಂದಾಕೃಷ್ಣ ಅವರ ಸಮ್ಮುಖದಲ್ಲಿ ಮಾದಿಗರ ಮೀಸಲಾತಿ ಹೋರಾಟವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಮಾದಿಗರಿಗೆ ಮೀಸಲಾತಿ ವರ್ಗೀಕರಿಸುವ ವಿಷಯದ ವಿಚಾರಣೆ ಸುಪ್ರೀಂಕೋರ್ಟ್‌ನ ದೊಡ್ಡ ಪೀಠಕ್ಕೆ ಹೋಗಿದೆ. ಮಾದಿಗರಿಗೆ ನ್ಯಾಯ ಒದಗಿಸಿಕೊಡಲು ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಪ್ರಧಾನಿ ಹೇಳಿದ ನಂತರ ಮಾದಿಗರಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಮೋದಿಯವರ ಈ ನಡೆಗೆ ಸಂಘ ಪರಿವಾರದ ದೃಢ ಸಂಕಲ್ಪವೂ ಕಾರಣ ಎಂದು ಹೇಳಿದರು.

ಮೀಸಲಾತಿಗೆ ಅವಿಭಜಿತ ಆಂಧ್ರ ಪ್ರದೇಶದಲ್ಲಿ ಕಳೆದ 35 ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೆ, ಕರ್ನಾಟಕದಲ್ಲಿ 28 ವರ್ಷಗಳಿಂದ ನಡೆಯುತ್ತಿದೆ. ಈ ಅವಧಿಯಲ್ಲಿ ಅನೇಕ ರಾಜಕೀಯ ಪಕ್ಷಗಳು ಆಡಳಿತ ನಡೆಸಿವೆ. ಅನೇಕ ಆಯೋಗಗಳು ಮೀಸಲಾತಿ ಹಂಚಿಕೆ ಬಗ್ಗೆ ವರದಿ ಕೊಟ್ಟಿವೆ. ಯಾವ ಸರ್ಕಾರಗಳು ಕೂಡ ಅದನ್ನು ಪರಿಗಣಿಸಲಿಲ್ಲ. ಆದರೆ, ನರೇಂದ್ರ ಮೋದಿಯವರು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿಸಿದರು.

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಿದರು. ಅದು ಈಗಾಗಲೇ ರಾಜ್ಯದಲ್ಲಿ ಜಾರಿಯಲ್ಲಿದೆ. ಮೆಡಿಕಲ್‌, ಎಂಜಿನಿಯರಿಂಗ್‌, ಐಐಟಿಗಳಲ್ಲಿ ಅದರ ಪ್ರಯೋಜನ ಸಿಗುತ್ತಿದೆ. ಆದರೆ, ಅನೇಕರು ನಂಬುವ ಸ್ಥಿತಿಯಲ್ಲಿ ಇಲ್ಲ. ಅಲ್ಲದೇ ಅದರ ವಿರುದ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಕೂಡ ಮಾಡಲಾಯಿತು ಎಂದರು.

ಒಂದುಸಲ ಒಳಮೀಸಲಾತಿ ಜಾರಿ ಆದ ನಂತರ ನಮ್ಮ ಸಮಾಜದ ಮಕ್ಕಳು ಬೇರೆ ವರ್ಗದ ಮಕ್ಕಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಮ್ಮ ಜವಾಬ್ದಾರಿ ಏನೆಂಬುದನ್ನು ಮನಗಾಣಬೇಕು. ಉನ್ನತ ಶಿಕ್ಷಣ ಪಡೆಯದಿದ್ದರೆ ಭವಿಷ್ಯದ ಪೀಳಿಗೆ ಹಾಳಾಗುತ್ತದೆ. ಒಳಮೀಸಲಾತಿಯ ಬಗ್ಗೆ ಎಲ್ಲರಿಗೂ ತಿಳಿಸಿ ಜಾಗೃತಿ ಮೂಡಿಸಬೇಕಿದೆ. ಬರುವ ಜನವರಿ 17ರಿಂದ ಸುಪ್ರೀಂಕೋರ್ಟ್‌ನಲ್ಲಿ ಒಳಮೀಸಲಾತಿ ವಿಚಾರಣೆ ಆರಂಭವಾಗಲಿದೆ. ಸಂಬಂಧಿಸಿದ ಎಲ್ಲ ದಾಖಲೆಗಳನ್ನು, ವರದಿಗಳನ್ನು ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್‌ ಖಂಡಿತವಾಗಿಯೂ ಒಳಮೀಸಲು ಜಾರಿಯನ್ನು ಒಪ್ಪಿಕೊಳ್ಳುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು.

ಮುಖಂಡರಾದ ರಾಜು ಕರಡ್ಯಾಳ, ರವೀಂದ್ರನಾಥ, ವೆಂಕಟೇಶ ದೊಡ್ಡೇರಿ, ಜಗದೀಶ ಬೆಟ್ಟಳೆ, ಸಂಪತ್‌, ದಯಾನಂದ, ಮಂಜುನಾಥ, ಸತ್ಯೇಂದ್ರ, ರವಿಚಂದ್ರ, ವಿಜಯಕುಮಾರ ಅಡಕಿ, ಸುಧಾಕರ ಸೂರ್ಯವಂಶಿ, ಶ್ಯಾಮ ನಾಟಿಕರ ಹಾಜರಿದ್ದರು.

ಮಾದಿಗರ ಸಮಾವೇಶದಲ್ಲಿ ಸಮಾಜದವರು ಮೊಬೈಲ್‌ ಟಾರ್ಚ್‌ ಹಾಕಿ ಒಳಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿದರು
ಮಾದಿಗರ ಸಮಾವೇಶದಲ್ಲಿ ಸಮಾಜದವರು ಮೊಬೈಲ್‌ ಟಾರ್ಚ್‌ ಹಾಕಿ ಒಳಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿದರು

‘ಒಳಮೀಸಲಾತಿಗೆ ಆರ್‌ಎಸ್‌ಎಸ್‌ ದೃಢ ಸಂಕಲ್ಪ’

‘ಎಲ್ಲ ಶೋಷಿತ ವರ್ಗಗಳಿಗೆ ಸಮಾನತೆ ಸಿಗಬೇಕೆನ್ನುವುದು ಸಂಘ ಪರಿವಾರದ ಆಶಯವಾಗಿದೆ. ಮಾದಿಗರ ಒಳಮೀಸಲಾತಿಗೂ ಆರ್‌ಎಸ್‌ಎಸ್‌ ತನ್ನ ಬದ್ಧತೆ ತೋರಿಸಿ ಆ ಕೆಲಸ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಪ್ಪಿಸಿದೆ’ ಎಂದು ಸಚಿವ ಎ. ನಾರಾಯಣಸ್ವಾಮಿ ಹೇಳಿದರು. ಒಳಮೀಸಲಾತಿ ಕಲ್ಪಿಸಿಕೊಡಲು ಸಂಘ ಪರಿವಾರ ದೃಢ ಸಂಕಲ್ಪ ಮಾಡಿದೆ. ಒಳಮೀಸಲಾತಿ ಕುರಿತು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಏನು ಹೇಳಿದ್ದರೋ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

‘ಪಾದ್ರಿಗಳಿಂದ ಮತಾಂತರ’

‘ದಾಖಲೆಗಳನ್ನು ಪಡೆಯಲು ಸಾಲ ಪಡೆಯಲು ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಮಾದಿಗರು ಎಂದು ಹೇಳುತ್ತಾರೆ. ಆದರೆ ಕ್ರೈಸ್ತ ಧರ್ಮವನ್ನು ಅನುಸರಿಸುತ್ತಾರೆ. ಇದು ಸರಿಯಲ್ಲ. ಮಾದಿಗರನ್ನು ಪಾದ್ರಿಗಳು ಮತಾಂತರ ಮಾಡುತ್ತಿದ್ದಾರೆ’ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಹೇಳಿದರು. ವ್ಯಕ್ತಿಯ ಹೆಸರು ಏನೇ ಇರಬಹುದು. ಅದನ್ನು ನೋಡಿ ಒಂದು ಜಾತಿ ಧರ್ಮಕ್ಕೆ ಸೀಮಿತಗೊಳಿಸುತ್ತಿರುವುದು ಸರಿಯಲ್ಲ. ನಮ್ಮಲ್ಲಿ ಫರ್ನಾಂಡಿಸ್‌ ಬುಷ್‌ ವಿಲ್ಸನ್‌ ಸೇರಿದಂತೆ ಅನೇಕ ರೀತಿಯ ಹೆಸರುಗಳಿವೆ. ಆದರೆ ನಾವ್ಯಾರೂ ಕ್ರೈಸ್ತರಲ್ಲ. ಶುದ್ಧ ಆದಿಜಾಂಬವ ವಂಶಸ್ಥರು. ನಮ್ಮ ಒಳಮೀಸಲಾತಿ ಹೋರಾಟಕ್ಕೆ ಬಿಜೆಪಿ ಆರ್‌ಎಸ್‌ಎಸ್‌ ವೇದಿಕೆ ಕಲ್ಪಿಸಿಕೊಟ್ಟಿದೆ. ಯಾರೂ ಇದುವರೆಗೆ ಮಾದಿಗರಿಗೆ ಏನೂ ಮಾಡಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಸಮಾಜದ ಕಾರ್ಯಕ್ರಮಕ್ಕೆ ಬಂದು ಭರವಸೆ ಕೊಟ್ಟಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT