ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ ಹೋಬಳಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ದಾಖಲು; ಆತಂಕದಲ್ಲಿ ಸೋಯಾ ಬೆಳೆಗಾರರು

Last Updated 16 ಜುಲೈ 2021, 5:20 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಮುಂಗಾರು ಬೆಳೆ ಮೇಲೆ ಪರಿಣಾಮ ಬೀರುತ್ತಿದೆ. ಸೋಯಾ ಬೆಳೆಗಾರರು ಆತಂಕದಲ್ಲಿದ್ದಾರೆ.

ತಾಲ್ಲೂಕಿನ ರೈತರು ಸೋಯಾ ಬೆಳೆ ಮೇಲೆ ಅವಲಂಬಿಸಿದ್ದಾರೆ. ತಾಲ್ಲೂಕಿನ 80 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 50 ಸಾವಿರ ಹೆಕ್ಟೇರ್‌ಗೂ ಅಧಿಕ ಸೋಯಾ ಬಿತ್ತನೆಯಾಗಿದೆ.

ಶೇ 90ರಷ್ಟು ಬಿತ್ತನೆಯಾಗಿ ಮೊಳಕೆ ಬಂದಿವೆ. ಈ ನಡುವೆ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗಿ ಹೊಲದಲ್ಲಿ ನೀರು ನಿಂತಿದೆ. ನೀರು ಜಾಸ್ತಿಯಾಗಿ ಸೋಯಾ ಮೊಳಕೆಕಂದು ಬಣ್ಣಕ್ಕೆ ತಿರುಗುತ್ತಿದ್ದು, ಇನ್ನು ಕೆಲ ದೀನ ಹೀಗೆ ಮಳೆಯಾದರೆ ಗತಿ ಏನು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

‘ನಮ್ಮ ಭಾಗದಲ್ಲಿ ಜಾಸ್ತಿ ಮಳೆಯಾಗಿದೆ. ಕಳೆದ ಒಂದು ವಾರದಿಂದ ಎಲ್ಲ ಹೊಲಗಳಲ್ಲಿ ನೀರು ನಿಂತಿದೆ. ಈಗಾಗಲೇ ಉದ್ದು, ಹೆಸರು ಹಾಳಾಗಿದೆ. ಈಗ ಮಳೆ ಕಡಿಮೆಯಾಗದಿದ್ದಲ್ಲಿ ಸೋಯಾ ಬೆಳೆ ಹಾಳಾಗಲಿದೆ’ ಎಂದು ನಾಗೂರ ರೈತ ಸಂತೋಷ ಮಸ್ಕಲೆ ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ವಾರ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಆದರೆ ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಗಿರೀಶ್ ತಿಳಿಸಿದ್ದಾರೆ.

ಈ ವಾರ ಔರಾದ್ ಹೋಬಳಿಯಲ್ಲಿ 66.6 ಮಿ.ಮೀ (38.9 ಮಿ.ಮೀ ಕಳೆದ ವರ್ಷ ಈ ವಾರ ಬಿದ್ದ ಮಳೆ), ಚಿಂತಾಕಿ-115.4ಮಿ.ಮೀ (38.5 ಮಿ.ಮೀ), ಸಂತಪುರ 92.3 (38) ಮಿ.ಮೀ ಮಳೆ ದಾಖಲಾಗಿದೆ.

ರಸ್ತೆ ಸೇತುವೆ ಹಾಳು: ಭಾರಿ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ರಸ್ತೆಗಳು ಹಾಳಾಗಿವೆ. ಸೇತುವೆಗಳು ಕುಸಿದು ಬಿದ್ದು ಸಂಚಾರ ಸಮಸ್ಯೆಯಾಗಿದೆ. ಸಂತಪುರ-ಕುಶನೂರ ನಡುವಿನ ನಾಗೂರ ಬಳಿಯ ಬದಲಿ ರಸ್ತೆ ಕಿತ್ತು ಹೋಗಿದೆ. ಇಲ್ಲಿ ಹೊಸದಾಗಿ ಸೇತುವೆ ನಿರ್ಮಿಸಬೇಕಾಗಿದೆ.

ಬೆಳಕುಣಿ ಬಳಿಯ ಸೇತುವೆ ಅರ್ಧ ಭಾಗ ಕುಸಿದು ಬಿದ್ದಿದೆ. ನಾಗೂರ (ಎಂ) ಬಳಿಯ ಸೇತುವೆ ಹಾಳಾಗಿದೆ. ರೈತರು ಹೊಲಕ್ಕೆ ಹೋಗುವ ಕಾಲು ದಾರಿ ಮಳೆಗೆ ಕೊಚ್ಚಿ ಹೋಗಿವೆ. ಇದರಿಂದ ರೈತರು ತಮ್ಮ ಹೊಲಕ್ಕೆ ಹೋಗಲು ಹರಸಾಹಸ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT