ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತಕ್ಕಿದೆ ಚಿಕಿತ್ಸಕ ಗುಣ: ಡಾ.ಗೌತಮ ಅರಳಿ

ಜಿಲ್ಲಾ ಕೋವಿಡ್‌ ವಾರ್‌ರೂಮ್ ನೋಡಲ್‌ ಅಧಿಕಾರಿ ಡಾ.ಗೌತಮ ಅರಳಿ ಅಭಿಮತ
Last Updated 23 ಜೂನ್ 2021, 14:34 IST
ಅಕ್ಷರ ಗಾತ್ರ

ಬೀದರ್‌: ‘ಮನೋರೋಗಗಳಿಗೆ ಚಿಕಿತ್ಸೆ ನೀಡುವ ಶಕ್ತಿ ಸಂಗೀತಕ್ಕೆ ಇದೆ. ಹಿತ ಹಾಗೂ ಮಧುರವಾದ ಸಂಗೀತ ಶೋತೃಗಳ ಮನಸ್ಸನ್ನು ಪುಳಕಿತಗೊಳಿಸುತ್ತದೆ’ ಎಂದು ಜಿಲ್ಲಾ ಕೋವಿಡ್‌ ವಾರ್‌ರೂಮ್ ನೋಡಲ್‌ ಅಧಿಕಾರಿ ಡಾ.ಗೌತಮ ಅರಳಿ ಅಭಿಪ್ರಾಯಪಟ್ಟರು.

ಇಲ್ಲಿಯ ಚಿಕ್ಕಪೇಟೆಯ ಸವಿಗಾನ ಸಂಗೀತ ಅಕಾಡೆಮಿಯಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ. ಇದು ತಜ್ಞರು ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ’ ಎಂದು ತಿಳಿಸಿದರು.

‘1982ರ ಜೂನ್ 21 ರಂದು ಮೊದಲ ಬಾರಿಗೆ ಪ್ಯಾರಿಸ್‌ನಲ್ಲಿ ವಿಶ್ವ ಸಂಗೀತ ದಿನ ಆಚರಿಸಲಾಯಿತು. ಅಮೆರಿಕದ ಸಂಗೀತಗಾರ ಜೋಯೆಲ್‌ ಕೊಹೆನ್‌ ಇಡೀ ರಾತ್ರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ವಿಶ್ವ ಸಂಗೀತ ದಿನಕ್ಕೆ ನಾಂದಿ ಹಾಡಿದರು’ ಎಂದು ಹೇಳಿದರು.

‘ಮೊದಲ ಹಂತದಲ್ಲಿ ವಿಶ್ವದ 32 ದೇಶಗಳಲ್ಲಿ ಸಂಗೀತ ದಿನ ಆಚರಿಸಲಾಯಿತು. ಪ್ರಸ್ತುತ 150 ದೇಶಗಳಲ್ಲಿ ಸಂಗೀತ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬಹುತೇಕ ದೇಶಗಳು ಅಲ್ಲಿಯ ಸಂಗೀತ ಸಂಸ್ಕೃತಿ ಬೇರೆ ಬೇರೆ ಶೈಲಿಯ ಸಂಗೀತದ ಮೂಲಕ ಸಂಗೀತ ದಿನ ಆಚರಿಸುತ್ತಿವೆ’ ಎಂದು ತಿಳಿಸಿದರು.

‘ಹವ್ಯಾಸಿ, ವೃತ್ತಿಪರ ಸಂಗೀತಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಡುವುದೇ ಇದರ ಉದ್ದೇಶವಾಗಿದೆ.ಸಂಗೀತದ ಮಹತ್ವ ಹೇಳುವ ಹಾಗೂ ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣ ನೀಡುವ ಮೂಲಕ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕರಾವಳಿ ಕನ್ನಡ ಸಂಘದ ಹಿರಿಯ ಸದಸ್ಯೆ ಭಾಗ್ಯಲಕ್ಷ್ಮಿ ಗುರುಮೂರ್ತಿ ಮಾತನಾಡಿ, ‘ಇಂದು ಸಂಗೀತ ಪ್ರತಿಯೊಬ್ಬರ ಬದುಕಿನ ಅಂಗವಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗಾಯಕಿ ಭಾನುಪ್ರಿಯಾ ಅರಳಿ ಮಾತನಾಡಿ, ‘ಸವಿಗಾನ ಸಂಗೀತ ಅಕಾಡೆಮಿಯು ನಿರಂತರವಾಗಿ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಕೋವಿಡ್‌ ಕಾರಣ ಅದ್ದೂರಿಯಾದ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿಲ್ಲ. ಬರುವ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ ಸಂಗೀತ ಪ್ರತಿಭೆಗಳಿಗೆ ಪ್ರೋತ್ಸಾಹಿಸಲಾಗುವುದು’ ಎಂದರು.

ಅಕಾಡೆಮಿಯ ಪ್ರಮುಖರಾದ ಶೈಲಜಾ ದಿವಾಕರ್, ರಮ್ಯಾ ಪಂಕಜ್, ಕಾವ್ಯ ಸಾತ್ವಿಕ್ ಭಟ್ ಇದ್ದರು.
ಸಂಗೀತ ವಿದ್ಯಾರ್ಥಿಗಳಾದ ಪ್ರಾಪ್ತಿ ಹಾಗೂ ಯುಕ್ತಿ ನೇತೃತ್ವದಲ್ಲಿ ಸವಿಗಾನ ಸಂಗೀತ ಅಕಾಡೆಮಿಯ ಮಕ್ಕಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಗೀತ ಆಲಿಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿ

ಬೀದರ್‌: ‘ನಿತ್ಯ ಹಾಡುವುದರಿಂದ ಹಾಗೂ ಸಂಗೀತ ಆಲಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ’ ಎಂದು ಚಿಂತಕ ನಂದಕುಮಾರ ತಾಂದಳೆ ನುಡಿದರು.

ನಗರದ ವಿವೇಕಾನಂದ ಕಾಲೊನಿಯಲ್ಲಿರುವ ಪಂಚಾಕ್ಷರ ಗವಾಯಿ ಸಂಗೀತ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್.ವಿ.ಕಲ್ಮಠ ಮಾತನಾಡಿ, ‘1982ರಲ್ಲಿ ಫ್ರಾನ್ಸ್‌ನ ಕಲೆ ಮತ್ತು ಸಾಂಸ್ಕೃತಿಕ ಮಂತ್ರಿ ಜಾಕ್ ಲಾಂಜ್ ಅವರು ಸಂಗೀತ ಹಬ್ಬ ಆಚರಿಸಿರಿ ಎಂದು ಸಂಗೀತ ಕಲಾವಿದರಿಗೆ ಕರೆ ಕೊಟ್ಟಿದ್ದರು. ಪ್ರಸ್ತುತ ವಿಶ್ವದ 150 ದೇಶಗಳಲ್ಲಿ ಜೂನ್ 21 ರಂದು ವಿಶ್ವ ಸಂಗೀತ ದಿನ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಸಂಜುಕುಮಾರ ಸಜ್ಜನ ಸಂಗೀತ ಕಲಾವಿದರನ್ನು ಸನ್ಮಾನಿಸಿದರು. ಸಂಗೀತ ಶಿಕ್ಷಕಿ ಶಾಂಭವಿ ಕಲ್ಮಠ ಹಾಗೂ ಎಸ್.ಬಿ.ಕುಚಬಾಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯಕುಮಾರ ಸ್ವಾಗತಿಸಿದರು. ವೀರಭದ್ರಪ್ಪ ಉಪ್ಪಿನ ನಿರೂಪಿಸಿದರು. ಪಂಚಾಕ್ಷರಿ ಕಲ್ಮಠ ವಂದಿಸಿದರು.

ವಿಶ್ವ ಸಂಗೀತ ದಿನಾಚರಣೆ:

ನಗರದ ನಂದಿ ಪೆಟ್ರೋಲ್ ಬಂಕ್‌ ಸಮೀಪದ ಸಪ್ತಸ್ವರ ಕಲಾ ಸಂಸ್ಥೆ ವತಿಯಿಂದ ಅಂತರರಾಷ್ಟ್ರಿಯ ಯೋಗ ದಿನ ಹಾಗೂ ವಿಶ್ವ ಸಂಗೀತ ದಿನ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ನಾಗಮಾರಪಳ್ಳಿ ಮಾತನಾಡಿದರು. ಸಂಗೀತ ಪಾಠಶಾಲೆಯ ಮಕ್ಕಳು ಯೋಗ ಹಾಗೂ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT