ಮಂಗಳವಾರ, ಸೆಪ್ಟೆಂಬರ್ 28, 2021
23 °C

ಐಟಿಐ ಪೂರೈಸಿದವರಿಗೆ ವಿಪುಲ ಅವಕಾಶ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನಗರ, ಪಟ್ಟಣಗಳು ವಿಸ್ತರಣೆಯಾಗುತ್ತಿರುವ ಕಾರಣ ಹೊಸ ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಇದರೊಂದಿಗೆ ಕೈಗಾರಿಕಾ ತರಬೇತಿ ಪೂರೈಸಿದವರಿಗೆ ವಿಪುಲ ಅವಕಾಶಗಳು ಒದಗಿ ಬರುತ್ತಿವೆ.

ಮಹಾರಾಷ್ಟ್ರ ಹಾಗೂ ತೆಲಂಗಾಣದ ಪ್ರಮುಖ ನಗರಗಳಲ್ಲಿರುವ ಕಂಪನಿಗಳು ಬೀದರ್‌ನ ಸರ್ಕಾರಿ ಐಟಿಐನಲ್ಲೇ ಕ್ಯಾಂಪಸ್ ಸಂದರ್ಶನ ನಡೆಸಿ ತರಬೇತಿ ಪೂರೈಸಿದವರಿಗೆ ಉದ್ಯೋಗ ಒದಗಿಸುತ್ತಿರುವುದು ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಅನುಕೂಲ ಕಲ್ಪಿಸಿಕೊಟ್ಟಿದೆ.

ಯುವಕರಿಗೆ ಉದ್ಯೋಗ ಅವಕಾಶಕ್ಕೆ ಪೂರಕ ಕೌಶಲ ಕಲಿಸುವ ದಿಸೆಯಲ್ಲಿ ಜಿಲ್ಲೆಯ ಬೀದರ್, ಬಸವಕಲ್ಯಾಣ, ಹುಮನಾಬಾದ್‌, ಔರಾದ್‌, ಭಾಲ್ಕಿ, ಕಮಲನಗರ ಸೇರಿ ಒಟ್ಟು 72 ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳು ಕಾರ್ಯ ನಿರ್ವಹಿಸುತ್ತಿವೆ.

ಜಿಲ್ಲೆಯ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಒಂದು ವರ್ಷ ಹಾಗೂ ಎರಡು ವರ್ಷದ ಕೋರ್ಸ್‌ಗಳು ಇವೆ.

ಡ್ರೆಸ್ ಮೇಕಿಂಗ್ ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡೆಕೊರೇಟರ್ ಆ್ಯಂಡ್ ಡಿಸೈನಿಂಗ್, ಕೋಪಾ (ಕಂಪ್ಯೂಟರ್), ವೆಲ್ಡರ್ ಒಂದು ವರ್ಷದ ತರಬೇತಿಗಳಾಗಿವೆ. ಎಂಆರ್‌ಎಸಿ, ಫಿಟ್ಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಟರ್ನರ್‌, ಮಾಹಿತಿ ತಂತ್ರಜ್ಞಾನ ಇವು ಎರಡು ವರ್ಷದ ಕೋರ್ಸ್‌ಗಳಾಗಿವೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಮಾಸಿಕ ಗೌರವಧನ ಕೊಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜತೆಗೆ ಟೂಲಕಿಟ್, ಟ್ಯಾಬ್, ಲೇಖನ ಸಾಮಗ್ರಿ, ಸೋಲಾರ್ ಖಂದಿಲು, ಸಮವಸ್ತ್ರ, ಬೂಟ್ ಮತ್ತು ಸಾಕ್ಸ್ ವಿತರಿಸಲಾಗುತ್ತಿದೆ.

ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳು ತಾಂತ್ರಿಕ ಇಲಾಖೆಯ ವೆಬ್‌ಸೈಟ್ www.emptrg.kar.nic.in, www.detkarnataka.org.in ನಲ್ಲಿ ಮಾಹಿತಿ ಪಡೆಯಬಹುದು ಎಂದು ಸರ್ಕಾರಿ ಐಟಿಐನ ಉಪ ನಿರ್ದೇಶಕ ಪಂಡಿತರಾಧ್ಯ ಹಿರೇಮಠ ಹೇಳುತ್ತಾರೆ.

ಹೊಂಡಾ, ಟೊಯೊಟಾ, ಬಜಾಜ್‌, ಆಟೊಟೆಕ್‌, ಮಹಿಂದ್ರಾ ಆ್ಯಂಡ್‌ ಮಹಿಂದ್ರಾ, ಉಷಾ, ಹೈಯರ್, ರೆಪ್ಟಾನ್‌, ಆಟೊ ಡ್ರೈವ್, ಮುಂಗಿ ಬ್ರದರ್ಸ್‌, ಎಪಿಕ್‌ ಕಂಪನಿಗಳು ಬೀದರ್‌ನ ಐಟಿಐನಲ್ಲಿ ಪ್ರತಿ ವರ್ಷ ಕ್ಯಾಂಪಸ್‌ ಸಂದರ್ಶನ ನಡೆಸುತ್ತಿವೆ.

‘ಐದು ವರ್ಷಗಳ ಅವಧಿಯಲ್ಲಿ 4,700 ವಿದ್ಯಾರ್ಥಿಗಳು ನೌಕರಿ ಪಡೆದುಕೊಂಡಿದ್ದಾರೆ. ಈಗಾಗಲೇ ನೇಮಕಾತಿ ಹೊಂದಿರುವ ಅಭ್ಯರ್ಥಿ ಗಳು ಕನಿಷ್ಠ ₹ 15 ಸಾವಿರದಿಂದ ₹ 30 ಸಾವಿರ ವರೆಗೆ ವೇತನ ಪಡೆಯುತ್ತಿದ್ದಾರೆ’ ಎಂದು ಸರ್ಕಾರಿ ಐಟಿಐನ ಪ್ಲೇಸ್‌ಮೆಂಟ್‌ ಆಫೀಸರ್‌ ಶಿವಶಂಕರ ಟೋಕರಿ ಹೇಳುತ್ತಾರೆ.

‘ತಾಂತ್ರಿಕ ಶಿಕ್ಷಣ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಮೂಲಸೌಕರ್ಯ ಇರುವ ಕಾಲೇಜುಗಳ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪ್ರವೇಶ ಪಡೆಯಬೇಕು. ಇದರಿಂದ ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ’ ಎಂದು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು