ಬೆಳಗಾವಿಗೆ ಉಪ ರಾಜಧಾನಿ ಪಟ್ಟ ಸಲ್ಲ

7
ಹೈದರಾಬಾದ್‌ ಕರ್ನಾಟಕ ಜನಪರ ಸಂಘರ್ಷ ಸಮಿತಿ ಆಕ್ರೋಶ

ಬೆಳಗಾವಿಗೆ ಉಪ ರಾಜಧಾನಿ ಪಟ್ಟ ಸಲ್ಲ

Published:
Updated:
Deccan Herald

ಬೀದರ್‌: ಸಂವಿಧಾನದ ತಿದ್ದುಪಡಿಯ 371(ಜೆ) ವಿಶೇಷ ಸ್ಥಾನಮಾನದ ಲಾಭ ಪಡೆಯುವ ದುರುದ್ದೇಶದಿಂದ ಮುಂಬೈ ಕರ್ನಾಟಕದ ಮುಖಂಡರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿದ್ದಾರೆ ಎಂದು ಹೈದರಾಬಾದ್‌ ಕರ್ನಾಟಕ ಜನಪರ ಸಂಘರ್ಷ ಸಮಿತಿ ಆರೋಪಿಸಿದೆ.

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳಗಾವಿಗೆ ಉಪ ರಾಜಧಾನಿ ಪಟ್ಟ ನೀಡಲು ಮುಂದಾಗಿರುವುದು ಸರಿಯಲ್ಲ. ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಹಾಗೂ ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಕಲಬುರ್ಗಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಬೇಕು’ ಎಂದು ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಚಿವ ಸಂಪುಟದಲ್ಲಿ ದಕ್ಷಿಣ ಕರ್ನಾಟಕದವರಿಗೆ ಮಣೆ ಹಾಕಲಾಗಿದೆ. ಹೈದರಾಬಾದ್‌ ಕರ್ನಾಟಕದ ಮುಖಂಡರಿಗೆ ಸಚಿವ ಸ್ಥಾನ ದೊರೆತ ನಂತರ ಮೌನವಾಗಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಖಂಡ ಕರ್ನಾಟಕ ಇರಬೇಕು ಎನ್ನುವುದು ನಮ್ಮ ಆಶಯವಾಗಿದೆ. ಪ್ರತ್ಯೇಕ ಉತ್ತರ ಕರ್ನಾಟಕದ ಬೇಡಿಕೆಗೆ ಮುಖ್ಯಮಂತ್ರಿ ಅವರು ತುಪ್ಪ ಸುರಿಯುವ ಕೆಲಸ ಮಾಡಿದರೆ ಹೈದರಾಬಾದ್‌ ಕರ್ನಾಟಕದ ಜನ ಬೀದಿಗೆ ಬಂದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಉತ್ತರ ಕರ್ನಾಟಕ ಅಂದರೆ ಕೇವಲ ಹುಬ್ಬಳ್ಳಿ–ಧಾರವಾಡ ಅಥವಾ ಬೆಳಗಾವಿ ಅಲ್ಲ. ಮುಖಂಡರು ಹುಬ್ಬಳ್ಳಿಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ಹೈದರಾಬಾದ್‌ ಕರ್ನಾಟಕ ಬಹಳಷ್ಟು ಹಿಂದುಳಿದಿದೆ’ ಎಂದು ತಿಳಿಸಿದರು.

‘371(ಜೆ) ಸಮರ್ಪಕವಾಗಿ ಅನುಷ್ಠಾನಗೊಳಿಸದ ಕಾರಣ ಅಭಿವೃದ್ಧಿ ಕುಂಠಿತಗೊಂಡಿದೆ. ಬೆಳಗಾವಿಯಿಂದ ಹಾಸನ ಜಿಲ್ಲೆಗೆ ಕಚೇರಿಗಳ ಸ್ಥಳಾಂತರ ಮಾಡುತ್ತಿರುವುದು ಖಂಡನೀಯ. ರಾಜ್ಯ ಮಟ್ಟದ ಕಚೇರಿಗಳನ್ನು ಹೈದರಾಬಾದ್‌ ಕರ್ನಾಟಕಕ್ಕೆ ಸ್ಥಳಾಂತರ ಮಾಡಬೇಕು. ಖಾಲಿ ಹುದ್ದೆಗಳ ಭರ್ತಿ ಮಾಡಬೇಕು. ಈ ಭಾಗದ ಅಭಿವೃದ್ಧಿಗೆ ಹಣ ಮೀಸಲಿಟ್ಟು ಶ್ವೇತ ಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

‘ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಉಪ ಸಮಿತಿಗೆ ಈ ಭಾಗದ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ನಂಜುಂಡಪ್ಪ ವರದಿ ಶಿಫಾರಸಿನಂತೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕ್ರಿಯಾ ಯೋಜನೆಗಳನ್ನು ರೂಪಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಉದ್ದಿಮೆಗಳನ್ನು ಆರಂಭಿಸಬೇಕು. ಉರ್ದು ಅಕಾಡೆಮಿಗೆ ನೇಮಕ ಮಾಡುವಾಗ ಹೈದರಾಬಾದ್‌ ಕರ್ನಾಟಕದವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು’ ಎಂದು ಮನವಿ ಮಾಡಿದರು.

ಸಮಿತಿಯ ಕಾರ್ಯಾಧ್ಯಕ್ಷ ಮಾಜಿ ಶಾಸಕ ಸೈಯದ್ ಜುಲ್ಫೇಕಾರ್ ಹಾಸ್ಮಿ, ದಲಿತ ಸಮಾಜ ಸೇವಾ ಸಂಘರ್ಷ ಸಮಿತಿ ಉಪಾಧ್ಯಕ್ಷ ಅಲಿ ಅಹ್ಮದ್‌ ಖಾನ್, ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ ಹೈ.ಕ. ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಶಿವಕುಮಾರ ಬೆಲ್ದಾಳ, ಉಪಾಧ್ಯಕ್ಷ ಡಾ.ಮಾಜಿದ್ ದಾಗಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !