ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರನ್ನು ಗೌರವಿಸುವುದು ನಮ್ಮ ಪರಂಪರೆ: ಸಿದ್ರಾಮ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಹೇಳಿಕೆ
Last Updated 1 ಅಕ್ಟೋಬರ್ 2020, 15:43 IST
ಅಕ್ಷರ ಗಾತ್ರ

ಬೀದರ್‌: ‘ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮವಾಗಿ ವೃದ್ಧಾಶ್ರಮಗಳು ತಲೆ ಎತ್ತಿವೆ. ಕ್ಷುಲ್ಲಕ ಕಾರಣಗಳಿಗಾಗಿ ಹಿರಿಯ ನಾಗರಿಕರಿಗೆ ಪ್ರೀತಿ- ಸಹಾನುಭೂತಿ ಸಿಗುತ್ತಿಲ್ಲ. ಹಿರಿಯರೊಂದಿಗೆ ಪ್ರೀತಿ, ವಿಶ್ವಾಸ ಬೆಳೆಸುವ ಕಾರ್ಯವನ್ನು ಕಿರಿಯರು ಮಾಡಬೇಕಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸಿದ್ರಾಮ ಹೇಳಿದರು.

ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅನಾಥ ವೃದ್ಧರಿಗೆ ವೃದ್ಧಾಶ್ರಮದಿಂದ ಅನುಕೂಲವಾಗಿರಬಹುದು. ಆದರೆ, ಬಂಧು ಬಳಗ ಇದ್ದರೂ ವೃದ್ಧರು ವೃದ್ಧಾಶ್ರಮ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಹೇಳಿದರು.

‘ನಾವೆಲ್ಲ ಭವ್ಯ ಪರಂಪರೆ ಇರುವ ದೇಶದಲ್ಲಿ ಇದ್ದೇವೆ. ಹಿರಿಯರಿಗೆ ಗೌರವ ಕೊಡಬೇಕು ಎನ್ನುವುದನ್ನು ನಮ್ಮ ಪರಂಪರೆಯಲ್ಲಿ ಒಡಮೂಡಿದೆ’ ಎಂದು ತಿಳಿಸಿದರು.

‘ಹಿರಿಯ ನಾಗರಿಕರಿಗೆ ಸಹಾನುಭೂತಿ ಹಾಗೂ ಪ್ರೀತಿಯಿಂದ ಕಾಣುವ ಅಗತ್ಯವಿದೆ. ಆದರೆ, ಇಂದು ಅನೇಕ ಕಾರಣಗಳಿಂದ ತಂದೆ, ತಾಯಿ, ಅಜ್ಜ, ಅಜ್ಜಿ ಹಾಗೂ ಇತರ ಹಿರಿಯರ ಕಡೆಗಣನೆ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪೋಷಕರ ಅಥವಾ ಹಿರಿಯ ನಾಗರಿಕರ ಮಗ, ಮಗಳು, ದತ್ತುಪುತ್ರ ದತ್ತು ಪುತ್ರಿ, ಅಳಿಯ, ಸೋದರ ಸೊಸೆ, ಮೊಮ್ಮಗ, ಮೊಮ್ಮಗಳನ್ನು ಸಹ ಹಿರಿಯ ನಾಗರಿಕರ ಮಕ್ಕಳೆಂದೇ ಭಾವಿಸಲಾಗುತ್ತದೆ. ಅಪ್ಪ, ಅಮ್ಮ ಅಷ್ಟೇ ಅಲ್ಲ; ಅತ್ತೆ-ಮಾವ ಅವರನ್ನೂ ತಂದೆ-ತಾಯಿಯಂತೆಯೇ ನೋಡಿಕೊಳ್ಳಬೇಕು’ ಎಂದು ಹೇಳಿದರು.

‘ಹಿರಿಯರನ್ನು ಕಡೆಗಣಿಸುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಿರಿಯ ನಾಗರಿಕರ ರಕ್ಷಣೆಗಾಗಿಯೇ ಕಾನೂನುಗಳನ್ನು ರೂಪಿಸಿದೆ. ಹಿರಿಯರನ್ನು ಕಡೆಗಣಿಸುವುದು ಅಥವಾ ನಿರ್ಲಕ್ಷಿಸುವುದು ಸಹ ಅಪರಾಧವಾಗಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಮಾತನಾಡಿ, ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದರ ಪರಿಣಾಮವಾಗಿ ಇಂದು ವೃದ್ಧಾಶ್ರಮಗಳು ಬೆಳೆಯುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಹಿರಿಯರು ಕುಟುಂಬದ ಹಿತಚಿಂತಕರಾಗಿರುತ್ತಾರೆ. ಅವರ ಅನುಭವಗಳು ಯುವ ಪೀಳಿಗೆಗೆ ಪ್ರೇರಣೆಯಾಗಿರುತ್ತವೆ. ಅವರನ್ನು ದೂರ ಮಾಡುವುದರಿಂದ ಹಿರಿಯರು ಹಾಗೂ ಕಿರಿಯ ನಡುವಿನ ಕಂದಕ ಹೆಚ್ಚಾಗುತ್ತದೆ. ಈ ಅಂತರವನ್ನು ಕಡಿಮೆ ಮಾಡುವ ದಿಸೆಯಲ್ಲಿ ಹಿರಿಯನ್ನು ಗೌರವದಿಂದ ಕಾಣಬೇಕಿದೆ’ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ಜ್ಯೋತಿಬಾ ಫುಲೆ ವೃದ್ಧಾಶ್ರಮದ ನಿರ್ದೇಶಕ ಅನಿಲ ಬೆಲ್ದಾರ್, ಅಕ್ಕ ಮಹಾದೇವಿ ವೃದ್ಧಾಶ್ರಮದ ವಿರೂಪಾಕ್ಷ ಗಾದಗಿ, ಮದರ್‌ ತೆರೆಸಾ ವೃದ್ಧಾಶ್ರಮದ ಅಧ್ಯಕ್ಷ ಜೋಸೆಫ್, ಭಾಲ್ಕಿಯ ಜೈಸಂತೋಷಿ ಮಾತಾ ವೃದ್ಧಾಶ್ರಮದ ಕಾರ್ಯದರ್ಶಿ ಜ್ಞಾನೇಶ್ವರ ಪಾಟೀಲ,
ಹರಿ ಓಂ ಹಿರಿಯರ ಯೋಗ ಕ್ಷೇಮ ಕೇಂದ್ರದ ಸಂತೋಷ ಹಾಗೂ ಔರಾದ್‌ನ ರಮಾಬಾಯಿ ವೃದ್ಧಾಶ್ರಮದ ಪಾರ್ವತಮ್ಮ ವಾಘಮಾರೆ ಇದ್ದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಜಗದೀಶ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಹಕ್ಕು ಸಂರಕ್ಷಣಾಧಿಕಾರಿ ಗೌರಿಶಂಕರ ಪ್ರತಾಪುರೆ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಆಡಳಿತ, ಪೊಲೀಸ್‌ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಭಾರತೀಯ ಪರಂಪರೆ ಘನತೆ ಹೆಚ್ಚಿಸಿ

ಬೀದರ್‌: ‘ತಂದೆ, ತಾಯಿಯನ್ನು ಗೌರವಿಸದ ವ್ಯಕ್ತಿ ಸಮಾಜದಲ್ಲಿ ಎಂದಿಗೂ ದೊಡ್ಡ ವ್ಯಕ್ತಿಯಾಗಲಾರ. ಹಿರಿಯರಿಗೆ ಅಗೌರವ ತೋರುವುದು ಪ್ರಜ್ಞಾವಂತ ನಾಗರಿಕನ ಲಕ್ಷಣವೂ ಅಲ್ಲ. ಪ್ರತಿಯೊಬ್ಬರು ಹಿರಿಯರನ್ನು ಗೌರವದಿಂದ ಕಾಣುವ ಮೂಲಕ ಭಾರತೀಯ ಪರಂಪರೆಯ ಘನತೆ ಹೆಚ್ಚಿಸಬೇಕು’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ನುಡಿದರು.

‘ಹಿರಿಯರನ್ನು ಗೌರವಿಸುವುದು ಭಾರತೀಯ ಸಂಸ್ಕಾರದ ಅವಿಭಾಜ್ಯ ಭಾಗವಾಗಿದೆ. ಬದುಕಿನ ಬಹುಭಾಗವನ್ನು ಸವೆಸಿ ಅಪರಿಮಿತವಾದ ಅನುಭವಗಳೊಂದಿಗೆ ಹಿರಿತನವನ್ನು ಅಪ್ಪಿಕೊಂಡ ಹಿರಿಯರಿಗೆ ಕಿರಿಯರಾದ ಎಲ್ಲರೂ ಗೌರವ ನೀಡಬೇಕು’ ಎಂದು ಹೇಳಿದರು.
‘ಇಳಿ ವಯಸ್ಸಿನ ವ್ಯಕ್ತಿಗಳಿಗೆ ಬೇಕಾಗಿರುವುದು ತನ್ನವರ ಬೆಂಬಲ ಮಾತ್ರ. ದೇಹ ದುರ್ಬಲವಾದಾಗ ಆಧಾರಸ್ತಂಭವಾಗಿ ನಿಲ್ಲುವ ಬಂಧುಗಳನ್ನು ಹಿರಿಜೀವಗಳು ಅಪೇಕ್ಷಿಸುತ್ತವೆ. ಹೀಗಾಗಿ ಕಿರಿಯರು ಹಿರಿಯರ ಭಾವನೆಗಳಿಗೆ ಸ್ಪಂದಿಸಬೇಕು’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT