ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರ: ಅಂಗವಿಕಲ ಕಲಾವಿದನ ಕೈಹಿಡಿದ ಚಿತ್ರಕಲೆ

ಶರಣಕುಮಾರ ಸುಲಾಖೆ ಕುಂಚದಲ್ಲಿ ಅರಳುವ ವರ್ಣರಂಜಿತ ಚಿತ್ರಗಳು
Last Updated 14 ಮಾರ್ಚ್ 2021, 4:05 IST
ಅಕ್ಷರ ಗಾತ್ರ

ಕಮಲನಗರ: ಪಟ್ಟಣದ ಯುವ ಕಲಾವಿದ ಶರಣಕುಮಾರ ಚಂದ್ರಕಾಂತ ಸುಲಾಖೆ ಅವರ ಕುಂಚದಿಂದ ಅರಳಿದ ಅನೇಕ ವರ್ಣರಂಜಿತ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಬಾಲ್ಯದಿಂದಲೇ ಚಿತ್ರಕಲೆ ಬಿಡಿಸುವುದರಲ್ಲಿ ಆಸಕ್ತಿ ಬೆಳೆಸಿಕೊಂಡ ಶರಣಕುಮಾರ ಹತ್ತನೇ ತರಗತಿ ನಂತರ ಭಾಲ್ಕಿಯ ಡಾ. ಚನ್ನಬಸವ ಪಟ್ಟದ್ದೇವರು ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಐದು ವರ್ಷದ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿದರು. ಕೆಲಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ.

ಕಳೆದ 18 ವರ್ಷಗಳಿಂದ ಕಮಲನಗರದಲ್ಲಿಯೇ ಮದುವೆ ಸಮಾರಂಭ, ಶಾಲೆ ಗೋಡೆಗಳ ಚಿತ್ರ ಬಿಡಿಸುವುದು, ಥರ್ಮಾಕೋಲ್ ಮೇಲೆ ಬಣ್ಣ ರಹಿತ ಚಿತ್ರ ಬಿಡಿಸುವುದು. ಬ್ಯಾನರ್ ಬರೆಯುವುದು, ಥರ್ಮಾಕೋಲ್ ಮೇಲೆ ಬಣ್ಣರಂಜಿತ ಚಿತ್ರ ಬಿಡಿಸುವುದು ಮತ್ತು ಮದುಮಕ್ಕಳ ಹೆಸರು ಬಿಡಿಸುವ ಮೂಲಕ ಚಿತ್ರಕಲೆಯಲ್ಲೇ ಜೀವನ ಕಂಡುಕೊಂಡಿದ್ದಾರೆ.

ಶರಣಕುಮಾರ ಬಾಲ್ಯದಿಂದಲೇ ಅಂಗವಿಕಲರಾದರೂ, ಚಿತ್ರಕಲೆ ಬಿಡಿಸುವುದರಲ್ಲಿ ಎತ್ತಿದ ಕೈ. ಈ ಭಾಗದ ಕನ್ನಡದ ಕಣ್ಮಣಿ, ಡಾ. ಚನ್ನಬಸವ ಪಟ್ಟದ್ದೇವರು ನಡೆದಾಡುವ ದೇವರೆಂದೇ ಖ್ಯಾತಿ ಪಡೆದ, ಜೀವನ ಸಾಧನೆ, ಮಾಡರ್ನ್‌ ಆರ್ಟ್, ಮದ್ಯಪಾನ ನಿಷೇಧ, ಶಿವ, ಸಾಯಿಬಾಬಾ, ಬಸವಣ್ಣ ವಚನ ಸಾರುವ ಚಿತ್ರ. ಪ್ರೇಮಿಗಳ ವಿರಹ ವೇದನೆಯ ಚಿತ್ರ ಸೇರಿದಂತೆ ಗ್ರಾಮೀಣ ಬದುಕಿನ ನೋಟ ಕುರಿತ ಚಿತ್ರಗಳನ್ನು ಬಿಡಿಸುವ ಮೂಲಕ ತಾಲ್ಲೂಕಿನಲ್ಲಿ ಪ್ರತಿಭಾವಂತ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

ಶರಣಕುಮಾರ ಸುಲಾಖೆ ಅವರು 2006ರಲ್ಲಿ ‘ಡಾ. ಚನ್ನಬಸವ ಪಟ್ಟದ್ದೇವರು ಪ್ರಶಸ್ತಿ’ ಪಡೆದಿದ್ದಾರೆ. ರಾಜ್ಯ ಮಟ್ಟದ ಕಲಾಪ್ರದರ್ಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಲಾಪ್ರತಿಭೋತ್ಸವ ಸೇರಿದಂತೆ ಬಾಗಲಕೋಟ ಹಾಗೂ ಬೆಂಗಳೂರಿನಲ್ಲಿ ನಡೆದ ಕಲಾ ಪ್ರತಿಭೋತ್ಸವದಲ್ಲಿ ಭಾಗವಹಿಸಿ ಉತ್ತಮ ಕಲಾವಿದರೆಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಡೆದ ಅಂಗವಿಕಲರ ದಿನಾಚರಣೆಯಲ್ಲಿ ಇವರ ಚಿತ್ರಕಲೆ ಗಮನ ಸೆಳೆದಿದ್ದು ಇವರ ಕಲೆಯನ್ನು ಕಂಡು ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಚಿಕ್ಕಂದಿನಿಂದಲೂ ಪಾಠದ ಅಭ್ಯಾಸಕ್ಕಿಂತಲೂ ಚಿತ್ರಕಲೆ ಬಿಡಿಸುವುದು ಆತನಿಗೆ ತುಂಬಾ ಆಸಕ್ತಿ. ಈ ನಿಟ್ಟಿನಲ್ಲಿ ಚಿತ್ರಕಲೆಯಲ್ಲಿ ಅಭ್ಯಾಸ ಮಾಡಿ ಒಳ್ಳೆಯ ಚಿತ್ರಗಳನ್ನು ಬಿಡಿಸುತ್ತಿದ್ದಾನೆ’ ಎಂದು ಶರಣಕುಮಾರ ಸುಲಾಖೆ ಅವರ ಬಾಲ್ಯದ ಸ್ನೇಹಿತ ಸಂತೋಷ ಭವರಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT