ಪಿಡಿಒ, ಪಂಚಾಯಿತಿ ನೌಕರರ ಧರಣಿ

ಬುಧವಾರ, ಮಾರ್ಚ್ 20, 2019
31 °C
ಹಲ್ಲೆ, ನಿಂದನೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಪಿಡಿಒ, ಪಂಚಾಯಿತಿ ನೌಕರರ ಧರಣಿ

Published:
Updated:
Prajavani

ಬೀದರ್: ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ಶೋಷಣೆ ತಡೆಯಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ ಪಿಡಿಒ ಹಾಗೂ ನೌಕರರ ಧರಣಿ ನಡೆಸಿದರು.

ಗ್ರಾಮ ಪಂಚಾಯಿತಿ ಸಿಬ್ಬಂದಿ ಅನಗತ್ಯವಾಗಿ ಹಲ್ಲೆ, ನಿಂದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಸಿಬ್ಬಂದಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಪ್ರತಿದಿನ ಭೇಟಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಎಸ್‌ಬಿಎಂ ಯೋಜನೆಯಡಿ ಪ್ರಗತಿ ಸಾಧಿಸಿಲ್ಲ ಎನ್ನುವ ಕಾರಣ ನೀಡಿ ಜಿಲ್ಲೆಯ 38 ಪಿ.ಡಿ.ಒಗಳ ವಾರ್ಷಿಕ ವೇತನ ಬಡ್ತಿ ಆದೇಶ ಕಡಿತಗೊಳಿಸಿರುವುದನ್ನು ತಕ್ಷಣ ಹಿಂಪಡೆಯಬೇಕು. ಎಸ್‌ಬಿಎಂ ಯೋಜನೆಯ ಐಎಂಐಎಸ್‌ನಲ್ಲಿನ ಅನರ್ಹ ಫಲಾನುಭವಿಗಳನ್ನು ರದ್ದು ಗೊಳಿಸಿ, ಅರ್ಹ ಫಲಾನುಭವಿಗಳಿಗೆ ಶೌಚಾಲಯಗಳ ನಿರ್ಮಾಣಕ್ಕೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಶೌಚಾಲಯ ನಿರ್ಮಾಣ ಮಾಡಿಕೊಳ್ಳದ ಫಲಾನುಭವಿಗಳ ಪಡಿತರ ಚೀಟಿ, ವಿದ್ಯುತ್ ಸಂಪರ್ಕ ಹಾಗೂ ಇನ್ನಿತರ ಸೌಲಭ್ಯಗಳ ಕಡಿಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು. ಗ್ರಾಮ ಪಂಚಾಯಿತಿ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅರ್ಹ ಸಿಬ್ಬಂದಿಗೆ ನಿಯಮಿತವಾಗಿ ವೇತನ ಪಾವತಿಸಬೇಕು ಎಂದರು.

ಅಧಿಕಾರಿಗಳು ಬಾಹ್ಯ ಒತ್ತಡಕ್ಕೆ ಒಳಗಾಗಿ ಸಿಬ್ಬಂದಿಗೆ ಕಿರುಕುಳ ನೀಡ ಬಾರದು. ವರ್ಗಾವಣೆ ಮಾಡುವಂತಹ ಕಾರ್ಯದಲ್ಲಿ ತೊಡಗಬಾರದು. ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜೆಸ್ಕಾಂ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಆಗಾಗ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಸಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಿಗಬೇಕಾದ ಮುಂಬಡ್ತಿಯನ್ನು ಕಾಲ ಮಿತಿಯಲ್ಲಿ ನೀಡಬೇಕು. ಈಗಾಗಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಮರು ನಿಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.

ಅನ್ಯ ಇಲಾಖೆಯ ಕಾಮಗಾರಿಗಳಾದ ಬೆಳೆ ಕಟಾವು, ಆಧಾರ ನೋಂದಣಿ, ನಾಡ ಕಚೇರಿ ಸೇವೆಗಳು ಇತ್ಯಾದಿಗಳನ್ನು ನಿರ್ವಹಿಸಲು ಪ್ರತ್ಯೇಕ ಸಿಬ್ಬಂದಿಯನ್ನು ಒದಗಿಸಬೇಕು. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಮೆರಿಟ್ ಆಧಾರದ ಮೇಲೆ ಪಿ.ಡಿ.ಒ. ರವರಿಗೆ ಪದೋನ್ನತಿ ನೀಡಬೇಕು. ಬೇರೆ ಇಲಾಖೆಯ ಅಧಿಕಾರಿಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು

ಸಂಗೊಳಗಿ ಗ್ರಾಮ ಪಂಚಾಯಿತಿ ಡಾಡಾ ಎಂಟ್ರಿ ಆಪರೇಟರ್ ಸಂತೋಷ ಇವರನ್ನು ಮರು ನಿಯುಕ್ತಿಗೊಳಿಸಬೇಕು. ಎಂ.ಜಿ.ಎನ್.ಆರ್.ಇ.ಜಿ.ಎ. ಬೇಡಿಕೆ ಆಧಾರಿತವಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿಗಳಿಗೆ ಗುರಿ ನಿಗದಿಪಡಿಸಿ ಶಿಕ್ಷೆ ವಿಧಿಸುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !