ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘63 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು’: ಶಾಸಕ ಈಶ್ವರ ಖಂಡ್ರೆ

ಖಟಕಚಿಂಚೋಳಿ: ₹ 80 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಖಂಡ್ರೆ ಚಾಲನೆ
Last Updated 25 ಜನವರಿ 2023, 6:23 IST
ಅಕ್ಷರ ಗಾತ್ರ

ಭಾಲ್ಕಿ: ಕಾರಂಜಾ ಜಲಾಶಯದಿಂದ ಭಾಲ್ಕಿ ಮಾರ್ಗ ಮಧ್ಯದ 23 ಹಳ್ಳಿಗಳು ಸೇರಿ ಒಟ್ಟು 63 ಹಳ್ಳಿಗಳಿಗೆ ನಿರಂತರ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ₹ 124 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ತಾಲ್ಲೂಕಿನ ಖಟಕಚಿಂಚೋಳಿ ಗ್ರಾಮದಲ್ಲಿ ಮಂಗಳವಾರ ₹ 80 ಕೋಟಿ ವೆಚ್ಚದಲ್ಲಿ 63 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡುವುದರ ಜತೆಗೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

₹ 124 ಕೋಟಿ ಅನುದಾನ ಪೈಕಿ ಈಗಾಗಲೇ ₹ 80 ಕೋಟಿ ಅನುದಾನ ಟೆಂಡರ್ ಆಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬರುವ ಕೆಲ ದಿನಗಳಲ್ಲಿ ಈ 63 ಹಳ್ಳಿಗಳ ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಸರಬರಾಜು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾಲ್ಕಿ ಪಟ್ಟಣಕ್ಕೆ ಈಗಾಗಲೇ ₹ 140 ಕೋಟಿ ಅನುದಾನ ಒದಗಿಸಿ ಕಾರಂಜಾ ಜಲಾಶಯದಿಂದ ಪೈಪ್‍ಲೈನ್ ಮೂಲಕ ಮನೆ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಕಳೆದ ಮೂರು ಅವಧಿಯಿಂದ ಕ್ಷೇತ್ರದ ಜನಪ್ರತಿನಿಧಿಯಾಗಿ ಜನರ ಸೇವೆಯಲ್ಲಿದ್ದೇನೆ. ವಿವಿಧ ಮೂಲಗಳಿಂದ ಸಾವಿರಾರೂ ಕೋಟಿ ರೂಪಾಯಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿದ್ದೇನೆ. ಆದರೆ ವಿರೋಧಿಗಳು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೂಡಬಾರದು ಎಂದು ಹೇಳಿದರು.

ಅಚ್ಛೆದಿನಗಳು ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿದ್ದಾರೆ. ಹಾಗಾಗಿ ಜನ ಹಳೆಯ ದಿನಗಳನ್ನು ನೆನಪು ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ ಎಂದು ತಿಳಿಸಿದರು.

ಬೀದರ್ ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಮಾತನಾಡಿದರು.

ಅದ್ದೂರಿ ಮೆರವಣಿಗೆ: ಖಟಕಚಿಂಚೋಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಕಟ್ಟಡ, ರಸ್ತೆ ಸೇರಿ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ರೂ ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಗ್ರಾಮದ ಬೀದಿ, ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಾವಿರಾರು ಕಾರ್ಯಕರ್ತರ ಮಧ್ಯ ತೆರೆದ ಜೀಪ್‍ನಲ್ಲಿ ಶಾಸಕ ಈಶ್ವರ ಖಂಡ್ರೆ ಅವರ ಮೆರವಣಿಗೆ ನಡೆಯಿತು.

ಅಲ್ಲಲ್ಲಿ ಪುಷ್ಪವೃಷ್ಟಿ ಮಾಡಿ, ಕ್ರೇನ್ ಮೂಲಕ ಬೃಹತ್ ಗಾತ್ರದ ಪುದಿನಾ ಹಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮದಿಂದ ಶಾಸಕರನ್ನು ಬರ ಮಾಡಿಕೊಂಡರು.

ಇದಕ್ಕೂ ಮುನ್ನ ಕಪಲಾಪುರ ಕ್ರಾಸ್‍ನಿಂದ ಖಟಕಚಿಂಚೋಳಿ ವರೆಗೂ ಸುಮಾರು ಮೂರು ಗಂಟೆಗಳ ಕಾಲ ಬೈಕ್ ರ್‍ಯಾಲಿ ನಡೆಯಿತು.

ಭಾಗ್ಯನಗರ ಕ್ರಾಸ್ ಬಳಿ ಸಾವಿರಾರು ಕಾರ್ಯಕರ್ತರು ಜಮಾಯಿಸಿ ಶಾಸಕ ಈಶ್ವರ ಖಂಡ್ರೆ ಬೃಹತ್ ಗಾತ್ರದ ಹಾರ ಮತ್ತು ಕಂಬಳಿ ಹೊದಿಸಿ ಸನ್ಮಾನಿಸಿದರು. ಬಳಿಕ ಎತ್ತಿನ ಬಂಡಿಯಲ್ಲಿ ಅವರನ್ನು ಮೆರವಣಿಗೆ ಮಾಡಿದರು.

ಹುಗ್ಗೇಳಿ ಮಠದ ಬಸವಲಿಂಗ ಸ್ವಾಮೀಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟೆ, ಮಾಜಿ ಅಧ್ಯಕ್ಷ ಬಸವರಾಜ ಬುಳ್ಳಾ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಮಾಶೆಟ್ಟೆ, ಮಲ್ಲಿಕಾರ್ಜುನ ಪಾಟೀಲ ಮುಗನೂರ್, ದತ್ತಾತ್ರಿ ಮೂಲಗೆ, ತಾಲ್ಲೂಕು ಅಧ್ಯಕ್ಷ ಹಣಮಂತರಾವ್ ಚವ್ಹಾಣ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಅಮೃತರಾವ್ ಚಿಮಕೋಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಮಜಾ ಮಹ್ಮದಸಾಬ್ ಇದ್ದರು. ದೀಪಕ ಠಮಕೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT