ಭಾನುವಾರ, ಜನವರಿ 19, 2020
22 °C
ಪ್ರಚಲಿತ ವಿದ್ಯಮಾನದ ಮೇಲೆ ಬೆಳಕು ಚೆಲ್ಲಿದ ಕವನಗಳು

ಅಸಮಾನತೆಗೆ ಮೊಳೆ; ವಾತ್ಸಲ್ಯದ ಮಳೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪ್ರಚಲಿತ ರಾಜಕೀಯ ವಿದ್ಯಮಾನ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಇಂದಿಗೂ ಕೊನೆಗಾಣದ ಅಸಮಾನತೆ, ಮಾನವೀಯ ಮೌಲ್ಯಗಳ ಕುಸಿತ, ಮಾತೃ ವಾತ್ಸಲ್ಯ...
ಇಂತಹ ಹತ್ತು ಹಲವು ವಿಚಾರಗಳು ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ರಜತ ಕವಿ ಸಮ್ಮೇಳನದಲ್ಲಿ ಅನಾವರಣಗೊಂಡವು. ಅಷ್ಟೇ ಅಲ್ಲ, ನಾಡಿನ ವಿವಿಧೆಡೆಯಿಂದ ಬಂದಿದ್ದ ಕವಿಗಳಿಗೆ ತಮ್ಮ ಭಾವನೆ ಅಭಿವ್ಯಕ್ತಗೊಳಿಸಲು ವೇದಿಕೆಒದಗಿಸಿತು. ಸಾಹಿತ್ಯಾಸಕ್ತರ ಚರ್ಚೆಗೂ ಅನುವು ಮಾಡಿಕೊಟ್ಟಿತು.

ನನ್ನೂರ ಸಮಾಧಿಗಳು ಒಂದೂಂದು ಕಥೆ ಹೇಳುತ್ತವೆ ಗ್ರಹಿಸುವ ಮನಸ್ಸುಗಳಿರಬೇಕಷ್ಟೇ ಊರಿನಾಚೆಗಿನ ಅರಮನೆ ಕಣಗೆಲೆಗಳೇ ಅಲಂಕಾರ ಬಣ್ಣಮಾಸಿದ ಕಥೆಗಳ ವ್ಯಥೆ ಪಾಠವಷ್ಟೇ ಅಲ್ಲ, ಪ್ರತಿಯೊಬ್ಬ ಊಳಿಗಮಾನನಿಗೂ ಎಚ್ಚರಿಕೆ ಮೈಸೂರಿನ ದೊರೆಸ್ವಾಮಿ ಸಿದ್ದೇಗೌಡ್ರು ‘ಸಮಾಧಿಯ ಕಥೆಗಳು’ ಶೀರ್ಷಿಕೆಯಡಿ ಬರೆದ ಈ ಕವನವು ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿತು. ಹುಟ್ಟು ಹಾಗೂ ಸಾವಿನ ನಡುವಿನ ಅಂತರದಲ್ಲಿ ಯಾವುದೇ ವ್ಯಕ್ತಿ ತನ್ನ ಅಂತಸ್ತು, ಅಧಿಕಾರ, ದರ್ಪ ಮೆರೆದರೂ ಒಂದು ದಿನ ಎಲ್ಲರಂತೆ ಇಹಲೋಕ ತ್ಯಜಿಸಲೇಬೇಕಾಗುತ್ತದೆ. ಸತ್ತಾಗ ಸಂತೈಸುವುದು ಸಹಜವಾಗಿದೆ. ಊರೊಳಗೆ ಮೆರೆದ ವ್ಯಕ್ತಿ ಒಂದು ದಿನ ಊರ ಹೊರಗೆ ಸಮಾಧಿಯಾಗುತ್ತಾನೆ.

ಸತ್ತ ಮೇಲೆ ಎಲ್ಲರಿಗೂ ಒಂದೇ ಜಾಗ. ಹೀಗಾಗಿ ಬದುಕಿದ್ದಾಗಲೇ ಉತ್ತಮ ಕೈಂಕರ್ಯ ಮಾಡು ಎನ್ನುವ ಸಂದೇಶ ನೀಡಿತು. ಅತ್ತ ಭೋರ್ಗರೆತ, ಇತ್ತ ಬಿಸಿಲುರಿತ ಅತ್ತ ರೌದ್ರ, ಇತ್ತ ಘನಘೋರ ಅತ್ತ ಜಲದೇವಿ ದೈತ್ಯಾಕಾರ, ಇತ್ತ ಅವಳಿಗಾಗಿ ಹಾಹಾಕಾರ ಅತ್ತ ಎಗ್ಗಿಲ್ಲದ ಜೀವಾಹುತಿ, ಇತ್ತ ನೆಲೆಗಾಣದ ಆತ್ಮಾಹುತಿ
ಮುಗುದ ಜೀವಗಳ ಜೀವನ್ಮರಣಗಳ ಜೀಕಾಟವ ಕಂಡು ಮನದೊಳಗಿನ ಕವಿತೆಯೊಂದು ತತ್ತರಿಸಿದೆ

ಬೀದರ್‌ನ ಅಕ್ಕಮಹಾದೇವಿ ಹಾರೂರಗೇರಿ ಅವರು ‘ಅವಳ ಮುನಿಸಿಗೆಲ್ಲಿಯ ಮಾನದಂಡ? ಶೀರ್ಷಿಕಡಿಯಲ್ಲಿ ಬರೆದ ಕವನವು ಸಾಹಿತ್ಯಾಸಕ್ತರ ಗಮನ ಸೆಳೆಯಿತು. ಪ್ರಕೃತಿಯ ವೈಚಿತ್ರವನ್ನು ಕವನದ ಸಾಲುಗಳಲ್ಲಿ ಹಿಡಿದಿಟ್ಟಿದ್ದು ವಿಶೇಷವಾಗಿತ್ತು.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ನದಿ, ಹಳ್ಳಕೊಳ್ಳಗಳು ಉಕ್ಕಿ ಹರಿದವು. ಮಳೆಯ ಅಬ್ಬರ, ಕೆಲ ಜಿಲ್ಲೆಗಳಲ್ಲಿ ಜನಸಾಮಾನ್ಯರ ಬದುಕನ್ನೇ ಕಸಿದುಕೊಂಡು ಬಿಟ್ಟಿತು. ನೆರೆ ಸಂತಸ್ತರು ಬೀದಿಯಲ್ಲಿ ಬದುಕು ಸಾಗಿಸುವಂತಾಯಿತು. ಆದರೆ, ಬೀದರ್‌ನಲ್ಲಿ ಮಾತ್ರ ಉರಿ ಬಿಸಿಲು ಕಾಣಿಸಿಕೊಂಡು ಜನ ನೀರಿಗಾಗಿ ಅಲೆದಾಡುವಂತಾಯಿತು. ಪ್ರಕೃತಿಯ ರೌದ್ರ ನರ್ತನದಲ್ಲಿ ಕನಸುಗಳು ಕೊಚ್ಚಿಕೊಂಡು ಹೋದ ಬಗೆ ಹಾಗೂ ನೆರೆಯಲ್ಲಿ ಎಲ್ಲವನ್ನೂ ಕಳೆದುಕೊಂಡ ನಂತರದ ತಳಮಳದ ಭಾವವನ್ನು ಕವನಗಳಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟರು.

ದಾವಣಗೆರೆಯ ಗೀತಾ ಮಂಜು ಅವರ ‘ಕಾಯುತ್ತಿರುವೆ ಕಂದ’ ಶೀರ್ಷಿಕೆಯ ಕವನವು ಮಾತೃಹೃದಯವನ್ನು ಅನಾವರಣಗೊಳಿಸಿತು. ಮಕ್ಕಳು ಎಷ್ಟೇ ದೊಡ್ಡವರಾಗಿ ಬೆಳೆದರೂ ತಾಯಿಯ ಪಾಲಿಗೆ ಕಂದಮ್ಮಗಳೇ. ಬದುಕಿನ ಕೊನೆಯ ಕ್ಷಣಗಳನ್ನು ಕಳೆಯುವ ವೃದ್ಧ ತಾಯಿಗೆ ತಮ್ಮವರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯಬೇಕು ಎನ್ನುವ ಆಸೆ. ಮಕ್ಕಳು ಹೆತ್ತವರನ್ನು ಬಿಟ್ಟು ದೂರಾಗಿಸಿದಾಗ ಇಳಿವಯಸ್ಸಿನ ಜೀವಗಳು ಪಡುವ ಯಾತನೆ ಅವರ ಕವನಗಳಲ್ಲಿ ಬಿಂಬಿಸಿತು.

ಬರಲೇಬೇಕೆಂದು ನಾವು ಬರಲಿಲ್ಲ ಹುಟ್ಟಿ
ಹುಟ್ಟುತ್ತಲೇ ಕಟ್ಟಿದಿರಿ ಜಾತಿಯ ಹಣೆಪಟ್ಟಿ
ಜಗದ ನಿಂದನೆಯಲಿ ಈ ಜೀವ ಸವೆಸಿ
ಬದುಕಿದ್ದೇವೆ ನೋವು ಅನುಭವಿಸಿ

ಎಂದು ಬೀದರ್‌ನ ಬಸವರಾಜ ದಯಾಸಾಗರ ಅವರು ‘ಸಾವಿಲ್ಲದ ನೋವುಗಳು’ ಶೀರ್ಷಿಕೆಯಡಿ ಬರೆದ ಕವನವು ಮನುಕುಲದಲ್ಲಿ ಜನಿಸಿದರೂ ಜಾತಿಹಣೆಪಟ್ಟಿ ಕಟ್ಟಿ ಸಮುದಾಯಗಳನ್ನು ಕೀಳು
ದೃಷ್ಟಿಯಿಂದ ನೋಡುವ ಜನರಿಗೆ ಮಾನವೀಯತೆಯ ಪಾಠ ಹೇಳುವಂತಿತ್ತು.

ಬೆತ್ತಲೆಯ ಬೆನ್ನಿನ ಮೇಲೆ, ನೂರೊಂದು
ಶಾಯರಿಗಳನ್ನು ಬರೆಯುತ್ತೇನೆಂದು
ಮಾತನ್ನು ಕೊಟ್ಟಿದ್ದೆಯಲ್ಲ ಗಾಲಿಬ್...
ಕತ್ತಲಲಿ ರಸಿಕರು ಗೀರಿಟ್ಟು ಹೋದ ಮೆರೆಗಳ
ನೋವಿದೆ, ತಣ್ಣಗಾಗಬೇಕವು.... ಚೂರಾದರು,
ನೀ ಬರೆವ ಸಾಲುಗಳಿಗೆ...

ಗಜೇಂದ್ರಗಡದ ಶರಣಪ್ಪ ಕ ಬೇವಿನಕಟ್ಟೆ ಅವರು ‘ಕಜಲ್’ ಶೀರ್ಷಿಕೆಯಡಿಯಲ್ಲಿ ಬರೆದ ಕವನವು ಹೆಣ್ಣಿನ ನೋವು ನಲಿವಿನ ಚಿತ್ರಣ ನೀಡಿತು. ಕವಿಗಳು ಹೆಣ್ಣನ್ನು ವರ್ಣಿಸಿ, ವೈಭವೀಕರಿಸಿ ಶಾಯರಿಗಳನ್ನು ಬರೆದರೂ ಅವಳ ಬದುಕು ವಾಸ್ತವಗಿಂತ ಭಿನ್ನವಾಗಿದೆ. ಶೀಲ, ನೈತಿಕತೆ ಅವಳನ್ನು ಸುತ್ತಿಕೊಂಡಿದೆ. ಅವಳಿಗಿಲ್ಲ ಸ್ವಂತಿಕೆ ಎನ್ನುವ ಕಟು ಸತ್ಯವನ್ನು ತಮ್ಮ ಕವನಗಳ ಸಾಲಿನಲ್ಲಿ ಬಿಂಬಿಸಿದರು.

ಮೂಕನ ಮೌನದೊಳಗಿನ ಮೌನ
ಅದೆಂತದಿರಬಹುದು ಹರ
ಹರಿಯ ನಾಬಿಯ ಪುಷ್ಪದ ಪಕಳಿ ಉದುರಿದರೆ
ಸದ್ದಾಗುವ ಮೌನ
ಬ್ರಹ್ಮ ನಿನ್ನ ಕಮಲ
ಅರಳುವಾಗ ಆನಂದಿಸುವ ಮೌನ
ಜೀವ ಸೃಷ್ಟಿಗೆ ಸದ್ದಾಗಲೇಬೇಕಲ್ಲ..!
ಎಲ್ಲಿಯ ಮೌನ..?

ಎಂದು ದಾವಣಗೆರೆಗೆ ಪಾಪುಗುರು (ಗುರುಬಸವರಾಜ) ರಚಿತ ‘ಮೌನ’ ಶೀರ್ಷಿಕೆಯ ಕವನ ಆಡಳಿತ ಅವವ್ಯಸ್ಥೆಯ ಹಿಂದಿನ ಆಕ್ರೋಶ ಧ್ವನಿ ಕಳೆದುಕೊಂಡಿರುವುದನ್ನು ಬಿಂಬಿಸಿತು. ಮೌನಕ್ಕೂ ಒಂದು ಮಿತಿ ಇದೆ. ಆದರೆ, ಇಲ್ಲಿ ಬ್ರಹ್ಮಾಂಡವೇ ಶೂನ್ಯ ಎನ್ನುವಂತಹ ಮೌನ ಆವರಿಸಿದೆ. ದುರಾಡಳಿತ ತಾಂಡವವಾಡುತ್ತಿದ್ದರೂ ಪ್ರತಿಭಟಿಸುವವರಲ್ಲಿ ಮೌನ ಮನೆಮಾಡಿರುವುದು ಅಭಿವ್ಯಕ್ತಿಯ ಅವನತಿಯ ಸಂಕೇತ ಎನ್ನುವ ರೀತಿಯಲ್ಲಿ ಬಿಂಬಿಸಿದರು.

ಕತ್ತಲಿನ ತೋರಣಕ್ಕೆ ಖಂದೀಲು
ಹಿಡಿದ ನನ್ನವ್ವನ ಕಂಡು
ಖಂದೀಲು ಬೀಗುತಿತ್ತು ಇಂದೇಕೋ
ತುಸು ಹೆಚ್ಚೆ ಬೆಳಕು ನಂದು...?
ಮನೆಯ ಆವರಣಕೆ ಹುಣ್ಣಿಮೆ
ಬೆಳದಿಂಗಳು ಬಂದಂತೆ ಕಂಡು.
ಅವ್ವನತ್ತ ದಿಟ್ಟಿಸಿದೆ ಅಪ್ಪನಿಟ್ಟ ಸಿಂಧೂರ
ಚಂದ್ರನಾಗಿತ್ತು ಅಂದು...!

ಎಂದು ಭಾಲ್ಕಿಯ ರಾಜೇಶ ಶಿಂಧೆ ರಚಿತ ‘ಅಮ್ಮ’ ತಲೆಬಹರದ ಕವನವು ಸುಂದರ ಬದುಕಿಗೆ ದಾರಿ ತೋರುವ ಅಮ್ಮನ ಮಹತ್ವವನ್ನು ಉಲ್ಲೇಖಿಸಿತು. ಬಾಳ ಬೆಳಗುವ ಅಮ್ಮನ ಮುಂದೆ ಎಲ್ಲವೂ ಗೌಣ.
ಮಕ್ಕಳ ಪಾಲಿಗೆ ಇಲ್ಲಿ ತಾಯಿಯೇ ಸರ್ವಸ್ವ ಎಂದು ಉಲ್ಲೇಖಿಸುವ ಮೂಲಕ ತಾಯಿಯ ಮೇಲಿನ ಮಮತೆಯನ್ನು ಶ್ರದ್ಧೆಯಿಂದ ವಿವರಿಸಿದರು.

ನನ್ಹುಡಗನ ಮಾರಿ ಮ್ಯಾಲೆ ಮುನ್ನೂರು ನಕ್ಷತ್ರ
ನಲ್ಲ ಓಡಾಡೋದು ಬಲು ವಿಚಿತ್ರ
ಗೆಳತಿ ಮುಚ್ಚು ಮರೆ ಇಲ್ಲ ಅವನ್ಹತ್ರ .

ಎಂದು ಬೀದರ್‌ನ ಕವಯತ್ರಿ ಬಿ.ಜೆ.ಪಾರ್ವತಿ.ಸೋನಾರೆ ಅವರು ಗೆಳತಿಯೊಂದಿಗೆ ತನ್ನ ಗೆಳೆಯನ ಸ್ವಭಾವ ಹಾಗೂ ಪ್ರೀತಿಯನ್ನು ಹಂಚಿಕೊಂಡ ಬಗೆಯನ್ನು ‘ನನ್ನ ಹುಡುಗ’ ಶೀರ್ಷಿಕೆಯಲ್ಲಿ ಬರೆದ ಕವನದಲ್ಲಿ ಉಲ್ಲೇಖಿಸಿದರು.

ಕವಯತ್ರಿಯ ಪಾಲಿಗೆ ಪತಿ ಈಗಲೂ ಗೆಳೆಯನೇ. ಭಾವನೆಗಳನ್ನು ವ್ಯಕ್ತಪಡಿಸಲು ಬೇಕಿಲ್ಲ ಯಾವುದೇ ಗಡಿ. ಇದಕ್ಕೆ ಯಾವುದೇ ಅಡ್ಡಿ ಆತಂಕಗಳೂ ಇಲ್ಲ. ನಮ್ಮದು ದೇವನೇ ಇಚ್ಛೆಪಟ್ಟು ರೂಪಿಸಿದ ಜೋಡಿ ಎನ್ನುವಂತೆ ಸುಂದರ ಬದುಕಿನ ಚಿತ್ರಣ ನೀಡಿದರು.

ಕವಿ ಸಮ್ಮೇಳನದಲ್ಲಿ ಮೈಸೂರಿನ ರೋಷನ್‌ ಟೋಕ್ರಾ, ಪುಂಡಲೀಕ ನಾಯಕ, ಕೊಪ್ಪಳದ ಅಕ್ಬರ್, ಗಜೇಂದ್ರಗಡದ ಶರಣಪ್ಪ ಬೇವಿನಕಟ್ಟಿ, ಬೆಂಗಳೂರಿನ ಹರಿಣಿ, ಹೇಮಾ ದೇಶಪಾಂಡೆ, ಮಂಗಲಾ ಎನ್‌.ಎಂ., ಶಂಕರ ಆಂಕ, ತುಮಕೂರಿನ ಲತಾಮಣಿ ಎಂ.ಕೆ., ಜಗದೀಶ ದೇವಾಡಿಗ, ಬೆಳಗಾವಿಯ ಸುರೇಶ ಕೊರಕೊಪ್ಪರ,
ದಾವಣಗೆರೆಯ ಗುರುಬಸವರಾಜ್, ಬೀದರ್‌ನ ಶ್ರೇಯಾ ಮಹೇಂದ್ರಕರ್, ವಚನಶ್ರೀ ಮೈನಾಳೆ, ಎಂ.ಜಿ.ಗಂಗನಪಳ್ಳಿ, ರಾಮಚಂದ್ರ ಗಣಾಪುರ, ನಿಜಲಿಂಗ ರಗಟೆ, ಶೈಲಜಾ ಹುಡಗೆ ಹಾಗೂ ಮಾಣಿಕ ನೇಳಗಿ ಕವನ ವಾಚಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು